ಬೇರೆ ರಾಜ್ಯದವರು ಮರ ಕಡಿದರೂ ಕೇಳೋರೇ ಇಲ್ಲ

KannadaprabhaNewsNetwork |  
Published : Jul 19, 2026, 03:15 AM IST
ಫೋಟೋ 17ಪಿವಿಡಿ1ಇಡ್ಡಿಲು ಸುಡುವ ಹಿನ್ನಲೆ ಜೆ.ಅಚ್ಚಮ್ಮನಹಳ್ಳಿ ಗ್ರಾಮದ ದೊಡ್ಡ ಕೆರೆಯಲ್ಲಿ ಲಕ್ಷಾಂತರ ರುಗಳ ಮೌಲ್ಯದ ಜಾಲಿ ಮರ ಮರಣ ಹೋಮವಾಗಿವೆ.ಫೋಟೋ 17ಪಿವಿಡಿ2ಜೆ.ಅಚ್ಚಮ್ಮನಹಳ್ಳಿ ಗ್ರಾಮದ ದೊಡ್ಡ ಕೆರೆಯಲ್ಲಿ ವ್ಯಾಪಾರಿಯೊಬ್ಬರು ಬುಡಸಮೇತ ಮರಗಳ ಕಟಾವು ಮಾಡಿರುವುದು. | Kannada Prabha

ಸಾರಾಂಶ

ಒಂದು ಊರಿನಲ್ಲಿನ ಸರ್ಕಾರಿ ಆಸ್ತಿ ಯಾರಿಗೆ ಸಂಬಂಧಿಸಿದ್ದು ಎನ್ನುವುದನ್ನು ನಿರ್ಧಾರ ಮಾಡಬೇಕಾದ ಅಧಿಕಾರಿಗಳೇ ನಿರ್ಲಕ್ಷ್ಯ ತೋರಿದ್ದರಿಂದ ಬೇರೆ ರಾಜ್ಯದ ವ್ಯಾಪಾರಿಗಳು ಬಂದು ಮರಗಳನ್ನು ತೆರೆವು ಮಾಡಿ ರಾಜ್ಯಕ್ಕೆ ನಷ್ಟ ಮಾಡಿದ ಘಟನೆ ತಾಲೂಕಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಒಂದು ಊರಿನಲ್ಲಿನ ಸರ್ಕಾರಿ ಆಸ್ತಿ ಯಾರಿಗೆ ಸಂಬಂಧಿಸಿದ್ದು ಎನ್ನುವುದನ್ನು ನಿರ್ಧಾರ ಮಾಡಬೇಕಾದ ಅಧಿಕಾರಿಗಳೇ ನಿರ್ಲಕ್ಷ್ಯ ತೋರಿದ್ದರಿಂದ ಬೇರೆ ರಾಜ್ಯದ ವ್ಯಾಪಾರಿಗಳು ಬಂದು ಮರಗಳನ್ನು ತೆರೆವು ಮಾಡಿ ರಾಜ್ಯಕ್ಕೆ ನಷ್ಟ ಮಾಡಿದ ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಜೋಡಿ ಅಚ್ಚಮ್ಮನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೆರೆ ಅಂಗಳದಲ್ಲಿದ್ದ ನೂರಾರು ಜಾಲಿ ಮರಗಳನ್ನು ಬುಡಸಮೇತ ಕಡಿದ ಹಾಕಿದ್ದು, ಅಲ್ಲಿಯೇ ಅದಕ್ಕೆ ಬೆಂಕಿ ಹಚ್ಚಿ ಇದ್ದಿಲು ಸಿದ್ಧಪಡಿಸಿ ಮಾರಾಟ ಮಾಡಲಾಗಿದೆ.

ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಜೋಡಿ ಅಚ್ಚಮ್ಮನಹಳ್ಳಿ ದೊಡ್ಡಕೆರೆ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿದ್ದು, ಕೆರೆಯಲ್ಲಿರುವ ಮರ, ಗಿಡ, ಸಸ್ಯವರ್ಗ ಮತ್ತು ಮಣ್ಣು ಇತರೆ ಸಂಪನ್ಮೂಲಗಳು ಸರ್ಕಾರದ್ದಾಗಿದೆ. ಜೋಡಿ ಅಚ್ಚಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 5 ರಿಂದ 6 ಸಾವಿರ ಕುರಿ, ಮೇಕೆಗಳಿದ್ದು,ಬೇಸಿಗೆ ಕಾಲದಲ್ಲಿ ಬಹುತೇಕ ಜಾನುವಾರುಗಳು ಈ ಕೆರೆಯ ಜಾಲಿ ಸೊಪ್ಪು ಮತ್ತು ಮೇವನ್ನು ಅವಲಂಬಿಸಿವೆ. ಮರಗಳನ್ನು ಕಟಾವು ಮಾಡಿರುವ ಕಾರಣ ಅಂತರ್‌ ಜಲ ಕುಸಿತವಾಗಿ ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಮೇವಿಲ್ಲದೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕುರಿಗಾಹಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ನಾವು ಪ್ರತಿ ವರ್ಷ ಒಂದು ಕುರಿ ಬ್ಯಾಚ್‌ಗೆ 10 ರಿಂದ 15 ಸಾವಿರ ರು.ಗಳನ್ನು ಕೆರೆ ಅಭಿವೃದ್ಧಿ ಸಮಿತಿಗೆ ನೀಡುತ್ತಿದ್ದೇವೆ. ಹಣ ಪಡೆದ ಮೇಲೂ ಈಗ ಸೊಪ್ಪು ಇಲ್ಲದ ಸ್ಥಿತಿ ಬಂದಿದೆ. ನಾವು ಎಲ್ಲಿಗೆ ಹೋಗಬೇಕು ಎಂದು ಮೆಗಲಪಾಳ್ಯ ಗ್ರಾಮದ ಕುರಿಗಾಹಿ ಶಿವಪ್ಪ ಅಳಲು ತೋಡಿಕೊಂಡರು. ಸರ್ಕಾರಿ ಸ್ವತ್ತನ್ನು ಖಾಸಗಿಯವರಿಗೆ ಮಾರಿ, ನೈಸರ್ಗಿಕ ಸಂಪನ್ಮೂಲ ನಾಶ ಮಾಡುತ್ತಿರುವ ಈ ಘಟನೆಗೆ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಗ್ರಾಪಂ ಹಾಗೂ ಜಿಪಂನ ಅನುಮತಿ ಪಡೆಯದೇ ಕೆರೆ ಅಭಿವೃದ್ಧಿ ಸಮಿತಿ ಎಂದು ಹೇಳಿಕೊಳ್ಳುತ್ತಿರುವ ಗ್ರಾಮದ ಕೆಲವರು ಮರಗಳನ್ನು ಮಹಾರಾಷ್ಟ್ರ ಮೂಲದ ಖಾಸಗಿ ವ್ಯಾಪಾರಿಗೆ ಮಾರಾಟ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನು ಖರೀದಿಸಿದ್ದ ವ್ಯಾಪಾರಿ ರಮೇಶ್, ಎನ್ನುವರು ರಾಜರೋಷವಾಗಿ ಕೆರೆಯಲ್ಲಿನ ಮರಗಳನ್ನು ಕಡಿದು ಸ್ಥಳದಲ್ಲೇ ಇದ್ದಿಲು ತಯಾರಿಸಿ ಹೆಚ್ಚಿನ ಲಾಭಕ್ಕೆ ಲಾರಿಗಳ ಮೂಲಕ ನಗರ ಪ್ರದೇಶಗಳಿಗೆ ಸಾಕಾಣಿಕೆ ಮಾಡುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಕೋಟ್‌...

ಜೋಡಿ ಅಚ್ಚಮ್ಮನಹಳ್ಳಿ ಗ್ರಾಮದ ಮುಖಂಡರೊಬ್ಬರು ಅನುಮತಿ ನೀಡಿದ್ದು ಅವರಿಗೆ ಹಣ ನೀಡಿದ್ದೇವೆ. ಹೀಗಾಗಿ ನಾವು ಮರ ಕಡಿದಿದ್ದೇವೆ. ನೀವು ಬೇಕಾದ್ದನ್ನು ಬರೆದುಕೊಳ್ಳಬಹುದು ಹಾಗೂ ದೂರು ನೀಡಬಹುದು.

-ರಮೇಶ್‌, ಮರ ಕಟಾವು ಮಾಡಿದ ವ್ಯಾಪಾರಿ

ಕೋಟ್‌....

ನೀವು ಯಾರಿಗೆ ಬೇಕಾದರೂ ದೂರು ಕೊಡಿ. ಇದು ನಮ್ಮ ಕೆರೆ ಅಭಿವೃದ್ಧಿ ಸಮಿತಿಗೆ ಸೇರಿದ ವಿಚಾರ. ಇದರಲ್ಲಿ ಸಮಿತಿಯ ನಿರ್ಣಯವೇ ಅಂತಿಮ. - ಲಿಂಗಣ್ಣ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ.

ಕೋಟ್‌...

ನಾನು ಈಗಲೇ ಸ್ಥಳಕ್ಕೆ ಭೇಟಿ ನೀಡಿದ್ದು ಕೆರೆಯು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇದು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಇದರ ಜವಾಬ್ದಾರಿ ಅವರಿಗೆ ಸೇರಿದ್ದು - ಮುದ್ದಣ್ಣ ಪಿಡಿಒ

ಕೋಟ್‌...

ತಾಲೂಕಿನ ಜೋಡಿ ಅಚ್ಚಮ್ಮನಹಳ್ಳಿ ಕೆರೆಯು ಜಿಪಂ ವ್ಯಾಪ್ತಿಗೆ ಒಳಪಟ್ಟಿದ್ದು, ಸ್ಥ‍ಳೀಯವಾಗಿ ಕೆರೆ ಅಭಿವೃದ್ಧಿ ಸಂಘ ಇದೆಯೋ ಇಲ್ಲವೋ ಗೊತ್ತಿಲ್ಲ. ಇದ್ದರೆ ಅದರ ಇತಿಮಿತಿ ಏನು ಎಂದು ಪರಿಶೀಲಿಸಿ ಯಾವ ಆಧಾರದ ಮೇಲೆ ಕೆರೆಯ ಜಾಲಿ ಮರ ಕಟಾವಿಗೆ ಅನುಮತಿ ನೀಡಿದ್ದಾರೆ ಎಂದು ತನಿಖೆ ಮಾಡಿ ಕ್ರಮ ಜರುಗಿಸುತ್ತೇವೆ.

- ಬಸವಲಿಂಗಪ್ಪ ಜಿಪಂ ಸಹಾಯಕ ಎಂಜಿನಿಯರ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಥಳೀಯ ಸಂಸ್ಥೆ ಚುನಾವಣೆಗೆ ಜೆಡಿಎಸ್ ಪೂರ್ವಸಿದ್ಧತೆ
ಅನಧೀಕೃತ ಶಾಲೆಗೆ ನೋಟಿಸ್‌!