ಕನ್ನಡಪ್ರಭ ವಾರ್ತೆ ನಾಪೋಕ್ಲು
ನೆಲಜಿ ಗ್ರಾಮದ ಶ್ರಿ ಇಗ್ಗುತ್ತಪ್ಪ ದೇವಸ್ಥಾನದ ಹಾಗೂ ಮಲ್ಮ ಬೆಟ್ಟದ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾಮಗಾರಿಯ ವಿರುದ್ಧ ನೆಲಜಿ ಗ್ರಾಮಸ್ಥರು ಗ್ರಾಮದ ದವಸ ಭಂಡಾರದಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಸಭೆ ಪಾಲ್ಗೊಂಡು ಮಾತನಾಡಿದರು.
ಪ್ರಬಲ ವಿರೋಧವಿದೆ:ನೆಲಜಿ ಗ್ರಾಮದ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಮೇಲ್ ಭಾಗದ ಮತ್ತು ಮಲ್ಮ ಬೆಟ್ಟದ ಕೆಳಭಾಗದಲ್ಲಿ ನೆಲಜಿ ಗ್ರಾಮದ ಮುಕ್ಕಾಟೀರ, ಚಿಯಕಪೂವಂಡ ಮತ್ತು ಮೊಣ್ಣಂಡ ಕುಟುಂಬದ ಕೆಲವರು ಅನ್ಯ ಧರ್ಮದವರಿಗೆ ಆಸ್ತಿಯನ್ನು ಮಾರಾಟ ಮಾಡಿದ್ದು ಆಸ್ತಿ ಕೊಂಡವರು ಮನಸ್ಸು ಇಚ್ಛೆಯಂತೆ ಕಾಮಗಾರಿ ಮಾಡುತ್ತಿರುವುದರಿಂದ ಪರಿಸರಕ್ಕೆ ಧಕ್ಕೆ ಆಗುತ್ತಿದೆ. ಕೃಷಿ ಹೊರ ತುಪಡಿಸಿ ಇದರ ಚಟುವಟಿಕೆಗಳಿಗೆ ಗ್ರಾಮಸ್ಥರ ಪ್ರಬಲ ವಿರೋಧವಿದೆ. ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೆ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಜೂನ್ 20 ರಂದು ವಿಶೇಷ ಗ್ರಾಮ ಸಭೆಯನ್ನು ಕರೆಯಲಾಗಿದೆ. ಈ ಸಭೆಯ ಫಲಶೃತಿಯನ್ನು ಆಧರಿಸಿ ನಿರ್ಣಯ ಕೈಗೊಳ್ಳಲಾಗುವುದು. ಮಲ್ಮ ಪರಿಸರಕ್ಕೆ ತೊಂದರೆ ಆದರೆ ಕೊಡಗಿನ ಜನರ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಪ್ರಕೃತಿ ನಾಶಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದರು.
ಅಖಿಲ ಕೊಡವ ಸಮಾಜದ ಕಾನೂನು ಸಲಹೆಗಾರ ಕುಟ್ಟಂಡ ವಿಜಯ್ ಉತ್ತಪ್ಪ ಮಾತನಾಡಿ, ಖರೀದಿಸಿದ ಜಾಗ ಖರೀದಿದಾರರ ಸ್ವತ್ತು. ದೇವಾಲಯದ ಸುತ್ತ ಕೃಷಿ ಹೊರತುಪಡಿಸಿ ಇದರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲು ಗ್ರಾಮಸ್ಥರ ವಿರೋಧವಿದೆ ಎಂಬುದನ್ನು ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಕಾನೂನು ಮಾರ್ಗದರ್ಶನ ಮಾಡಿದರು.
ಧಕ್ಕೆ ತರಬಾರದು:
ಬಲ್ಲಮಾವಟ್ಟಿಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿ ಮುಂದೆ ಎಲ್ಲರೂ ಪಕ್ಷತೀತವಾಗಿ ಈ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಅವರು ಎಲ್ಲರ ಒಪ್ಪಿಗೆಯಂತೆ ಶೀಘ್ರವೇ ವಿಶೇಷ ಗ್ರಾಮ ಪಂಚಾಯಿತಿ ಸಭೆಯನ್ನು ಕರೆದು ಎಲ್ಲಾ ಗ್ರಾಮಸ್ಥರು ಒಮ್ಮತದ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದರು.
ಪುಲಿಕೋಟು ಕೋಟೆ ಭಗವತಿ ದೇವಾಲಯದ ಅಧ್ಯಕ್ಷ ಕರವಂಡ ಲವ ನಾಣಯ್ಯ ಮಾತನಾಡಿ, ತಮ್ಮ ಗ್ರಾಮದಲ್ಲಿಯೂ ಇಂತಹದೇ ಪರಿಸ್ಥಿತಿ ನಿರ್ಮಾಣವಾಗಿತ್ತು ನಾವೆಲ್ಲರೂ ಒಗ್ಗಟ್ಟಾಗಿ ಸಮಸ್ಯೆಯನ್ನು ಬಗೆಹರಿಸಿದ ಬಗ್ಗೆ ವಿವರಿಸಿ ಅದೇ ರೀತಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಸಭೆಯಲ್ಲಿ ನೆಲಜಿ, ಕಕ್ಕಬೆ, ಪೆರೂರು, ಪುಲಿಕೋಟ್ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು . ದಯಾ ಚಿನ್ನಪ್ಪ ಪ್ರಾರ್ಥಿಸಿದ ಸಭೆಯಲ್ಲಿ ಮನವಟ್ಟಿ ಅರುಣ ಕಾವೇರಪ್ಪ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.