ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರು
ತೀವ್ರ ಬರಗಾಲದಿಂದ ತಾಲೂಕಿನ ಜನತೆ ಗುಳೆ ಹೋಗುತ್ತಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿರುವುದು ಖಂಡನೀಯ. ಎರಡೂ ಪಕ್ಷಗಳು ರಾಜಕೀಯ ಬದಿಗಿರಿಸಿ ಬರ ನಿರ್ವಹಣೆಗೆ ಮುಂದಾಗಬೇಕೆಂದು ತಾಲೂಕು ರೈತ ಸಂಘದಿಂದ ಮನವಿ ಸಲ್ಲಿಸಿದರು.ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ಅಧಿಕಾರಿಗೆ ಮನವಿ ಸಲ್ಲಿಸಿದ ಸಂಘದ ಸದಸ್ಯರು ರಾಜ್ಯದಲ್ಲಿ ಭೀಕರ ಬರಗಾಲದಿಂದ ಜನತೆ ಸಂಕಷ್ಟದಲ್ಲಿದ್ದಾರೆ. ಉದ್ಯೋಗವಿಲ್ಲದೆ ಗುಳೆ ಹೋಗುವಂತಾಗಿದೆ. ಬೆಂಗಳೂರು ಸೇರಿದಂತೆ ನಗರಗಳ ಕಡೆ ಸಾಮೂಹಿಕವಾಗಿ ವಲಸೆ ಹೋಗುತ್ತಿದ್ದಾರೆ.ಇಂತಹ ಸಂಕಷ್ಟದ ಸಮಯ ದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಮನ ಹೆಸರಲ್ಲಿ ಕೆಸರೆರಚಾಟ ನಡೆಸುತ್ತಾ ಜನತೆಯನ್ನು ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಗ್ರಾಮೀಣ ಜನತೆಗೆ ನಿತ್ಯವೂ ಶ್ರೀರಾಮ, ಶ್ರೀಕೃಷ್ಣನ ನೆನೆಯುತ್ತಾ ತಮ್ಮ ಕೆಲಸವನ್ನು ಆರಂಭಿಸುತ್ತಾರೆ. ಯಾವತ್ತೂ ದೇವರಲ್ಲಿ ತಾರತಮ್ಯ ಎಸಗದೆ ತಮ್ಮಿಷ್ಟಕ್ಕೆ ಅನುಗುಣವಾಗಿ ಪೂಜೆ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ರಾಮನನ್ನು ಗುತ್ತಿಗೆ ಪಡೆದುಕೊಂಡವರಂತೆ ಸಭೆ ಸಮಾರಂಭಗಳಲ್ಲಿ ಮಾತನಾಡುತ್ತಿರುವುದು ಖಂಡನೀಯ. ಇದಕ್ಕೆ ಕಾಂಗ್ರೆಸ್ ನವರು ಹೊರತಾಗದೆ ಮಾತನಾಡುವುದು ಸಾಮಾನ್ಯವಾಗಿದೆ. ರಾಮನು ದೇಶದ ಪ್ರತಿಯೊಬ್ಬರಿಗೂ ಆರಾಧ್ಯದೈವವಾಗಿದ್ದರೂ ಬಿಜೆಪಿ ನಾಯಕರು ನಮಗೆ ಸ್ವಂತ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.ರಾಮ ಮಂದಿರ ನಿರ್ಮಾಣಕ್ಕೆ ಸಾವಿರಾರು ಕೋಟಿ ಅನುದಾನ ಒದಗಿಸಿರುವ ಕೇಂದ್ರ ಸರ್ಕಾರ ಬರ ಬಂದು ರೈತರು ಬೆಳೆ ನಷ್ಟದಿಂದ ಬಳಲುತ್ತಿದ್ದರೂ ರೈತರಿಗೆ ನಯಾ ಪೈಸೆ ಕೊಡದೆ ರೈತರನ್ನು ನಿರ್ಲಕ್ಷ್ಯ ವಹಿಸಿದ್ದಾರೆ. ಕೇಂದ್ರದ ಬರ ಅಧ್ಯಯನ ತಂಡ ಬಂದು ನಾಲ್ಕು ತಿಂಗಳು ಕಳೆದರೂ ಬರ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಇತ್ತ ರಾಜ್ಯದ ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿ ಮಾಡುವಲ್ಲಿ ಮುಳುಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ರಾಮನನ್ನು ಬಳಸಿಕೊಂಡಂರೆ ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳ ಜಪ ಮಾಡುತ್ತಾ ಜನರನ್ನು ಮೂರ್ಖನನ್ನಾಗಿಸುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡದೆ ಸಾವಿರಾರು ಕೋಟಿ ಮಂದಿರ ನಿರ್ಮಾಣಕ್ಕೆ ನೀಡಿದ್ದೇವೆಂದು ಬೀಗುತ್ತಿದ್ದಾರೆ, ಇದು ಖಂಡನೀಯ. ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಾ ಕಾಲ ಹರಣ ಮಾಡದೆ ಬರ ಪರಿಹಾರ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.ಈ ವೇಳೆ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ, ತಾಲೂಕು ಅಧ್ಯಕ್ಷ ಮಂಜುನಾಥ, ಪಿ.ಟಿ.ಹಟ್ಟಿ ನಿಂಗಣ್ಣ, ಈರಣ್ಣ, ಕುರಾಕಲಹಟ್ಟಿ ನಾಗರಾಜ, ಕನಕ ಶಿವಮೂರ್ತಿ,ತಿಪ್ಪೇರನ ಹಟ್ಟಿ ಚಂದ್ರಣ್ಣ ಇದ್ದರು.