ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್‌ ಕಡಿತ ಬೇಡ: ಸಚಿವ ಮಂಕಾಳ ವೈದ್ಯ

KannadaprabhaNewsNetwork |  
Published : Jan 26, 2024, 01:51 AM IST
ಕಾರವಾರದಲ್ಲಿ ಸಚಿವ ಮಂಕಾಳು ವೈದ್ಯ ಅಧಿಕಾರಿಗಳ ಸಭೆ ನಡೆಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತ ಮಾಡದಂತೆ ನೋಡಿಕೊಳ್ಳಬೇಕು. ದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಜಿಲ್ಲೆಯಲ್ಲಿ ಪವರ್ ಕಟ್ ಸಮಸ್ಯೆ ಕಂಡು ಬರದಂತೆ ನೋಡಿಕೊಳ್ಳಬೇಕು.

ಕಾರವಾರ:

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತ ಮಾಡದಂತೆ ನೋಡಿಕೊಳ್ಳಬೇಕು. ದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಜಿಲ್ಲೆಯಲ್ಲಿ ಪವರ್ ಕಟ್ ಸಮಸ್ಯೆ ಕಂಡು ಬರದಂತೆ ನೋಡಿಕೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾಗೇನಾದರೂ ಸಮಸ್ಯೆ ಉಂಟಾದರೆ ತಮ್ಮ ಗಮನಕ್ಕೆ ತನ್ನಿ. ಸರ್ಕಾರದೊಂದಿಗೆ ಮಾತನಾಡಿ ವಿದ್ಯುತ್ ಕಡಿತಗೊಳಿಸುವುದು ಬೇಡವೆಂದು ತಿಳಿಸುತ್ತೇವೆ ಎಂದರು.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು. ಗೃಹಲಕ್ಷ್ಮೀಯಡಿ ಶೇ. 88ರಷ್ಟು ಸಾಧನೆಯಾಗಿದ್ದು, ಬಾಕಿ ಉಳಿದ ಅರ್ಹ 19,202 ಮಹಿಳೆಯರನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸಂಪರ್ಕಿಸಿ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು. ವಾರದ ಒಳಗೆ ಎಲ್ಲ ಮನೆ ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.ಗೃಹಜ್ಯೋತಿ ಯೋಜನೆಯಡಿ ಶೇ. 96ರಷ್ಟು ಸಾಧನೆ ಆಗಿದ್ದು, ಬಾಕಿ ಉಳಿದ ಫಲಾನುಭವಿಗಳನ್ನು ಸೇರ್ಪಡೆಗೊಳಿಸಿ ಶೇ.100 ಗುರಿ ಸಾಧಿಸಬೇಕು.

ಯುವನಿಧಿ ಯೋಜನೆಯಲ್ಲಿ ಈ ವರೆಗೆ 2,537 ಮಾತ್ರ ನೋಂದಣಿಯಾಗಿದ್ದು, ಜಿಲ್ಲೆಯ ಕಾಲೇಜುಗಳಲ್ಲಿ 2023ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ವಿಳಾಸದ ಪಟ್ಟಿ ಪಡೆದು ಪ್ರತಿಯೊಬ್ಬರಿಗೂ ಯೋಜನೆಯ ಮಾಹಿತಿ ಮತ್ತು ಸೇರ್ಪಡೆ ಮಾಡಿಕೊಳ್ಳುವ ಕುರಿತಂತೆ ವೈಯಕ್ತಿಕವಾಗಿ ಪತ್ರ ಕಲುಹಿಸಿ ನೋಂದಣಿಗೆ ಕ್ರಮ ಕೈಗೊಳ್ಳಬೇಕು. ಎಲ್ಲ ಗ್ಯಾರಂಟಿ ಯೋಜನೆಗಳ ನೋಂದಣಿಯಲ್ಲಿನ ಸಮಸ್ಯೆಗಳ ಕುರಿತಂತೆ ಸಾರ್ವಜನಿಕರು ಸಂಪರ್ಕಿಸಲು ಅನುಕೂಲವಾಗುವಂತೆ 24*7 ಕಾರ್ಯ ನಿರ್ವಹಿಸುವ ಸಹಾಯವಾಣಿ ತೆರೆಯಬೇಕು. ಸಲ್ಲಿಕೆಯಾದ ದೂರುಗಳನ್ನು ತಕ್ಷಣವೇ ಬಗೆಹರಿಸಿ, ಜಿಲ್ಲೆಯ ಅರ್ಹರಿಗೆ ಯೋಜನೆಗಳ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.ಬರ ನಿರ್ವಹಣೆ ಕುರಿತಂತೆ ಜನರಿಗೆ ಸಮಸ್ಯೆಯಾಗಬಾರದು. ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಸಾಕಷ್ಟು ಮುಂಚಿತವಾಗಿ ಯೋಜನೆ ರೂಪಿಸಿಕೊಂಡು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು.ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಬೀಡಾಡಿ ದನಗಳ ಸಮಸ್ಯೆಯ ಬಗ್ಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವುಗಳನ್ನು ಗೋಶಾಲೆಗೆ ನೀಡುವ ಜತೆಗೆ ಸಾಕಲು ಪ್ರತ್ಯೇಕವಾಗಿ ಸೂಕ್ತ ಜಾಗ ಗುರುತಿಸಬೇಕು. ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಕೈಗೊಂಡು ಅವುಗಳ ಸಂಖ್ಯೆಯ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಿ ಎಂದರು.ಗಂಗೂಬಾಯಿ ಮಾನಕರ, ಜಿಲ್ಲೆಯಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ಶೇ.78 ನೋಂದಣಿ ಪ್ರಗತಿಯಾಗಿದೆ. ಈಗಾಗಲೇ 2 ಹಂತದಲ್ಲಿ ಬೆಳೆ ಪರಿಹಾರ ರೈತರ ಖಾತೆಗಳಿಗೆ ಜಮೆಯಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಬಹುದಾದ ಗ್ರಾಮಗಳನ್ನು ಗುರುತಿಸಿದ್ದು, ಅಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಭೂಮಿ ಪೂಜೆ ಸಿಸ್ಟ್ಂ ಅವರದ್ದು:ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳಿಗೆ ವಿವಿಧ ಕಾಮಗಾರಿ ಕೈಗೊಳ್ಳಲು ಬಿಡುಗಡೆಯಾಗಿರುವ ಅನುದಾನವನ್ನು ಸಂಪೂರ್ಣ ವೆಚ್ಚ ಮಾಡಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸಚಿವ ಮಂಕಾಳು ವೈದ್ಯ ತಾಕೀತು ಮಾಡಿದರು. ತಾವು ಭೂಮಿ ಪೂಜೆ ಸಿಸ್ಟಂನಲ್ಲಿ ಇಲ್ಲ. ಸಚಿವರು, ಶಾಸಕರು ಭೂಮಿ ಪೂಜೆ ಮಾಡಲಿ ಎಂದು ಸಮಯ ವ್ಯರ್ಥ ಮಾಡಬಾರದು. ಯಾರಿಗೆ ಅದರೂ ಮೂರು ಬಾರಿ ಕೇಳಿ, ಸಮಯ ನೀಡದೇ ಇದ್ದರೆ ಕಾಮಗಾರಿ ಆರಂಭಿಸಬೇಕು. ಹಿಂದೆ ಇದ್ದವರು ಭೂಮಿ ಪೂಜೆ ಮಾಡುವ ಸಿಸ್ಟ್ಂ ಇಟ್ಟುಕೊಂಡಿದ್ದರು. ಪಿಕಾಸಿಯನ್ನೂ ಅವರೇ ತೆಗೆದುಕೊಂಡು ಹೋಗಿದ್ದಾರೆ ಎಂದು ಹಿಂದಿನ ಬಿಜೆಪಿ ಸರ್ಕಾರದಲ್ಲಿನ ಜನಪ್ರತಿನಿಧಿಗಳ ಬಗ್ಗೆ ಪರೋಕ್ಷವಾಗಿ ಲೇವಡಿ ಮಾಡಿದರು. ಟೆಂಡರ್ ಪ್ರಕ್ರಿಯೆ ಮುಗಿದು, ಕಾಮಗಾರಿಗಳಿಗೆ ಕಾರ್ಯಾದೇಶ ದೊರೆತ ಕೂಡಲೇ ಕಾಮಗಾರಿ ಆರಂಭಿಸಿ ಜನರಿಗೆ ಯೋಜನೆಯ ಪ್ರಯೋಜನ ಒದಗಿಸಿ. ಯಾವುದೇ ಕಾರಣಕ್ಕೂ ಅನುದಾನವನ್ನು ವ್ಯರ್ಥ ಮಾಡಬಾರು. ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಲು ಬಿಡಬಾರದು ಎಂದು ಅಧಿಕಾರಿಗಳಿಗೆ ಸಚಿವರು ಖಡಕ್ ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!