ಭಟ್ಕಳ: ಪಟ್ಟಣದ ಹೃದಯ ಭಾಗವಾದ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ಹೊಂಡಗಳಿಗೆ ತೇಪೆ ಹಚ್ಚಲು ಬಂದಿದ್ದವರನ್ನು ಸಾರ್ವಜನಿಕರು ಮತ್ತು ಆಟೋ ಚಾಲಕರು ವಾಪಸ್ ಕಳುಹಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ನೀವು ಈ ಹಿಂದೆ ಹೆದ್ದಾರಿಯಲ್ಲಿ ಬಿದ್ದ ಹೊಂಡಕ್ಕೆ ಹಚ್ಚಿದ ತೇಪೆ ಎರಡೇ ದಿನಗಳಲ್ಲಿ ಕಿತ್ತು ಹೋಗಿದೆ. ಇದೀಗ ಮತ್ತೆ ತರಾತುರಿಯಲ್ಲಿ ತೇಪೆ ಹಚ್ಚಲು ಬಂದಿದ್ದೀರಿ. ಕಳಪೆ ಮಟ್ಟದ ಕಾಮಗಾರಿ ಮಾಡುವುದಿದ್ದರೆ ನೀವು ಹೊಂಡ ಮುಚ್ಚುವುದೇ ಬೇಡ. ಗುಣಮಟ್ಟದ ಕಾಮಗಾರಿ ಮಾಡುವುದಿದ್ದರೆ ಮಾತ್ರ ಮಾಡಿ ಎಂದು ಆಗ್ರಹಿಸಿದ್ದಲ್ಲದೇ ಹೊಂಡಕ್ಕೆ ತೇಪೆ ಹಾಕುವ ಪೂರ್ವದಲ್ಲಿ ಸಂಬಂಧಿಸಿದ ಎಂಜಿನಿಯರ್ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.
ಇದರಿಂದ ಹೊಂಡಕ್ಕೆ ತೇಪೆ ಹಾಕಲು ಬಂದಿದ್ದವರು ಕಾಮಗಾರಿ ಮಾಡದೇ ವಾಪಸ್ ತೆರಳಿದರು. ಹೆದ್ದಾರಿಯಲ್ಲಿ ಕೆಲವು ಕಡೆ ಹೊಂಡಮಯವಾಗಿದ್ದು, ಸಂಚರಿಸುವುದೇ ಕಷ್ಟವಾಗಿದೆ. ಹೆದ್ದಾರಿಯಲ್ಲಿ ಬಿದ್ದಿರುವ ಹೊಂಡವನ್ನು ಈ ಹಿಂದೆ ಮುಚ್ಚಿದ್ದರೂ ಎರಡು ದಿನಗಳಲ್ಲೇ ಕಿತ್ತು ಹೋಗಿದೆ. ಹೀಗಾಗಿ ಹೆದ್ದಾರಿ ಹೊಂಡ ಮುಚ್ಚಲು ಗುಣಮಟ್ಟದ ಕಾಮಗಾರಿ ನಡೆಸಬೇಕು. ಸಂಬಂಧಿಸಿದ ಎಂಜಿನಿಯರ್ ಸ್ವತಃ ಸ್ಥಳದಲ್ಲಿ ನಿಂತು ಕಾಮಗಾರಿ ಮಾಡಿಸಬೇಕು ಎಂದು ಆಟೋ ಚಾಲಕ ಹನುಮಾನ ನಗರದ ಶ್ರೀನಿವಾಸ ನಾಯ್ಕ ಆಗ್ರಹಿಸಿದ್ದಾರೆ.