ಜಿ.ಬಿ ಸಿಂಡ್ರೋಮ್ ರೋಗದ ಬಗ್ಗೆ ಯಾರಿಗೂ ಭಯ ಬೇಡ - ಮುನ್ನೆಚ್ಚರಿಕೆ ವಹಿಸಬೇಕು : ರಾಹುಲ್ ಶಿಂಧೆ

KannadaprabhaNewsNetwork |  
Published : Feb 22, 2025, 12:46 AM ISTUpdated : Feb 22, 2025, 12:30 PM IST
ಜಿಪಂ ಸಿಇಒ ರಾಹುಲ ಶಿಂಧೆ ಅವರು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿದರು | Kannada Prabha

ಸಾರಾಂಶ

ಜಿ.ಬಿ.ಸಿಂಡ್ರೋಮ್ (ಜಿಬಿಎಸ್‌) ರೋಗದ ಬಗ್ಗೆ ಭಯ ಬೇಡ, ಮುನ್ನೆಚ್ಚರಿಕೆ ವಹಿಸಬೇಕು. ಜತೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಸಂಪೂರ್ಣವಾಗಿ ಗುಣಮುಖರಾಗಬಹುದು ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು.

  ಬೆಳಗಾವಿ : ಜಿ.ಬಿ.ಸಿಂಡ್ರೋಮ್ (ಜಿಬಿಎಸ್‌) ರೋಗದ ಬಗ್ಗೆ ಭಯ ಬೇಡ, ಮುನ್ನೆಚ್ಚರಿಕೆ ವಹಿಸಬೇಕು. ಜತೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಸಂಪೂರ್ಣವಾಗಿ ಗುಣಮುಖರಾಗಬಹುದು ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ಯೂಲೈನ್ ಬೇರಿ (ಜಿಬಿಎಸ್‌) ಸಿಂಡ್ರೋಮ್ ಅಪರೂಪದ ನರ ವೈಜ್ಞಾನಿಕ ಅಸ್ವಸ್ಥತೆಯಾಗಿದ್ದು, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಬಾಹ್ಯ ನರಗಳ ಮೇಲೆ ತಪ್ಪಾಗಿ ದಾಳಿ ಮಾಡುತ್ತದೆ. 

ಈ ಸ್ಥಿತಿಯು ನರ ದೌರ್ಬಲ್ಯ, ಮರಗಟ್ಟುವಿಕೆ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಈ ರೋಗದ ಲಕ್ಷಣಗಳು ಕೈ ಮತ್ತು ಕಾಲುಗಳಲ್ಲಿ ಪ್ರಾರಂಭವಾಗುವ ದೌರ್ಬಲ್ಯ ದೇಹದ ಮೇಲ್ಭಾಗಕ್ಕೆ ಹರಡುತ್ತದೆ ಎಂದು ತಿಳಿಸಿದರು.ಕೈ- ಕಾಲು ಬೆರಳುಗಳ ತುದಿಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಚುಚ್ಚುವ ಸಂವೇದನೆಗಳು, ಮಾತನಾಡುವಾಗ, ಅಗೆಯುವಾಗ ಮತ್ತು ಆಹಾರ ಸೇವಿಸುವಾಗ ತೊಂದರೆ ಆಗುತ್ತದೆ. 

ತ್ವರಿತ ಹೃದಯ ಬಡಿತ, ರಕ್ತದೊತ್ತಡದ ಏರಿಳಿತಗಳು ಮತ್ತು ತೀವ್ರ ಉಸಿರಾಟದ ತೊಂದರೆ ಕಂಡು ಬರುತ್ತದೆ. ಸಾಮಾನ್ಯವಾಗಿ ಉಸಿರಾಟ ಅಥವಾ ಜೀರ್ಣಾಂಗ ವ್ಯೂಹದಂತಹ ಸೋಂಕುಗಳಿಂದ ಶರೀರದಲ್ಲಿ ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ, ಸೈಟೊಮೆಗಾಲೊವೈರಸ್, ಎಪ್ಸ್ಟೀನ್-ವೈರಸ್ ಮುಂತಾದ ವೈರಸ್‌ಗಳು ಮನುಷ್ಯನ ಶರೀರಕ್ಕೆ ಅಂಟಿಕೊಂಡು ತೊಂದರೆಮಾಡುತ್ತದೆ ಎಂದು ಹೇಳಿದರು.ಈ ಪ್ರಕರಣಕ್ಕೆ ಯಾರೂ ಭಯ ಪಡದೆ ಸೂಕ್ತ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣವಾಗಿ ಗುಣಮುಖರಾಗಬಹುದು. 

ಇದಕ್ಕೆ ಸಂಬಂಧಿಸಿದಂತೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಿ ಹಾನಿಕಾರಕ ಪ್ರತಿಕಾಯಗಳನ್ನು ತೆಗೆದುಹಾಕಬಹುದು. ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್ ಚಿಕಿತ್ಸೆ ಕೂಡ ಲಭ್ಯವಿದೆ. ಸುರಕ್ಷಿತ ಕುಡಿಯುವ ನೀರು ಮತ್ತು ಆರೋಗ್ಯಕರ ಆಹಾರ ಸೇವಿಸಬೇಕು. ತಿನ್ನುವ ಮೊದಲು ಮತ್ತು ಶೌಚಾಲಯ ಬಳಸಿದ ನಂತರ ಕೈ-ಗಳನ್ನು ತೊಳೆಯಬೇಕು. ಸಮಾಜಕ್ಕೆ ಭಯಹುಟ್ಟಿಸುವ ತಪ್ಪು ಮಾಹಿತಿಯನ್ನು ಹರಡಬೇಡಿ ಎಂದು ಮನವರಿಕೆ ಮಾಡಿದರು.ಈಗಾಗಲೇ ನಮ್ಮ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜಿ.ಬಿ ಸಿಂಡ್ರೋಮ್ ರೋಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. 

ಸಂಶಯಾಸ್ಪದ ಪ್ರಕರಣಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಈಗಾಗಲೇ ಬೇಸಿಗೆ ಪ್ರಾರಂಭವಾಗಿರುವುದರಿಂದ ಜಿಲ್ಲೆಯ ಎಲ್ಲ ಕುಡಿಯುವ ನೀರಿನ ಮೂಲಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪರೀಕ್ಷಿಸಿ ವರದಿಯನ್ನು ಸಲ್ಲಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು

. ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ ಅಡವಿಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ಗಡೇದ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಚಾಂದನಿ ದೇವಡಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಗೀತಾ ಕಾಂಬಳೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಶ್ವನಾಥ ಭೋವಿ, ಜಿಲ್ಲಾ ರೋಗವಾಹಕ ಆಶ್ರೀತರೋಗಗಳ ನಿಯಂತ್ರಣಾ ಅಧಿಕಾರಿ ಡಾ.ವಿವೇಕ ಹೊನ್ನಳ್ಳಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಸಂಜಯ ದೊಡಮನಿ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳು ಮತ್ತು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈಧ್ಯಾಧೀಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ