ರಾಣಿಬೆನ್ನೂರು: ಸೋಲಿಗೆ ಯಾರ ಮೇಲೆ ದೂರುವುದು ಬೇಡ ಹಾಗೂ ಮತ್ತೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು. ನಗರದ ಕಾಂಗ್ರೆಸ್ ಕಾರ್ಯಾಲಯ ಕೆ.ಬಿ. ಕೋಳಿವಾಡ ಸಭಾಭವನದಲ್ಲಿ ಮಂಗಳವಾರ ಹಾವೇರಿ-ಗದಗ ಲೋಕಸಭಾ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು.
ಅಧಿಕಾರ ಬರುತ್ತದೆ ಹೋಗುತ್ತದೆ. ಬಾಲ್ಯದಲ್ಲೇ ಅದನ್ನೆಲ್ಲ ನೋಡಿದ್ದೇನೆ. ಕಾಂಗ್ರೆಸ್ ಸಂಬಂಧಕ್ಕೆ ಧಕ್ಕೆ ಬಾರದಂತೆ ಮುಂದಿನ ದಿನಗಳಲ್ಲಿ ಕೆಲಸ ಮಾಡುವೆ. ತಾಲೂಕಿನ ಜನತೆಗೆ ನನ್ನ ಪರಿಚಯ ಇಲ್ಲದಿದ್ದರೂ ಕ್ಷೇತ್ರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮತಗಳು ಲಭಿಸಿವೆ. ಶಾಸಕ ಪ್ರಕಾಶ ಕೋಳಿವಾಡ ಕ್ಷೇತ್ರದಲ್ಲಿ ನನ್ನ ಪರವಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅದೇ ರೀತಿ ಮಾಜಿ ಸಚಿವ ಆರ್.ಶಂಕರ್ ಕೂಡ ಕೆಲಸ ನಿರ್ವಹಿಸಿದ್ದಾರೆ. ತಾಲೂಕಿನಲ್ಲಿ ನಮಗೆ ಸೋಲಾಗಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಬಿದ್ದ ಮತಗಳಿಗಿಂತ ಹೆಚ್ಚಿನ ಮತಗಳು ನಮಗೆ ಬಂದಿವೆ. ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಹೆಚ್ಚಿನ ಸಾಧನೆ ಮಾಡಿದ್ದು ಶಹರ ಪ್ರಮಾಣದಲ್ಲಿ ಕಡಿಮೆ ಆಗಿದೆ. ಗದಗ, ಬ್ಯಾಡಗಿ, ರಾಣಿಬೆನ್ನೂರು ನಗರಗಳಲ್ಲಿ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ರಾಜ್ಯದ ಜನರಿಗೆ ನೀಡಿದ ಕೊಡುಗೆಯನ್ನು ಮರೆಯಬೇಡಿ. ಚುನಾವಣೆಯನ್ನು ಚುನಾವಣೆ ರೀತಿಯಲ್ಲಿ ನೋಡಿ. ಸೋಲನ್ನು ಮನಸ್ಸಿನ ಮೇಲೆ ತೆಗೆದುಕೊಳ್ಳಬೇಡಿ. ಸೋಲಿಗೆ ಕುಗ್ಗದೆ ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸೋಣ. ಆಗಿರುವ ತಪ್ಪನ್ನು ಮರೆತು ಪಕ್ಷ ಸಂಘಟನೆಗೆ ದುಡಿಯೋಣ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಕಾಶ ಕೋಳಿವಾಡ ಮಾತನಾಡಿ, ಚುನಾವಣೆಯಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚಿನ ಮುತುವರ್ಜಿ ವಹಿಸಿ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ವಿಭಿನ್ನವಾಗಿದೆ. ಬಿಜೆಪಿ ದುರಾಡಳಿತದ ಬಗ್ಗೆ ಜನರಲ್ಲಿ ಅರಿವು ಮೂಡಿಲ್ಲ. ರಾಮನ ಕ್ಷೇತ್ರದಲ್ಲಿಯೇ ಬಿಜೆಪಿಗೆ ಸೋಲಾಗಿದೆ. ಉತ್ತರ ಭಾರತದಲ್ಲಿ ಮತದಾರರು ಬಿಜೆಪಿಯನ್ನು ತಿರಸ್ಕಾರ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿಯೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪರವಾಗಿ ಗಾಳಿ ಬಿಸಲಿದೆ. ತಪ್ಪುಗಳು ಆಗುವುದು ಸಹಜ. ಅವುಗಳನ್ನೆಲ್ಲಾ ತಿದ್ದಿಕೊಳ್ಳಲಾಗುವುದು. ನಿಮ್ಮೆಲ್ಲರ ಸಹಕಾರ, ಮಾರ್ಗದರ್ಶನ ಬೇಕಾಗಿದೆ. ನಾನು ಕಾಂಗ್ರೆಸ್ ಮುಖಂಡರನ್ನು ಕೇಳದೇ ಯಾರದೇ ವೈಯಕ್ತಿಕ ಕೆಲಸ ಮಾಡುವುದಿಲ್ಲ. ನೀವು ಸರಿಯಾಗಿ ಗುರುತಿಸಿ ಕೆಲಸ ಮಾಡಿಸಿಕೊಳ್ಳಿ. ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.ಗ್ರಾಮೀಣ ಘಟಕದ ಅಧ್ಯಕ್ಷ ಮಂಜನಗೌಡ ಪಾಟೀಲ, ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ತಾಪಂ ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ, ನಗರ ಯುವ ಘಟಕದ ಅಧ್ಯಕ್ಷ ರಾಜು ಮಾದಮ್ಮನವರ, ಬಿ.ಬಿ.ನಂದ್ಯಾಲ ಮಾತನಾಡಿದರು. ನಗರ ಘಟಕದ ಅಧ್ಯಕ್ಷ ಶೇರುಖಾನ ಕಾಬೂಲಿ, ಕೃಷ್ಣಪ್ಪ ಕಂಬಳಿ, ರಾಜು ಅಡಿವೆಪ್ಪನವರ, ಬಸನಗೌಡ ಮರದ, ರಾಜಣ್ಣ ಮೋಟಗಿ, ರುಕ್ಮಿಣಿ ಸಾವುಕಾರ, ಏಕನಾಥ ಬಾನುವಳ್ಳಿ, ಸಣ್ಣತಮ್ಮಪ್ಪ ಬಾರ್ಕಿ, ಚಂದ್ರಪ್ಪ ಬೇಡರ, ಸಿದ್ದಣ್ಣ ಅಂಬಲಿ, ನೀಲಕಂಠಪ್ಪ ಕುಸಗೂರ, ಶೇಖಪ್ಪ ಹೊಸಗೌಡ್ರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.