ಪ್ರಸಾದಿಹಳ್ಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಆ ಗ್ರಾಮದ ಕೆಲವು ಸವರ್ಣೀಯರು ಬಿಡುತ್ತಿಲ್ಲ ಎಂದು ಕಿಡಿಕಾರಿದರು. ಕೆಲ ಸವರ್ಣಿಯರು ಅಂಬೇಡ್ಕರ್ ಭವನ ಇಲ್ಲಿ ನಿರ್ಮಾಣವಾದರೆ ದಿನ ಬೆಳಗ್ಗೆ ಎದ್ದು ಅವರ ಮುಖ ನೋಡಬೇಕು. ಹಾಗಾಗಿ ಇಲ್ಲಿ ಬೇಡ ಎಂದು ಮೂದಲಿಸುತ್ತಾರಂತೆ. ಹಲವಾರು ಬಾರಿ ಶಂಕುಸ್ಥಾಪನೆಯನ್ನು ಬೇಕಂತಲೇ ಮುಂದೂಡಲಾಗಿದೆ. ಇತ್ತೀಚೆಗೆ ಶಾಸಕ ಎಚ್ ಕೆ ಸುರೇಶ್ ಶಂಕುಸ್ಥಾಪನೆಗೆ ದಿನಾಂಕ ನಿಗದಿ ಮಾಡಿ ನಂತರ ಅಲ್ಲಿಯ ತಮ್ಮ ಹಿಂಬಾಲಕರ ಮಾತು ಕೇಳಿಕೊಂಡು ಮತ್ತೆ ಶಂಕುಸ್ಥಾಪನೆಯನ್ನು ಮುಂದೂಡಿದ್ದಾರೆ ಎಂದು ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಪ್ರಸಾದಿಹಳ್ಳಿ ಅಂಬೇಡ್ಕರ್ ಭವನದ ನಿರ್ಮಾಣ ವಿಚಾರದಲ್ಲಿ ತಾವು ಯಾವುದೇ ರೀತಿಯ ರಾಜಕೀಯವನ್ನಾಗಲಿ, ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸವನ್ನಾಗಿ ಮಾಡಿಲ್ಲ. ಅದರ ಅವಶ್ಯಕತೆಯೂ ತಮಗಿಲ್ಲ ಎಂದು ಶಾಸಕ ಎಚ್ ಕೆ ಸುರೇಶ್ ಸ್ಪಷ್ಟಪಡಿಸಿದರು. ಪಟ್ಟಣದ ಬಸ್ ನಿಲ್ದಾಣ ಮುಂಭಾಗ ಇರುವ ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾಜಿ ಸಫಾಯಿ ಕರ್ಮಚಾರಿ ಅಧ್ಯಕ್ಷ ಎಂಆರ್ ವೆಂಕಟೇಶ್, ಭೀಮ ಕೋರೆಗಾಂವ್ ಸಮಿತಿ ಅಧ್ಯಕ್ಷ ಅಶೋಕ್, ಎಸ್ಸಿ ಎಸ್ಟಿ ಸಮಿತಿಯ ದೇವರಾಜು, ಮಾತನಾಡಿ ಕಳೆದ ಮೂರು ದಶಕಗಳಿಂದಲೂ ಪ್ರಸಾದಿಹಳ್ಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಆ ಗ್ರಾಮದ ಕೆಲವು ಸವರ್ಣೀಯರು ಬಿಡುತ್ತಿಲ್ಲ ಎಂದು ಕಿಡಿಕಾರಿದರು. ಕೆಲ ಸವರ್ಣಿಯರು ಅಂಬೇಡ್ಕರ್ ಭವನ ಇಲ್ಲಿ ನಿರ್ಮಾಣವಾದರೆ ದಿನ ಬೆಳಗ್ಗೆ ಎದ್ದು ಅವರ ಮುಖ ನೋಡಬೇಕು. ಹಾಗಾಗಿ ಇಲ್ಲಿ ಬೇಡ ಎಂದು ಮೂದಲಿಸುತ್ತಾರಂತೆ. ಹಲವಾರು ಬಾರಿ ಶಂಕುಸ್ಥಾಪನೆಯನ್ನು ಬೇಕಂತಲೇ ಮುಂದೂಡಲಾಗಿದೆ. ಇತ್ತೀಚೆಗೆ ಶಾಸಕ ಎಚ್ ಕೆ ಸುರೇಶ್ ಶಂಕುಸ್ಥಾಪನೆಗೆ ದಿನಾಂಕ ನಿಗದಿ ಮಾಡಿ ನಂತರ ಅಲ್ಲಿಯ ತಮ್ಮ ಹಿಂಬಾಲಕರ ಮಾತು ಕೇಳಿಕೊಂಡು ಮತ್ತೆ ಶಂಕುಸ್ಥಾಪನೆಯನ್ನು ಮುಂದೂಡಿದ್ದಾರೆ. ದಲಿತರ ಹಾಗೂ ಅಂಬೇಡ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಅಂಬೇಡ್ಕರ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಶಾಸಕ ಎಚ್ ಕೆ ಸುರೇಶ್ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ತಾವು ಶಾಸಕರಾಗಿ ಆಯ್ಕೆಯಾಗಿದ್ದೇನೆ. ನಾನು ಕೇವಲ ಒಂದು ಜಾತಿ, ಜನಾಂಗಕ್ಕೆ ಶಾಸಕನಾಗಿ ಆಯ್ಕೆಯಾಗಿಲ್ಲ. 226 ಶಾಸಕರಲ್ಲಿ ನಾನು ಒಬ್ಬನಾಗಿದ್ದು ಕಾಂಗ್ರೆಸ್ ಸರ್ಕಾರ ಇದ್ದರೂ ನನ್ನ ಸರ್ಕಾರ ಎಂದೆ ಹೇಳುತ್ತೇನೆ. ಸಚಿವ ಮಹದೇವಪ್ಪನವರ ಸಹಕಾರದಿಂದ ತಾಲೂಕಿಗೆ 30ಕ್ಕೂ ಹೆಚ್ಚು ಸಮುದಾಯ ಭವನಗಳು ನಿರ್ಮಾಣ ಆಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಕೃಪಾಕಟಾಕ್ಷದಿಂದ ನೀರಾವರಿಗೆ ಸಾಕಷ್ಟು ಅನುದಾನ ಹರಿದು ಬಂದಿದೆ. ಎಲ್ಲಾ ಜನಾಂಗದವರು ಜಾತಿಯವರು ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ನೀವು ನಮ್ಮ ಮನೆಗೆ ಬಂದು ಭೇಟಿ ನೀಡಿದರೆ ಸರ್ವ ಜನಾಂಗದ ಶಾಂತಿಯ ತೋಟ ನಿಮ್ಮ ಕಣ್ಣಿಗೆ ಕಾಣುತ್ತದೆ ಎಂದರು.ಪ್ರಸಾದಿಹಳ್ಳಿ ಅಂಬೇಡ್ಕರ್ ಭವನ ನಿರ್ಮಾಣ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ನಾನು ಶಾಸಕನಾದ ಮೇಲೆ ಯಾವುದೇ ರೀತಿಯ ಅಟ್ರಾಸಿಟಿ ಕೇಸ್ ಘಟನೆ ನಡೆದಿಲ್ಲ, ಜಾತಿ ಜನಾಂಗದ ನಡುವೆ ಕಿಡಿಯಿಟ್ಟು ಹೊಡೆದಾಟ ಮಾಡಿಸಿಲ್ಲ. ಮನೆ ಮುರಿಯುವ ರಾಜಕಾರಣ ಮಾಡುತ್ತಿಲ್ಲ. ಯಾವುದಾದರೂ ಇದ್ದರೆ ಸಾಕ್ಷಿ ತೋರಿಸಿ. ಅಂಬೇಡ್ಕರ್ ಭವನ ನಿರ್ಮಾಣ ವಿಚಾರದಲ್ಲಿ ಜಾತೀಯತೆ ತರುವುದು ಬೇಡ. ನಾನು ಬೇಕಂತಲೇ ಗುದ್ದಲಿ ಪೂಜೆ ತಪ್ಪಿಸಿಕೊಂಡಿಲ್ಲ. ನಿರ್ಮಾಣದ ವಿಳಂಬಕ್ಕೆ ಕಾರಣವೇನು ಎಂದು ವರದಿ ಕೇಳಿದ್ದು ಒಂದು ವಾರದ ಒಳಗಡೆ ಶಂಕುಸ್ಥಾಪನೆ ನೆರವೇರಿಸುವುದಾಗಿ ಭರವಸೆ ನೀಡಿದರು. ಚಿಕ್ಕ ಬ್ಯಾಡಿಗೆರೆ ಮಂಜುನಾಥ್ ಮಾತನಾಡಿ ಕಳೆದ ವರ್ಷ ನಡೆದ ಹಿತ ರಕ್ಷಣಾ ಸಮಿತಿಯ ಸಭೆಯಲ್ಲಿ ಸಭೆಯ ಗಮನಕ್ಕೆ ತಂದಿದ್ದ ವರದಿಗಳಲ್ಲಿ ಪಟ್ಟಣದ ಅಂಬೇಡ್ಕರ್ ಭವನದ ಬಳಿ ಇದ್ದ ಕೋಳಿ ಅಂಗಡಿ ತೆರವು ಕಾರ್ಯಕ್ರಮ ಒಂದು ಅನುಷ್ಠಾನವಾಗಿದ್ದು ಬಿಟ್ಟರೆ ಉಳಿದ ದಲಿತಪರ ಮನವಿಗಳು ಯಾವುದು ಈಡೇರಿಲ್ಲ. ಇನ್ನು ಗ್ರಾಮೀಣ ಪ್ರದೇಶದ ಪೆಟ್ಟಿಗೆ ಅಂಗಡಿಗಳಲ್ಲಿ ರಾಜಾರೋಷವಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾರಲಾಗುತ್ತಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೂ ಒಂದು ವಾರದಲ್ಲಿ ನೀಡಿದ್ದ ಭರವಸೆಗಳನ್ನು ಶಾಸಕರು ಈಡೇರಿಸಿದರೆ ಮಾತ್ರ ಸಭೆ ನಡೆಸಲಿ ಎಂದು ಒತ್ತಾಯಿಸಿದರು. ಈ ಬಗ್ಗೆ ಶಾಸಕ ಎಚ್ ಕೆ ಸುರೇಶ್ ಮಾತನಾಡಿ, ವರದಿ ಹೇಳಿದರೆ ಸಾಕಾಗುವುದಿಲ್ಲ. ಅದನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ನೆಮ್ಮದಿ. ಆ ನಿಟ್ಟಿನಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನದಲ್ಲಿದ್ದ ಕೋಳಿ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಆದರೆ ಈಗ ಪಕ್ಕದ ಹೊಳೆ ಬೀದಿಯಲ್ಲಿ ಅಂಗಡಿಗಳು ಪ್ರತಿಷ್ಠಾಪನೆಗೊಂಡಿದ್ದು ಕೋಳಿ ಬೀದಿಯಾಗಿ ಪರಿವರ್ತನೆಯಾಗಿದ್ದು ಇದಕ್ಕೆ ಹಿನ್ನೆಲೆ ಏನು ಇಂದು ತಮಗೆ ತಿಳಿದಿದೆ. ಸಂವಿಧಾನ ಶಿಲ್ಪಿ ಗೌರವ ಕೊಡುವುದು ನಮ್ಮ ಆದ್ಯ ಕರ್ತವ್ಯ. ಆದರೆ ಅಂಬೇಡ್ಕರ್ ಆದರ್ಶಗಳನ್ನು ಹೊಂದಿರುವ ಇಂತಹ ಸಭೆಗೆ ಕೆಲವು ಅಧಿಕಾರಿಗಳು ಗೈರಾಗಿದ್ದು ಕೂಡಲೇ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಅವರಿಗೆ ಸೂಚಿಸಿದರು. ಕೈಕೊಟ್ಟ ಮೈಕ್:ಅಂಬೇಡ್ಕರ್ ಭವನದಲ್ಲಿ ನಡೆದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಧ್ವನಿವರ್ಧಕದ ವ್ಯವಸ್ಥೆ ಸರಿಯಿಲ್ಲದೆ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯದಾಗಿತ್ತು. ಶಾಸಕರು ಮಾತನಾಡುವಾಗಲೂ ಹಲವಾರು ಬಾರಿ ಮೈಕ್ ಕೈಕೊಟ್ಟಿತು. ವರ್ಷಕ್ಕೆ ಒಮ್ಮೆ ನಡೆಯುವ ಇಂತಹ ಕಾರ್ಯಕ್ರಮ ಲೋಪವಾಗದಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿ ಎಂದು ದಲಿತ ಸಂಘರ್ಷ ಸೇನೆಯ ಮುಖಂಡರು ಕಿಡಿ ಕಾರುತ್ತಿದ್ದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕನಾಡಿ, ಪುರಸಭೆ ಮುಖ್ಯಾಧಿಕಾರಿ ಶಿಗ್ಗಾವಿ, ಬಿಇಒ ಭಾಗ್ಯಮ್ಮ, ತಾಲೂಕು ವೈದ್ಯಾಧಿಕಾರಿ ವಿಜಯ್, ಸಮಾಜ ಕಲ್ಯಾಣ ಇಲಾಖೆಯ ಲಿಂಗರಾಜು, ಮಾಜಿ ತಾಪಂ ಅಧ್ಯಕ್ಷ ಪರ್ವತಯ್ಯ, ಕರವೇ ಚಂದ್ರಶೇಖರ್, ಈಶ್ವರ್, ದೇವಿಹಳ್ಳಿ ಕುಮಾರ್ ಮರಿಯಪ್ಪ ಶಂಬುಗನಹಳ್ಳಿ ಬಾಬು ರಾಮನಹಳ್ಳಿ ವೆಂಕಟೇಶ್ ಸತೀಶ್ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.