ಹೊಸಪೇಟೆ: ಸಂಡೂರಿನ ಅರಣ್ಯ ಪ್ರದೇಶದಲ್ಲಿ ಎರಡು ಹೊಸ ಗಣಿಗಳಿಗೆ ಗುತ್ತಿಗೆ ನೀಡಲು ಸರ್ಕಾರಗಳು ಮುಂದಾಗಿರುವುದು ಸರಿಯಲ್ಲ. ಕೂಡಲೇ ಕುದುರೆಮುಖ ಕಬ್ಬಿಣದ ಅದಿರು ಕಂಪನಿ, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿಗೆ ಸಂಡೂರಿನ ಅರಣ್ಯ ಪ್ರದೇಶದಲ್ಲಿ ಗಣಿ ಗುತ್ತಿಗೆ ನೀಡುತ್ತಿರುವುದನ್ನು ಕೂಡಲೇ ರದ್ದುಪಡಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಒತ್ತಾಯಿಸಿದರು.
ಕೆಐಒಸಿಎಲ್‌ಗೆ 401 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದ 99,330 ಮರಗಳ ಮಾರಣಹೋಮ ನಡೆಯಲಿದೆ. ಇನ್ನು ವಿಐಎಸ್‌ಎಲ್‌ಗೆ 60.7 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತಿದೆ. ಇದರಿಂದ 29,400 ಮರಗಳ ಮಾರಣಹೋಮ ನಡೆಯಲಿದೆ. ಶ್ರೀಗಂಧ, ಔಷಧೀಯ ಮರಗಳು ಸೇರಿದಂತೆ ಜೀವವೈವಿಧ್ಯತೆಗೆ ಕೊಡಲಿ ಏಟು ಬೀಳಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತು ಈ ಗಣಿ ಗುತ್ತಿಗೆಗಳನ್ನು ರದ್ದುಪಡಿಸಬೇಕು. ಸಿ-ಕೆಟಗರಿಯ ಗಣಿಗಳಲ್ಲಿ ಪರಿಸರ ಸಂರಕ್ಷಣೆಯೊಂದಿಗೆ ಗಣಿಗಾರಿಕೆ ಮಾಡಬಹುದು. ಆದರೆ, ಕಾಡನ್ನೇ ನಾಶ ಮಾಡಿ ಗಣಿಗಾರಿಕೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ವರದಿ ಪರಿಶೀಲಿಸದೇ ತರಾತುರಿಯಲ್ಲಿ ಕೆಐಒಸಿಎಲ್‌ಗೆ ಗಣಿ ಗುತ್ತಿಗೆ ನೀಡಿದ್ದಾರೆ. ಅರಣ್ಯ ಅಧಿಕಾರಿಗಳು 10 ಡಿಸಿಎಫ್ ಅರಣ್ಯ, ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ವರದಿ ನೀಡಿದ್ದಾರೆ. ಇದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಗಣಿಗಾರಿಕೆಗೆ ಪರವಾನಗಿ ನೀಡಿರುವುದು ಸರಿಯಲ್ಲ. ವಿಐಎಸ್‌ಎಲ್ ಗಣಿ ಗುತ್ತಿಗೆ ಕುರಿತು ಆಗಸ್ಟ್‌ನಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗೆ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಈ ಭಾಗದ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದರು.ಸಮಾಜ ಪರಿವರ್ತನಾ ಸಮುದಾಯದ ಶ್ರೀಶೈಲ ಆಲ್ದಹಳ್ಳಿ, ಜಿ.ಕೆ. ನಾಗರಾಜ, ಸಯ್ಯದ್ ಹೈದರ್ ಇದ್ದರು.