ಕನ್ನಡಪ್ರಭ ವಾರ್ತೆ ಕಾರವಾರ
ಖಾಸಗಿ ಕಂಪನಿಗಳಿಗೆ 500 ಎಕರೆ ಪ್ರದೇಶದಲ್ಲಿ ಹೊನ್ನಾವರದ ಕರಾವಳಿ ಅರಣ್ಯದಲ್ಲಿ ಅವಕಾಶ ನೀಡಬಾರದು ಎಂದು ವೃಕ್ಷಲಕ್ಷ ಆಂದೋಲನ ಉ.ಕ. ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಹೊನ್ನಾವರ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಪತ್ರ ಬರೆದಿದೆ.
2 ವರ್ಷ ಹಿಂದೆ ಭೂಕುಸಿತ ಆಗಿರುವ ಕಾಸರಕೋಡ ಅಪ್ಸರಕೊಂಡ ಪ್ರದೇಶದಲ್ಲಿ ಮೇಲಿನ ಇಡಗುಂಜಿ ಪ್ರದೇಶದಲ್ಲಿ ಬಾಕೈಟ್ ಗಣಿಗಾರಿಕೆಗೆ 440 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ಸಮೀಕ್ಷೆಗೆ ಖಾಸಗಿ ಕಂಪನಿಗಳು ತಯಾರಿ ನಡೆಸಿವೆ. ಅರಣ್ಯ ಪರವಾನಿಗೆಯನ್ನು ನೀಡಬಾರದು ಎಂದು ವೃಕ್ಷಲಕ್ಷ ಆಂದೋಲನ, ಜಿಲ್ಲಾ ಪರಿಸರ ಸಮಿತಿಗಳು ಒತ್ತಾಯ ಮಾಡಿವೆ.ಪಶ್ಚಿಮ ಕರಾವಳಿಯ ಏಕೈಕ ಸಮುದ್ರ ವನ್ಯಜೀವಿತಾಣ ಇಲ್ಲಿದೆ. ಇತಿಹಾಸ ಪ್ರಸಿದ್ಧ ಅಪ್ಪರ ಕೊಂಡ ಜಲಪಾತ ಇದೆ. ಪ್ರಸಿದ್ಧ ಇಡಗುಂಜಿ ದೇವಾಲಯ, ಕೆರೆಮನೆ ಯಕ್ಷಗಾನ ಕೇಂದ್ರ. ಸುಂದರ ಕಡಲತೀರ ಹೊಂದಿರುವ ಕಾಸರಕೋಡ ಇಡಗುಂಜಿ ಪ್ರದೇಶದಲ್ಲಿ ಬೃಹತ್ ಗಣಿಗಾರಿಕೆಗೆ ಯಾವುದೇ ಆರಂಭಿಕ ಪರಿಕ್ಷೆಗೂ ಅವಕಾಶಸಲ್ಲದು.
ಶರಾವತಿ ನದಿ ತೀರದ ಕರಾವಳಿ ಅರಣ್ಯ ರಕ್ಷಣೆಗೆ ಆಧ್ಯತೆ ನೀಡಬೇಕು. ವ್ಯಾಪಕ ವಾಣಿಜ್ಯೀಕರಣದಿಂದ ಕರಾವಳಿ ಅರಣ್ಯದ ವಿನಾಶದ ಅಂಚಿನ ಸಸ್ಯ ಜಲಚರು ಅಳಿವೆಗಳ ಉಳಿವಿಗೆ ಕ್ರಮ ಬೇಕು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಇಲ್ಲಿನ ಬೆಟ್ಟಗಳು ಸಾಕಷ್ಟು ಭೂಕುಸಿತ–ಆಕ್ರಮಣಕ್ಕೆ ಒಳಗಾಗಿವೆ ಎಂದು ಹೇಳಲಾಗಿದೆ.
ಯಾವದೇ ಕಾರಣಕ್ಕೆ ಗಣಿಗಾರಿಕೆ ಸಮೀಕ್ಷೆಗೆ ಅವಕಾಶ ನೀಡಬಾರದು ಎಂದು ಅನಂತ ಹೆಗಡೆ ಅಶೀಸರ, ಡಾ. ಬಾಲಚಂದ್ರ, ಡಾ. ಮಹಾಬಲೇಶ್ವರ, ಡಾ. ಪ್ರಕಾಶ್, ಡಾ. ಸುಭಾಸಚಂದ್ರನ್, ಡಾ. ವಿ.ಎನ್.ನಾಯ್ಕ ಮೊದಲಾದ ಕರಾವಳಿ ಪರಿಸರ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.