ಕನ್ನಡಪ್ರಭ ವಾರ್ತೆ ಬನ್ನೂರು
ವಯಸ್ಸು 78ರ ಆಸುಪಾಸಾದರೂ ಇವರ ಕಂಠದಿಂದ ಸುಮಧುರ ಜಾನಪದ ಗೀತೆಗಳು ಹರಿದುಬರುತ್ತದೆ. ಸ್ಮೃತಿಪಟಲದ ಸ್ಮರಣ ಶಕ್ತಿಯು ಅಗಾಧವಾಗಿದ್ದು ನಿರಂತರವಾಗಿ ಹಾಡುವ ಕಲೆಗಾರಿಕೆಯನ್ನು ಹೊಂದಿರುವ ಬೀಡನಹಳ್ಳಿ ಜಾನಪದಕಲಾವಿದೆ ಪುಟ್ಟಸಿದ್ದಮ್ಮ ತನಗೆ ವಯಸ್ಸಾದರೂ ಕಲೆಗೆ ವಯಸ್ಸಾಗಿಲ್ಲ ಎನ್ನುವುದನ್ನು ತೋರಿಸಿದ್ದಾರೆ.ಪಟ್ಟಣದ ಸಮೀಪದ ಬೀಡನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಪುಟ್ಟಸಿದ್ದಮ್ಮ ಓರ್ವ ಜಾನಪದ ಕಲಾವಿದೆಯಾಗಿದ್ದು, ಜನಪದಗೀತೆ, ಲಾವಣಿ, ಜೋಗುಳದ ಹಾಡು, ವಚನಗಳು, ಸೋಬಾನೆ ಪದಗಳು ಇವರ ಕಂಠದಿಂದ ನಿರಂತರವಾಗಿ ಹೊರಹೊಮ್ಮಿಸುವ ಕೌಶಲಗಳಿಸಿದ್ದು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ನಡೆಯುವ ಕಾರ್ಯಕ್ರಮಗಳು, ಊರ ಹಬ್ಬ ಹರಿದಿನಗಳು, ಸುತ್ತೂರ ಜಾತ್ರಾ ಮಹೋತ್ಸವ, ಮುಡುಕುತೊರೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಸೆಳೆದಿದ್ದಾರೆ.
ಓದಿದ್ದು ಕಡಿಮೆಯಾದರು ತನ್ನ ತಂದೆ ಓರ್ವ ಜನಪದ ಕಲಾವಿದರಾಗಿದ್ದರಿಂದ ಅದರಲ್ಲಿ ಆಸಕ್ತಿ ಬೆಳೆಸಿಕೊಂಡ ಪುಟ್ಟಸಿದ್ದಮ್ಮ ಗಂಡನ ಮನೆಯಲ್ಲಿ ಅತ್ತೆಯು ಜನಪದಗೀತೆ ಹೇಳುತ್ತಿದ್ದುದರಿಂದ ತನ್ನ ಆಸಕ್ತಿ ಹೆಚ್ಚಿಸಿಕೊಂಡು ಅವರೊಟ್ಟಿಗೆ ಹಾಡಲು ಆರಂಭಿಸಿದ್ದು, ಸಾವಿರಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೆಮ್ಮೆ ಗಳಿಸಿದ್ದಾರೆ.ಬಾನುಲಿ ಕಾರ್ಯಕ್ರಮದಲ್ಲಿಯೂ ಹಾಡುವುದರೊಂದಿಗೆ ಅನೇಕ ಅಭಿಮಾನಿ ಬಳಗವನ್ನೇ ಹೊಂದಿರುವ ಈಕೆಗೆ ಅಲ್ಲಲ್ಲಿ ನಡೆಯುವ ಸಣ್ಣಪುಟ್ಟ ಸನ್ಮಾನ, ಅಭಿನಂದನ ಪತ್ರಗಳು ದೊರಕಿದೆಯೇ ವಿನಃ ಅಧಿಕಾರಿಗಳನ್ನು ಗುರುತಿಸುತ್ತಿಲ್ಲ ಎನ್ನುವ ನೋವು ಪುಟ್ಟಸಿದ್ದಮ್ಮನಿಗೆ ಇದೆ.
ಜನಪದಗೀತೆಗಳನ್ನು ಉಳಿಸಬೇಕು ಅದರ ಮೌಲ್ಯಗಳನ್ನು ಜನರಿಗೆ ತಲುಪುವಂತಾಗಬೇಕೆನ್ನುವ ಮಹಾದಾಸೆ ಹೊಂದಿರುವ ಪುಟ್ಟಸಿದ್ದಮ್ಮ ಗ್ರಾಮದ ತನ್ನ ಸ್ನೇಹಿತರು ಹಾಗೂ ಇತರೆ ಜಾನಪದ ಕಲಾವಿದರೊಂದಿಗೆ ಗ್ರಾಮದ ಕಾರ್ಯಕ್ರಮದಲ್ಲಿ ಜನಪದಗೀತೆಗಳನ್ನು ಹೇಳುವ ಹವ್ಯಾಸ ಹೊಂದಿದ್ದಾರೆ.ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾವಳಿಯಿಂದ ಮಕ್ಕಳು ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ದೂರ ಮಾಡುತ್ತಿದ್ದಾರೆ. ಅವರಿಗೆ ತಿಳಿ ಹೇಳುವ ಕೆಲಸ ಪೋಷಕರಿಂದ ಆಗಬೇಕು. ಮಕ್ಕಳಿಗೆ ಜಾನಪದ ಗೀತೆ, ಜಾನಪದ ವಿವಿಧ ಕಲೆಗಳಲ್ಲಿ ಆಸಕ್ತಿಯನ್ನುಂಟು ಮಾಡುವ ಕೆಲಸ ಮಾಡಬೇಕು.
ಪುಟ್ಟಸಿದ್ದಮ್ಮ ಮುಂದಿನ ದಿನಗಳಲ್ಲಿ ಕನ್ನಡರಾಜ್ಯೋತ್ಸವ ಪ್ರಶಸ್ತಿ ದೊರಕಿಸಿಕೊಡಲು ಕನ್ನಡ ಸಂಸ್ಕೃತಿ ಇಲಾಖೆಯವರು ಶಿಫಾರಸ್ಸು ಮಾಡಬೇಕು ಎಂದು ಜನಪದ ಕಲಾವಿದರು ಆಗ್ರಹಿಸಿದ್ದಾರೆ.----------------
eom/mys/dnm/