ಮೋದಿ ಅವಧಿಯಲ್ಲಿ ಹೊಸ ಹೆದ್ದಾರಿ, ರೈಲ್ವೆ ಮಾರ್ಗ ಆಗಿಲ್ಲ

KannadaprabhaNewsNetwork |  
Published : Apr 22, 2025, 01:51 AM IST
21ಕೆಕೆಆರ್2:ಕುಕನೂರು ಪಟ್ಟಣದಲ್ಲಿ ಜರುಗಿದ ಕುಕನೂರು, ಯಲಬುರ್ಗಾ, ಗಜೇಂದ್ರಗಡ ಬೈಪಾಸ್ ಗಳ ಕಾಮಗಾರಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು. | Kannada Prabha

ಸಾರಾಂಶ

ಭಾನಾಪೂರ-ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ ಯೋಜನೆ ೨೦೧೪ರಲ್ಲಿ ಮಂಜೂರಾಗಿದೆ. ಅಂದು ಕೇಂದ್ರ ಸರ್ಕಾರದ ಭೂ ಸಾರಿಗೆ ಸಚಿವರಾಗಿದ್ದ ಆಸ್ಕರ್‌ ಫರ್ನಾಂಡಿಸ್ ಅವರ ಸಹಕಾರದಿಂದ ಹೆದ್ದಾರಿ ಮಂಜೂರಾತಿ ದೊರೆಯಿತು.

ಕುಕನೂರು:

ಪ್ರಧಾನಿ ನರೇಂದ್ರ ಮೋದಿ ಅವರ 11 ವರ್ಷದ ಅವಧಿಯಲ್ಲಿ ದೇಶದಲ್ಲಿ ಒಂದೇ ಒಂದು ನೂತನ ರಾಷ್ಟ್ರೀಯ ಹೆದ್ದಾರಿ, ನೂತನ ರೈಲ್ವೆ ಲೈನ್ ಮಂಜೂರು ಆಗಿಲ್ಲ. ಇಂದು ಭೂಮಿಪೂಜೆ ಮಾಡಿರುವುದು ಕಾಂಗ್ರೆಸ್‌ ಸರ್ಕಾರದ ಕಾಮಗಾರಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದಲ್ಲಿ ಜರುಗಿದ ಭಾನಾಫೂರ-ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿಯ ಕುಕನೂರು, ಯಲಬುರ್ಗಾ, ಗಜೇಂದ್ರಗಡ ಬೈಪಾಸ್ ಕಾಮಗಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೈಪಾಸ್ ಕಾಮಗಾರಿ 2.5 ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಹಿಂದಿನ ಬಿಜೆಪಿ ಸರ್ಕಾರ ಭೂಸ್ವಾಧೀನಕ್ಕೆ ಹಣ ನೀಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದ ಬಳಿಕ ₹ 48.5 ಕೋಟಿ ಮಂಜೂರಾಗಿದೆ ಎಂದರು.

ಬೈಪಾಸ್ ನಿರ್ಮಾಣದಿಂದ ಮಾದರಿ ರಸ್ತೆಗಳು ಕ್ಷೇತ್ರಕ್ಕೆ ಸಿಗಲಿವೆ. ಕಾತರಾಳದಿಂದ ಸಂಕನೂರು, ಯಲಬುರ್ಗಾ, ಬೇವೂರು ಮಾರ್ಗವಾಗಿ ಮ್ಯಾದನೇರಿ ಕ್ರಾಸ್ ವರೆಗೆ ಕಲ್ಯಾಣ ಪಥದಲ್ಲಿ ರಸ್ತೆ ಮಂಜೂರಾಗಿದೆ. ಭಾನಾಪೂರ-ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ ಯೋಜನೆ ೨೦೧೪ರಲ್ಲಿ ಮಂಜೂರಾಗಿದೆ. ಅಂದು ಕೇಂದ್ರ ಸರ್ಕಾರದ ಭೂ ಸಾರಿಗೆ ಸಚಿವರಾಗಿದ್ದ ಆಸ್ಕರ್‌ ಫರ್ನಾಂಡಿಸ್ ಅವರ ಸಹಕಾರದಿಂದ ಹೆದ್ದಾರಿ ಮಂಜೂರಾತಿ ದೊರೆಯಿತು ಎಂದ ಅವರು, ಗದಗ-ಕುಷ್ಟಗಿ ವರೆಗೆ ಮೇ ತಿಂಗಳಲ್ಲಿ ರೈಲು ಸಂಚರಿಸಲಿದೆ. ಓಡಿಸ್ಸಾ ಮಾದರಿ ಭಾನಾಪೂರ ಗೊಂಬೆ ಫ್ಯಾಕ್ಟರಿ ಬಳಿ ಇನ್ನೊಂದು ಕೌಶಲ್ಯಾಭಿವೃದ್ಧಿ ಕೇಂದ್ರ ಮಂಜೂರಾತಿ ಆಗಿದೆ ಎಂದು ಮಾಹಿತಿ ನೀಡಿದರು.

ಕುಕನೂರಿಗೆ ೧೦೦ ಹಾಸಿಗೆ ಆಸ್ಪತ್ರೆ ಮಂಜೂರಾಗಿದ್ದು, ಸದ್ಯ ೧೦ ಎಕರೆ ಭೂಮಿ ಬೇಕಾಗಿದೆ. ನ್ಯಾಯಾಲಯ, ತಹಸೀಲ್ದಾರ್ ಕಚೇರಿ, ಬುದ್ಧ-ಬಸವ-ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಕ್ಷೇತ್ರದಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದ್ದು, ಭೂಮಿ ಬೇಕಾಗಿದೆ. ಇದರಿಂದ ಈ ಭಾಗದ ನೀರಾವರಿಗೆ ಒತ್ತು ನೀಡಲು ಸಾಧ್ಯವಾಗುತ್ತದೆ ಎಂದರು.

ಕೇಂದ್ರ ಸರ್ಕಾರ ಜಿಲ್ಲೆಯಲ್ಲಿ ಇಂದಿಗೂ ಒಂದು ಹೊಸ ರೈಲ್ವೆ ಯೋಜನೆ ರೂಪಿಸಿಲ್ಲ. ಹಿಂದಿನ ಹಳೆಯ ಯೋಜನೆ ಮುಂದುವರಿಸಿಕೊಂಡು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಬೆಂಗಳೂರ ಕಡೆ ನೋಡುವ ರಸ್ತೆ, ಬೈಪಾಸ್ , ಬ್ರಿಡ್ಜ್ ಗಳನ್ನು ಯಲಬುರ್ಗಾ ಕ್ಷೇತ್ರದಲ್ಲಿ ನೋಡುತ್ತಿದ್ದೇವೆ. ತುಂಗಭದ್ರಾ ಜಲಾಶಯ ಸಮೀಪ ಇದ್ದಿದ್ದರೆ ಕ್ಷೇತ್ರವನ್ನು ರಾಯರಡ್ಡಿ ಅವರು ಸಂಪೂರ್ಣ ನೀರಾವರಿ ಕ್ಷೇತ್ರವಾಗಿಸುತ್ತಿದ್ದರು ಎಂದ ಅವರು, ರಾಜ್ಯ ಸಹ ರಾಯರಡ್ಡಿ ಅವರ ಆರ್ಥಿಕ ಶಿಸ್ತಿನ ಯೋಜನೆಯಿಂದ ಸುಭದ್ರವಾಗಿದೆ. ರಾಜ್ಯದ ಆರ್ಥಿಕ ಸಮರ್ಪಕ ನಿರ್ವಹಣೆಗೆ ಅವರ ಕೊಡುಗೆ ಅಪಾರವಾಗಿದೆ ಎಂದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ