ನೈಸಿಯಾ ವಿಶ್ವಾಸದ ಘೋಷಣೆ ಒಡಂಬಡಿಕೆಯ 1700ನೇ ವರ್ಷಾಚರಣೆ ಪ್ರಯುಕ್ತ ಗುರುವಾರ ಸಂಜೆ ಉಡುಪಿ ಯುಬಿಎಂ ಜುಬಿಲಿ ಮೆಮೋರಿಯಲ್ ಸಭಾಂಗಣದಲ್ಲಿ ಯುನೈಟೆಡ್ ಬಾಸೆಲ್ ಮಿಷನ್ ಚರ್ಚ್, ಉಡುಪಿ ಧರ್ಮಪ್ರಾಂತ್ಯದ ಐಕ್ಯತಾ ಆಯೋಗ ಮತ್ತು ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಗಳ ಜಂಟಿ ಆಶ್ರಯದಲ್ಲಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಐಕ್ಯತಾ ಪ್ರಾರ್ಥನಾ ಕೂಟ ಆಯೋಜಿಸಲಾಗಿತ್ತು.

ಉಡುಪಿ: ನೈಸಿಯಾ ವಿಶ್ವಾಸದ ಘೋಷಣೆ ಒಡಂಬಡಿಕೆಯ 1700ನೇ ವರ್ಷಾಚರಣೆ ಪ್ರಯುಕ್ತ ಗುರುವಾರ ಸಂಜೆ ಉಡುಪಿ ಯುಬಿಎಂ ಜುಬಿಲಿ ಮೆಮೋರಿಯಲ್ ಸಭಾಂಗಣದಲ್ಲಿ ಯುನೈಟೆಡ್ ಬಾಸೆಲ್ ಮಿಷನ್ ಚರ್ಚ್, ಉಡುಪಿ ಧರ್ಮಪ್ರಾಂತ್ಯದ ಐಕ್ಯತಾ ಆಯೋಗ ಮತ್ತು ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಗಳ ಜಂಟಿ ಆಶ್ರಯದಲ್ಲಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಐಕ್ಯತಾ ಪ್ರಾರ್ಥನಾ ಕೂಟ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತದಾರರಾದ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ಮಾತನಾಡಿ, ನೈಸಿಯಾ ವಿಶ್ವಾಸದ ಘೋಷಣೆ ಕ್ರೈಸ್ತ ಬಂಧುಗಳಿಗೆ ವಿಶ್ವಾಸದ ಅಡಿಪಾಯವಾಗಿದೆ. ಯಾವುದೇ ಸಭೆಗಳಿಗೂ ಸೇರಿದ್ದರೂ ವಿನಯ, ಪರಸ್ಪರ ಕ್ಷಮೆ ಮತ್ತು ಒಟ್ಟಾಗಿ ಪ್ರಾರ್ಥಿಸಿದಾಗ ಮಾತ್ರ ನಿಜವಾದ ಐಕ್ಯತೆ ಕಾಣಲು ಸಾಧ್ಯವಿದೆ. ಉಡುಪಿ ಪ್ರದೇಶದ ಕ್ರೈಸ್ತ ಸಭೆಗಳು ವಿವಿಧ ಪರಂಪರೆಯ ಸುಂದರ ತಾಣವಾಗಿದ್ದು ಇಲ್ಲಿ ಒಟ್ಟಾಗಿ ಒಂದಾಗಿ ಜೀವಿಸುವುದಲ್ಲದೆ ಒಂದಾಗಿ ಪ್ರಾರ್ಥಿಸುತ್ತೇವೆ, ಈ ಮೂಲಕ ವಿವಿಧತೆಯಲ್ಲಿ ಐಕ್ಯತೆಯನ್ನು ಕಂಡುಕೊಂಡಿದ್ದೇವೆ ಎಂದರು. ಚರ್ಚ್ ಆಫ್ ಸೌತ್ ಇಂಡಿಯಾ ಕರ್ನಾಟಕ ಸದರ್ನ್ ಡಯಾಸಿಸ್ ಧರ್ಮಾಧ್ಯಕ್ಷ ಹೇಮಚಂದ್ರ ಕುಮಾರ್ ಮಾತನಾಡಿ ನೈಸಿಯಾ ವಿಶ್ವಾಸದ ಘೋಷಣೆ ಕ್ರೈಸ್ತರು ದೇವರಲ್ಲಿ ಇಟ್ಟಿರುವ ವಿಶ್ವಾಸ ಭದ್ರ ಬುನಾದಿಯಾಗಿದ್ದು 1700 ವರ್ಷಗಳ ಬಳಿಕವೂ ಕ್ರೈಸ್ತರು ಒಟ್ಟಾಗಿ ಒಂದಾಗಿ ಬದುಕಲು ಪ್ರೇರೇಪಿಸುತ್ತಿದೆ. ನಮ್ಮ ಸಭೆಗಳಲ್ಲಿ ವಿಶ್ವಾಸದ ಸ್ತ್ರೋತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ನಮ್ಮಲ್ಲಿನ ಐಕ್ಯತೆಯನ್ನು ಭದ್ರಪಡಿಸಲು ಸಹಕಾರಿಯಾಗುತ್ತದೆ ಎಂದರು. ಗೋವಾ ಡಿವೈನ್ ಸ್ಪ್ರಿಂಗ್ ಧ್ಯಾನ ಮಂದಿರದ ಮುಖ್ಯಸ್ಥ ರೊವಲ್ ಶುಭದೀಪ್ ಡಿಸೋಜಾ ಮತ್ತು ಮಂಗಳೂರಿನ ಕರ್ನಾಟಕ ಥಿಯೋಲೋಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್. ಎಮ್. ವಾಟ್ಸನ್ ಅವರು ನೈಸಿಯಾ ವಿಶ್ವಾಸದ ಘೋಷಣೆಯ ಐತಿಹಾಸಿಕ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಸಂತೋಷ್ ಸ್ವಾಗತಿಸಿ, ಎಬನೇಜರ್ ಕ್ರಿಸ್ಟೋಫರ್ ಕರ್ಕಡ ವಂದಿಸಿದರು. ವಿಜಯ್ ಹಾರ್ವಿನ್ ಪ್ರಾರ್ಥಿಸಿದರು. ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.