ಲಕ್ಷ್ಮೇಶ್ವರ: ಪಟ್ಟಣದಲ್ಲಿ ಯುವಕರಿಗೆ ಆಟವಾಡಲು ಯಾವುದೇ ಕ್ರೀಡಾಂಗಣ ಇಲ್ಲ. ಪ್ರಜಾಸೌಧ ನಿರ್ಮಾಣಕ್ಕೆ ಆಯ್ಕೆ ಮಾಡಿದ ಜಾಗೆ ಉಮಾ ವಿದ್ಯಾಲಯದ ಕ್ರೀಡಾಂಗಣದ ಪಕ್ಕದಲ್ಲಿ ಇರುವುದರಿಂದ ಆ ಜಾಗೆಯು ಕ್ರೀಡಾಂಗಣಕ್ಕೆ ಅವಶ್ಯಕತೆ ಇರುವುದರಿಂದ ಕಂದಾಯ ಇಲಾಖೆಯು ಕ್ರೀಡಾಂಗಣಕ್ಕೆ ಅವಶ್ಯವಾಗಿರುವ ಜಾಗೆ ಬಿಟ್ಟು ಉಳಿದ ತಮ್ಮ ಜಾಗೆಯಲ್ಲಿ ಪ್ರಜಾ ಸೌಧ ನಿರ್ಮಿಸಲು ಮುಂದಾಗಬೇಕು ಎಂದು ಮಹೇಶ ಹೊಗೆಸೊಪ್ಪಿನ ಆಗ್ರಹಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ನಂತರ ಪುರಸಭೆಗೆ ನೂತನವಾಗಿ ಆಯ್ಕೆಯಾದ ಸದಸ್ಯೆ ಹಾಗೂ ನಾಮನಿರ್ದೇಶನಗೊಂಡ ಸದಸ್ಯರನ್ನು ಸನ್ಮಾನಿಸಲಾಯಿತು.
ನಂತರ ನಡೆದ ಚರ್ಚೆಯಲ್ಲಿ ಪುರಸಭೆಯ ವ್ಯಾಪ್ತಿಯಲ್ಲಿನ ಕಂದಾಯ ಇಲಾಖೆಗೆ ಸೇರಿದ ಹಾಗೂ ಪುರಸಭೆಯ ಉಮಾ ವಿದ್ಯಾಲಯದ ಪಕ್ಕದಲ್ಲಿನ 2.34 ಎಕರೆ ಜಾಗೆಯಲ್ಲಿ ಪ್ರಜಾಸೌಧ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ, ಅದಕ್ಕಾಗಿ ಪುರಸಭೆಯ ಸದಸ್ಯರು ಒಪ್ಪಿಗೆನೀಡಿ ಠರಾವು ಪಾಸು ಮಾಡಿ ಸರ್ಕಾರಕ್ಕೆ ಕಳಿಸಬೇಕಿದೆ ಎಂದು ಸಭೆಗೆ ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.ಈ ವೇಳೆ ಹಾಜರಿದ್ದ ಎಲ್ಲ ಸದಸ್ಯರು ತಾಲೂಕಿನಲ್ಲಿ ಯಾವುದೇ ಕ್ರೀಡಾಂಗಣ ಇಲ್ಲ. ಹೀಗಾಗಿ ಪ್ರಜಾಸೌಧ ನಿರ್ಮಾಣಕ್ಕೆ ಯಾವುದೇ ಅಭ್ಯಂತರವಿಲ್ಲ, ಆದರೆ ತಾಲೂಕಿನ ಕ್ರೀಡಾಪಟುಗಳಿಗೆ ಹಾಗೂ ಯುವಕರು ಕ್ರೀಡಾ ಚಟುವಟಿಕೆ ಮಾಡಲು ಜಾಗೆಯ ಕೊರತೆ ಇದೆ. ಆದ್ದರಿಂದ ತಾಲೂಕು ಕ್ರೀಡಾಂಗಣಕ್ಕೆ ಅವಶ್ಯವಾಗಿರುವ ಜಾಗೆ ಬಿಟ್ಟು ಉಳಿದ ಜಾಗೆಯಲ್ಲಿ ಪ್ರಜಾಸೌಧ ನಿರ್ಮಿಸಲು ಮುಂದಾಗಬೇಕು ಎಂದು ಹೇಳಿದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಮಾತನಾಡಿದರು. ಸಭೆಯಲ್ಲಿ ಸರ್ವ ಸದಸ್ಯರು ಇದ್ದರು.
ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಸೇರಿದಂತೆ ಪುರಸಭೆಯ ಸಿಬ್ಬಂದಿ ಇದ್ದರು.ಪೊಟೋ-ಪುರಸಭೆಯ ನೂತನ ಸದಸ್ಯರಿಗೆ ಸನ್ಮಾನಿಸಲಾಯಿತು.