ಕೊಳವೆಬಾವಿ ಕೊರೆಯಲುನಿರಪೇಕ್ಷಣಾ ಪತ್ರ ಕಡ್ಡಾಯ: ಡೀಸಿ ಬಸವರಾಜು

KannadaprabhaNewsNetwork |  
Published : Apr 18, 2025, 12:38 AM IST

ಸಾರಾಂಶ

ಅಂತರ್ಜಲ ಮೌಲೀಕರಣದ ವರದಿ ಪ್ರಕಾರ ಜಿಲ್ಲೆಯಲ್ಲಿರುವ ನಾಲ್ಕು ತಾಲೂಕುಗಳನ್ನು ಅಂತರ್ಜಲ ಅತಿ ಬಳಕೆ ತಾಲೂಕುಗಳೆಂದು ವರ್ಗೀಕರಿಸಲಾಗಿದ್ದು, ಜಿಲ್ಲೆಯಲ್ಲಿ ಪ್ರಸ್ತುತ ಇರುವ ಹಾಗೂ ಹೊಸದಾಗಿ ಪ್ರಾರಂಭಿಸುವ ಕೈಗಾರಿಕೆ, ವಾಣಿಜ್ಯ, ಗಣಿಗಾರಿಕೆ, ಮನೋರಂಜನೆ ಉದ್ದೇಶಕ್ಕಾಗಿ ಅಂತರ್ಜಲ ಬಳಸುವವರು ಅಂತರ್ಜಲ ಪ್ರಾಧಿಕಾರದಿಂದ ನಿರಪೇಕ್ಷಣಾ ಪತ್ರ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಅಂತರ್ಜಲ ಮೌಲೀಕರಣದ ವರದಿ ಪ್ರಕಾರ ಜಿಲ್ಲೆಯಲ್ಲಿರುವ ನಾಲ್ಕು ತಾಲೂಕುಗಳನ್ನು ಅಂತರ್ಜಲ ಅತಿ ಬಳಕೆ ತಾಲೂಕುಗಳೆಂದು ವರ್ಗೀಕರಿಸಲಾಗಿದ್ದು, ಜಿಲ್ಲೆಯಲ್ಲಿ ಪ್ರಸ್ತುತ ಇರುವ ಹಾಗೂ ಹೊಸದಾಗಿ ಪ್ರಾರಂಭಿಸುವ ಕೈಗಾರಿಕೆ, ವಾಣಿಜ್ಯ, ಗಣಿಗಾರಿಕೆ, ಮನೋರಂಜನೆ ಉದ್ದೇಶಕ್ಕಾಗಿ ಅಂತರ್ಜಲ ಬಳಸುವವರು ಅಂತರ್ಜಲ ಪ್ರಾಧಿಕಾರದಿಂದ ನಿರಪೇಕ್ಷಣಾ ಪತ್ರ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.

ಪ್ರಸ್ತುತ ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಕುಡಿಯುವ ನೀರು, ಕೃಷಿ ಕಾರ್ಯ, ದಿನ ಬಳಕೆಯ ನೀರಿನ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಹೆಚ್ಚಿನ ಕೊಳವೆ ಬಾವಿ, ಕೆರೆ, ಜಲಾಶಯಗಳು ಬತ್ತಿ ಹೋಗಿದ್ದು, ಉಳಿದ ನೀರಿನ ಸಂರಕ್ಷಣೆ ಆಗಬೇಕಿದೆ. ಆದ್ದರಿಂದ ಕೈಗಾರಿಕೆ, ವಾಣಿಜ್ಯ, ಗಣಿಗಾರಿಕೆ, ಮನೋರಂಜನೆ ಉದ್ದೇಶಕ್ಕಾಗಿ ಅಂತರ್ಜಲ ಬಳಸುವವರು ಬಿದ್ದಂತಹ ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಕಡ್ಡಾಯ ಅಂತರ್ಜಲ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಮತ್ತೆ ಮಳೆ ಆರಂಭವಾಗುವವರೆಗೂ ನೀರನ್ನು ಮಿತವಾಗಿ ಪೋಲಾಗದಂತೆ ಬಳಸಬೇಕು ಎಂದು ಹೇಳಿದರು.

ಕೊಳವೆಬಾವಿ ಕೊರೆಯುವ ಮಾಲೀಕರು ಕಡ್ಡಾಯ ತಾವು ಹೊಂದಿದ ರಿಗ್ ಯಂತ್ರಗಳನ್ನು ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಾಯಿಸಿ ನಮೂನೆ-7ಎ ಪಡೆದು ಕೊಳವೆಬಾವಿ ಕೊರೆಯಬೇಕು. ಕೊರೆದ ಕೊಳವೆಬಾವಿ ವಿಫಲವಾದರೆ ಸಂಬಂಧಪಟ್ಟ ಜಮೀನು ಮಾಲೀಕರು ಹಾಗೂ ರಿಗ್ ಮಾಲೀಕರು ಅದನ್ನು ಸುರಕ್ಷಿತವಾಗಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ಇದರಿಂದ ತೆರೆದ ವಿಫಲ ಕೊಳವೆಬಾವಿಗಳಿಗೆ ಚಿಕ್ಕ ಮಕ್ಕಳು ಬೀಳುವ ಸಂಭವ ಅಥವಾ ಇನ್ನಿತರ ಅವಘಡಗಳನ್ನು ತಪ್ಪಿಸಬಹುದು. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಕೊಳವೆಬಾವಿ ಕೊರೆಯುವ ಮುನ್ನ ಸಂಬಂಧಪಟ್ಟ ಜಮೀನು ಮಾಲೀಕರು ಕಡ್ಡಾಯ ಸ್ಥಳೀಯ ಗ್ರಾಪಂ/ಪಟ್ಟಣ ಪಂ./ನಗರಸಭೆ/ಪುರಸಭೆಗೆ ತಿಳಿಸಿ ನಿರಪೇಕ್ಷಣಾ ಪತ್ರ ಪಡೆದು ನಂತರ ಜಿಲ್ಲಾ ಅಂತರ್ಜಲ ಕಚೇರಿಗೆ ಅರ್ಜಿ ಸಲ್ಲಿಸಿ ಕೊಳವೆಬಾವಿ ಕೊರೆಯಲು ನಿಯಮಾನುಸಾರ ಅನುಮತಿ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂತರ್ಜಲ ಕಚೇರಿ, ಅಂತರ್ಜಲ ನಿರ್ದೇಶನಾಲಯ ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಹೇಳಿದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು