10 ಎಚ್‌ಪಿ ವರೆಗಿನ ಅಕ್ರಮ ಪಂಪ್‌ಸೆಟ್‌ಗೆ ವಿದ್ಯುತ್ ಕಡಿತ ಇಲ್ಲ: ಸಚಿವ ಜಾರ್ಜ್‌

KannadaprabhaNewsNetwork |  
Published : Jul 12, 2024, 01:46 AM ISTUpdated : Jul 12, 2024, 10:24 AM IST
ಬಳ್ಳಾರಿಯಲ್ಲಿ ಗುರುವಾರ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  | Kannada Prabha

ಸಾರಾಂಶ

ನದಿ ಮತ್ತು ಕಾಲುವೆಗಳಿಂದ ಅಕ್ರಮ ಪಂಪ್‌ಸೆಟ್‍ಗಳ ಮೂಲಕ ನೀರು ಮೇಲೆತ್ತುವವರ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಜಲ ಸಂಪನ್ಮೂಲ ಇಲಾಖೆಯಿಂದ ಬೇಡಿಕೆ ಬಂದಿದೆ.

ಬಳ್ಳಾರಿ: ರಾಜ್ಯದಲ್ಲಿ 10ಎಚ್‌ಪಿ ವರೆಗಿನ ಅಕ್ರಮ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ರಮ ಪಂಪ್‌ಸೆಟ್‍ಗಳಿವೆ. ಕೆಲವರು ಇಂತಹ ಅಕ್ರಮ ಪಂಪ್‌ಸೆಟ್‍ಗಳ ಮೂಲಕ ನದಿ ಮತ್ತು ಕಾಲುವೆಗಳಿಂದ ಅನುಮತಿ ಇಲ್ಲದೇ ನೀರು ತೆಗೆದುಕೊಳ್ಳುತ್ತಿದ್ದಾರೆ. ನದಿ ಮತ್ತು ಕಾಲುವೆಗಳಿಂದ ಅಕ್ರಮ ಪಂಪ್‌ಸೆಟ್‍ಗಳ ಮೂಲಕ ನೀರು ಮೇಲೆತ್ತುವವರ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಜಲ ಸಂಪನ್ಮೂಲ ಇಲಾಖೆಯಿಂದ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ 10 ಎಚ್‌ಪಿವರೆಗಿನ ವಿದ್ಯುತ್ ಮಾತ್ರ ಪೂರೈಕೆ ಮುಂದುವರಿಸಿ, 10 ಎಚ್‌ಪಿಕ್ಕಿಂತ ಹೆಚ್ಚಿನ ಸಾಮರ್ಥ್ಯದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದರು.

ರಾಜ್ಯದಲ್ಲಿ ಐಪಿ ಸೆಟ್ ಆರ್.ಆರ್. ನಂಬರ್‌ ಗೆ ಆಧಾರ್ ಸಂಖ್ಯೆ ಲಿಂಕ್ ಮಾಡುತ್ತಿರುವುದು ದಾಖಲಾತಿಗಾಗಿ ಮಾತ್ರವೇ ಹೊರತು ಬೇರೆ ಉದ್ದೇಶವಿಲ್ಲ. ಐಪಿ ಸೆಟ್‍ಗಳ ಸಂಖ್ಯೆ ತಿಳಿದುಕೊಂಡು ಸಮರ್ಪಕ ವಿದ್ಯುತ್ ಪೂರೈಕೆಗೆ ಅನುಕೂಲವಾಗುವಂತೆ ಐಪಿ ಸೆಟ್‍ಗಳ ಆರ್.ಆರ್.ನಂಬರ್ ಗೆ ಆಧಾರ್ ಸಂಖ್ಯೆ ಜೋಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ 10 ಎಚ್.ಪಿ.ವರೆಗಿನ ಕೃಷಿ ಪಂಪ್‌ಸೆಟ್‍ಗಳಿಗೆ ಈಗಾಗಲೇ ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ಅವುಗಳಿಗೆ ಎಷ್ಟು ವಿದ್ಯುತ್ ಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದೇ ಗೊಂದಲ ಉಂಟಾಗುತ್ತಿದೆ. ಅಕ್ರಮ ಪಂಪ್ ಸೆಟ್‍ಗಳಿಂದಾಗಿ ಸಕ್ರಮ ಪಂಪ್‍ಸೆಟ್‍ಗಳಿಗೂ ವಿದ್ಯುತ್ ಸಮಸ್ಯೆಯಾಗುತ್ತಿದೆ. ಐಪಿ ಸೆಟ್‍ಗಳ ಆರ್.ಆರ್ ನಂಬರ್‌ಗಳಿಗೆ ಆಧಾರ್ ಜೋಡಣೆ ಮಾಡಿದರೆ ಎಷ್ಟು ಪಂಪ್ ಸೆಟ್‍ಗಳಿವೆ? ಅವುಗಳಿಗೆ ಎಷ್ಟು ವಿದ್ಯುತ್ ಬೇಕು? ಎಂಬ ಸ್ಪಷ್ಟತೆ ಸಿಗುತ್ತದೆ. ಅದಕ್ಕೆ ತಕ್ಕಂತೆ ಸಮರ್ಪಕ ವಿದ್ಯುತ್ ಪೂರೈಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಬರಗಾಲದ ಸಂದರ್ಭದಲ್ಲೂ ರಾಜ್ಯದ ರೈತರಿಗೆ ದಿನದ ಏಳು ಗಂಟೆ ವಿದ್ಯುತ್ ಪೂರೈಸಲಾಗಿದೆ. ಲೋಡ್ ಶೆಡ್ಡಿಂಗ್ ಮಾಡಿಲ್ಲ. ಭವಿಷ್ಯದಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಲಭ್ಯವಿರುತ್ತದೆ. ಆದರೂ ಬೇರೆ ಕಾರಣಗಳಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತಿದೆ. ಈ ಸಮಸ್ಯೆ ಬಗೆಹರಿಸಿ ಸಮರ್ಪಕ ವಿದ್ಯುತ್ ಪೂರೈಕೆ ಉದ್ದೇಶದಿಂದ ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲು ನಿರ್ಧರಿಸಿದ್ದೇನೆ ಎಂದರು.

ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳಿಂದ 500 ಮೀ. ವ್ಯಾಪ್ತಿಯ ಅಕ್ರಮ ಐಪಿ ಸೆಟ್‍ ಸಕ್ರಮಗೊಳಿಸಲಾಗುವುದು. ಅದಕ್ಕಿಂತ ಹೆಚ್ಚು ಅಂತರವಿರುವ ಕಡೆಗಳಲ್ಲಿ ಕುಸುಮ್ ಬಿ ಯೋಜನೆಯಡಿ ಸೋಲಾರ್ ಪಂಪ್‌ಸೆಟ್‍ ಒದಗಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದಿಂದ ಶೇ.30 ಮತ್ತು ರಾಜ್ಯ ಸರ್ಕಾರದಿಂದ ಶೇ.50 ಸಬ್ಸಿಡಿ ನೀಡಲಾಗುತ್ತದೆ. ರೈತರು ಶೇ.20 ಮೊತ್ತ ಭರಿಸಿ ಪಂಪ್ ಸೆಟ್ ಹಾಕಿಸಿಕೊಳ್ಳಬಹುದು ಎಂದು ತಿಳಿಸಿದರು.

ರಾಜ್ಯದಲ್ಲಿ 2 ಸಾವಿರ ಲೈನ್‍ಮನ್‍ ನೇಮಕಕ್ಕೆ ಇನ್ನು 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ. ಸಾಮಾನ್ಯವಾಗಿ ಲೈನ್‍ಮನ್‍ಗಳ ನೇಮಕ ವೇಳೆ ಒಂದು ಜಿಲ್ಲೆಯವರು ಇನ್ನೊಂದು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿ ನೇಮಕಗೊಳ್ಳುತ್ತಾರೆ. ಬಳಿಕ ತಮ್ಮ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಇದರಿಂದ ಕೆಲವು ಜಿಲ್ಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಲೈನ್‍ಮನ್‍ಗಳ ಕೊರತೆಯಾಗುತ್ತದೆ. ಈ ಹಿನ್ನೆಲೆಯಲ್ಲಿ 2 ಸಾವಿರ ಲೈನ್‍ಮನ್‍ಗಳನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಆಯಾ ಜಿಲ್ಲೆಯವರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದರು.

ವಿದ್ಯುತ್ ಪೂರೈಕೆ ಕುರಿತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ಎಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಆಯಾ ಜಿಲ್ಲೆಯ ಎಸ್ಕಾಂ ಮುಖ್ಯ ಎಂಜಿನಿಯರ್‌ಗಳನ್ನು ಒಳಗೊಂಡಂತೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ನಿರಂತರ ಸಭೆ ನಡೆಸಬೇಕು ಎಂದು ಸೂಚಿಸಲಾಗಿದೆ. ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳಿಗೆ ಕೆಪಿಟಿಸಿಎಲ್ ನಿಂದ ಒಬ್ಬ ಪ್ರತಿನಿಧಿಯನ್ನು ಕಡ್ಡಾಯವಾಗಿ ಕಳುಹಿಸುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!