ಮಡಿಕೇರಿ: ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಂಪರ್ಕ ಹೊಂದಿರುವ ಪ್ರತಿ ಮನೆಗೂ ಅಡುಗೆ ಅನಿಲ ಸಿಲಿಂಡರ್ ಅನ್ನು ಪೂರೈಕೆ ಮತ್ತು ಬೇಡಿಕೆಗೆ ತಕ್ಕಂತೆ ಸರ್ಕಾರದ ನಿಯಮಾನುಸಾರ ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಡುಗೆ ಅನಿಲ ವಿತರಕರ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ದ ಸಾರಿರುವ ಸಮರ ತೀವ್ರಗೊಂಡಿರುವ ಪರಿಣಾಮವಾಗಿ ಅಡುಗೆ ಅನಿಲ ಪೂರೈಕೆ ಬಗ್ಗೆ ಸಾರ್ವಜನಿಕರಲ್ಲಿ ಒಂದು ರೀತಿಯ ಆತಂಕ ಉಂಟಾಗಿದ್ದು, ಇದನ್ನು ನಿವಾರಿಸಬೇಕು. ಆ ನಿಟ್ಟಿನಲ್ಲಿ ಯಾರೂ ಆತಂಕಕ್ಕೊಳಗಾಗದಂತೆ ಗೃಹ ಬಳಕೆ ಅಡುಗೆ ಅನಿಲವನ್ನು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು. ಸರ್ಕಾರ ಕಾಲ ಕಾಲಕ್ಕೆ ಹೊರಡಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಒಟ್ಟಾರೆ ಗ್ರಾಹಕರಿಗೆ ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ರೀತಿ ವ್ಯತ್ಯಯ ಉಂಟಾಗದಂತೆ ಗಮನಹರಿಸುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಎಲ್‌ಪಿಜಿ ವಿತರಕರು ದಾಸ್ತಾನು ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು, ಇಕೆವೈಸಿ ಆಗದೇ ಇರುವ ಗ್ರಾಹಕರಿಗೆ ತಕ್ಷಣವೇ ಇಕೆವೈಸಿ ಮಾಡಿಸಿಕೊಂಡು, ಅನಿಲ ಸಿಲಿಂಡರ್ ಸರಬರಾಜು ಮಾಡುವಂತೆ ಸಲಹೆ ನೀಡಿದರು.ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಕೃತಕ ಅಭಾವ ಸೃಷ್ಟಿಸುವುದು ಹಾಗೂ ಗ್ರಾಹಕರಿಂದ ಅನಧಿಕೃತವಾಗಿ ಹೆಚ್ಚಿನ ಹಣ ವಸೂಲಿ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಈ ಸಂದರ್ಭ ಆಹಾರ ಇಲಾಖೆ ಉಪ ನಿರ್ದೇಶಕ ಭೀಮರಾಯ ಅವರು ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳ ಆಹಾರ ನಿರೀಕ್ಷಕರು ಗ್ಯಾಸ್ ಏಜೆನ್ಸಿಗಳಿಗೆ ಹಾಗೂ ಹೋಟೆಲ್/ ಡಾಬಾಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುವುದರೊಂದಿಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರು.
ಗ್ಯಾಸ್ ಏಜೆನ್ಸಿಗಳಿಗೆ ನಿಯಮಿತ ಭೇಟಿ ನೀಡಿ ಎಫ್‌ಐಎಫ್‌ಒ ಪ್ರಕಾರ ಗ್ಯಾಸ್ ಸಿಲಿಂಡರ್‌ಗಳ ವಿತರಣೆ ಆಗುತ್ತಿರುವುದನ್ನು ಖಚಿತಪಡಿಸಿಕೊಂಡು ಮೇಲ್ವಿಚಾರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿ ವಸತಿ ನಿಲಯಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಇತರೆ ಆದ್ಯತಾ ಸಂಸ್ಥೆಗಳಿಗೆ ಆದ್ಯತಾ ಮೇರೆಗೆ ಅನಿಲ ಸಿಲಿಂಡರ್ ಗಳ ಪೂರೈಕೆ ಆಗುತ್ತಿರುವುದನ್ನು ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಕಾಲ ಕಾಲಕ್ಕೆ ಸರ್ಕಾರದಿಂದ ನೀಡಲಾದ ನಿರ್ದೇಶನಗಳನ್ನು ಒಎಂಸಿಗಳಿಗೆ ತಲುಪಿಸಿ, ಪಾಲನೆಗೆ ಕ್ರಮ ಮತ್ತು ಮೇಲ್ವಿಚಾರಣೆ ಮಾಡಲಾಗುವುದು ಎಂದರು.ಜಿಲ್ಲೆಯಲ್ಲಿರುವ ಐಒಸಿಎಲ್, ಬಿಪಿಸಿಎಲ್, ಎಚ್‌ಪಿಸಿಎಲ್ ಹೀಗೆ ವಿವಿಧ ಕಂಪನಿಯ ಒಟ್ಟು 18 ಗ್ಯಾಸ್ ಏಜೆನ್ಸಿಸ್ ಸಂಸ್ಥೆಗಳ ಪ್ರತಿನಿಧಿಗಳು, ಆಹಾರ ನಿರೀಕ್ಷಕರು ಇತರರು ಇದ್ದರು.....ಕೋಟ್....
ಆದ್ಯತೆ ಮೇರೆಗೆ ಹಾಗೂ ನಿಗಧಿತ ಅವಧಿಯೊಳಗಾಗಿ ಗೃಹಬಳಕೆ ಸಿಲಿಂಡರ್‌ಗಳ ಪೂರೈಕೆ ಮಾಡಬೇಕು, ಕಡ್ಡಾಯವಾಗಿ ಎಫ್‌ಐಎಫ್‌ಒ ಪ್ರಕಾರವೇ ಗೃಹಬಳಕೆ ಸಿಲಿಂಡರ್‌ಗಳ ವಿತರಣೆ ಮಾಡಬೇಕು.
-ಎಸ್.ಜೆ. ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ