ಅಭಿವೃದ್ಧಿ ವಿಚಾರದಲ್ಲಿ ಸಲ್ಲದ ರಾಜಕಾರಣ ಬೇಡ

KannadaprabhaNewsNetwork |  
Published : Apr 11, 2025, 12:36 AM IST
ಗುಬ್ಬಿ ತಾಲ್ಲೂಕಿನ ನಿಟ್ಟೂರು ಪುರ ಗ್ರಾಮದಲ್ಲಿ ರೈಲ್ವೆ ಇಲಾಖೆ ಆಯೋಜಿಸಿದ್ದ ಎಲ್ ಸಿ 58 ಬಳಿ ಸುಮಾರು 50.57 ಕೋಟಿ ರೂಗಳ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ   ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವ ವಿ.ಸೋಮಣ್ಣ. | Kannada Prabha

ಸಾರಾಂಶ

ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಇರಬೇಕು. ಜನಪರ ಕಾಳಜಿ ಹೊಂದಿರಬೇಕು. ಅಭಿವೃದ್ಧಿ ವಿಚಾರದಲ್ಲಿ ಸಲ್ಲದ ರಾಜಕೀಯ ಮಾಡದೇ ಪಕ್ಷ ಭೇದ ಮರೆತು, ಕೆಲಸಗಳಲ್ಲಿ ಕೇಂದ್ರ, ರಾಜ್ಯ ಎಂಬ ತಾರತಮ್ಯ ಇಲ್ಲದೆ ಅಭಿವೃದ್ಧಿ ಮಾಡಬೇಕು ಎಂದು ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವ ವಿ.ಸೋಮಣ್ಣ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಇರಬೇಕು. ಜನಪರ ಕಾಳಜಿ ಹೊಂದಿರಬೇಕು. ಅಭಿವೃದ್ಧಿ ವಿಚಾರದಲ್ಲಿ ಸಲ್ಲದ ರಾಜಕೀಯ ಮಾಡದೇ ಪಕ್ಷ ಭೇದ ಮರೆತು, ಕೆಲಸಗಳಲ್ಲಿ ಕೇಂದ್ರ, ರಾಜ್ಯ ಎಂಬ ತಾರತಮ್ಯ ಇಲ್ಲದೆ ಅಭಿವೃದ್ಧಿ ಮಾಡಬೇಕು ಎಂದು ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವ ವಿ.ಸೋಮಣ್ಣ ಮನವಿ ಮಾಡಿದರು. ತಾಲೂಕಿನ ನಿಟ್ಟೂರು ಪುರ ಗ್ರಾಮದಲ್ಲಿ ರೈಲ್ವೆ ಇಲಾಖೆ ಆಯೋಜಿಸಿದ್ದ ಎಲ್ ಸಿ 58 ಬಳಿ ಸುಮಾರು 50.57 ಕೋಟಿ ರು.ಗಳ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಬಹುದಿನದ ಬೇಡಿಕೆಯಾಗಿದ್ದ ರೈಲ್ವೆ ಮೇಲ್ಸೇತುವೆ ಹಾಗೂ ಅಂಡರ್ ಪಾಸ್ ಸೇತುವೆಗಳಿಗೆ ಚಾಲನೆ ಸಿಕ್ಕಿದೆ. ನನ್ನ ಚುನಾವಣೆ ಸಮಯದಲ್ಲಿ ಕೊಟ್ಟ ಮಾತಿನಂತೆ ತಾಲೂಕಿನಲ್ಲಿ 15 ಸೇತುವೆ ನಿರ್ಮಿಸಿ ದೇಶದಲ್ಲೇ ದಾಖಲೆ ಸೃಷ್ಟಿಸಿದ್ದೇನೆ ಎಂದು ತಮ್ಮ ಕೆಲಸದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಲ್ಲಿ ಹೊಂದಾಣಿಕೆ ಬರಬೇಕಿದೆ. ಬುದ್ಧಿ ಹೇಳಿ ಸತ್ಯ ಮಾತಾಡಿದರೆ ರಾಮಾಯಣ, ಮಹಾಭಾರತ, ಕುರುಕ್ಷೇತ್ರ ಕಥೆ ಕಟ್ಟುವ ಮಂದಿ ಬಹಳ ಜನ ಇದ್ದಾರೆ. ಕಿವಿ ಕಚ್ಚುವ ಮಂದಿಯಿಂದ ದೂರವಿದ್ದು ಎಲ್ಲರ ಜೊತೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕಿದೆ. ಅಭಿವೃದ್ಧಿ ವಿಚಾರದಲ್ಲಿ ತೊಡಕು ಮಾಡಬಾರದು. ಪಕ್ಷ ರಾಜಕಾರಣ ಬಿಟ್ಟು ಅಬಿವೃದ್ಧಿ ಕೆಲಸ ಮಾಡಿ ಎಂದು ಅಸಮಧಾನಗೊಂಡಿರುವ ನಾಯಕರಿಗೆ ಬುದ್ಧಿವಾದ ಹೇಳಿದರು. ರಾಜಕಾರಣಿಗಳ ಕೆಲಸವನ್ನು ಮತದಾರರು ಸರಿ ಎಂದರೆ ಮಾತ್ರ ನಮ್ಮ ಕೆಲಸಕ್ಕೆ ಗೌರವ ಸಿಗಲಿದೆ. ನಿಟ್ಟೂರು ರೈಲ್ವೆ ಸ್ಟೇಶನ್ ನಲ್ಲಿ ಚಿಕ್ಕಮಗಳೂರು ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಿದ ಹಿನ್ನಲೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಒಂದು ನಿಲ್ದಾಣದಲ್ಲಿ ರೈಲು ನಿಂತರೆ 16 ಸಾವಿರ ಹಣ ವ್ಯಯ ಆಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯರು ರೈಲ್ವೆ ಪ್ರಯಾಣ ಹೆಚ್ಚು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು ಅಬಿವೃದ್ಧಿ ಕೆಲಸಕ್ಕೆ ತೊಂದರೆ ನೀಡದಿದ್ದರೆ ಒಂದೂವರೆ ವರ್ಷದಲ್ಲಿ ಉತ್ತಮ ಸೇತುವೆ ಜನರ ಬಳಕೆಗೆ ಸಿಗಲಿದೆ ಎಂದರು.ಚತುಷ್ಪಥ ರಸ್ತೆಗೆ 120 ಕೋಟಿ ನೀಡಿದ ಕೇಂದ್ರದ ಸಚಿವ ನಿತಿನ್ ಗಡ್ಕರಿ ಅವರ ಬಳಿ ಮನವಿ ಮಾಡಿ ಗುಬ್ಬಿ ಪಟ್ಟಣ ಸೇರಿದಂತೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ 28 ಕೋಟಿ ಹಾಗೂ ಮಲ್ಲಸಂದ್ರದಿಂದ ತುಮಕೂರು ಮುಖ್ಯರಸ್ತೆ ಸೇರಿಸಲು 85 ಕೋಟಿ ಮಂಜೂರು ಮಾಡಲಿದ್ದಾರೆ. ಶೀಘ್ರದಲ್ಲಿ ಈ ಚತುಷ್ಪಥ ರಸ್ತೆ ಗುಬ್ಬಿ ಪಟ್ಟಣಕ್ಕೆ ಮೆರಗು ನೀಡಲಿದೆ. 27 ಸಾವಿರ ಲೀಡ್ ಕೊಟ್ಟ ತಾಲೂಕಿನ ಜನರ ಋಣ ತೀರಿಸಲು ಬದ್ಧನಾಗಿದ್ದೇನೆ. ಪ್ರಧಾನಿ ಮೋದಿ ಅವರ ಆದೇಶದಂತೆ ಕುಡಿಯುವ ನೀರು, ಶೌಚಾಲಯ, ಅಸಹಾಯಕರಿಗೆ ನೆರವು ಈ ಕಾರ್ಯಗಳನ್ನು ಪಕ್ಷ ಬೇದವಿಲ್ಲದೆ ನಡೆಸುತ್ತೇನೆ. ಚೆಕ್ ಡ್ಯಾಂ ನಿರ್ಮಾಣ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಿ ಜಿಲ್ಲಾ ಪಂಚಾಯಿತಿಗೆ ಕೆಲಸ ಮಾಡಲು ಸೂಚಿಸಿದ್ದೇನೆ ಎಂದರು.ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಲತಾ ದಯಾನಂದ್, ತಹಸೀಲ್ದಾರ್ ಬಿ.ಆರತಿ , ವೈ.ಎಚ್.ಹುಚ್ಚಯ್ಯ, ಜಿ ಡಾ. ನವ್ಯಾ ಬಾಬು, ಯಶೋಧಮ್ಮ, ಪಿ.ಬಿ.ಚಂದ್ರಶೇಖರಬಾಬು, ಮುಖಂಡರಾದ ಹೆಬ್ಬಾಕ ರವಿ, ಎಸ್.ಡಿ.ದಿಲೀಪ್ ಕುಮಾರ್, ಎನ್.ಸಿ.ಪ್ರಕಾಶ್, ಜಿ.ಎನ್.ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಸಾಗರನಹಳ್ಳಿ ವಿಜಯ್ ಕುಮಾರ್, ಹಾರನಹಳ್ಳಿ ಪ್ರಭಣ್ಣ, ಶಂಕರಾನಂದ, ಪಪಂ ಸದಸ್ಯ ಜಿ.ಆರ್.ಶಿವಕುಮಾರ್, ಗ್ರಾಪಂ ಸದಸ್ಯ ಎನ್.ಬಿ.ರಾಜಶೇಖರ್, ರೈಲ್ವೆ ಅಧಿಕಾರಿಗಳಾದ ಅಜಯ್ ಶರ್ಮಾ, ಅಮಿತೇಶ್ ಸಿಂಗ್, ಪ್ರದೀಪ್ ಪುರಿ, ರಾಜೀವ್ ಶರ್ಮಾ, ಪರೀಕ್ಷಿತ್, ಗುತ್ತಿಗೆದಾರ ಸುಧಾಕರ್, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ