ಕನ್ನಡಪ್ರಭ ವಾರ್ತೆ ಹಾಸನ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಿರುವುದರಲ್ಲಿ ಸಮಸ್ಯೆಯಿಲ್ಲ. ಇನ್ನು ಎರಡು ದಿನಗಳಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಾಹೇಬರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.ನಗರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಅಸಮಾಧಾನಗೊಂಡಿರುವುದಿಲ್ಲ. ಬಿಜೆಪಿಯ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮತ್ತು ಎಚ್.ಡಿ. ದೇವೇಗೌಡರು ಈ ಬಗ್ಗೆ ಚರ್ಚೆ ಮಾಡಲಿದ್ದಾರೆ. ನಾವು ಇನ್ನೊಂದು ಸೀಟು ಮಾತ್ರ ಹೆಚ್ಚುವರಿ ಕೇಳಿದ್ದೇವೆ. ನಂತರದಲ್ಲಿ ಎಲ್ಲಾ ಸರಿ ಹೋಗಲಿದೆ ಎಂದರು.
ಹಾಸನದಲ್ಲಿ ಬಿಜೆಪಿ ನಾಯಕರ ವಿರೋಧ ನನ್ನ ಗಮನಕ್ಕೆ ಬಂದಿಲ್ಲ, ನನ್ನ ಗಮನಕ್ಕೆ ಬಂದರೆ ಚರ್ಚಿಸುತ್ತೇನೆ. ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ಬಿಜೆಪಿಯ ಹಿರಿಯ ಮುಖಂಡರು, ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ನಾನೂ ಕೂಡ ಯಡಿಯೂರಪ್ಪ ಸಾಹೇಬರ ಭೇಟಿಗೆ ಸಮಯ ಕೇಳಿ ನಾಳೆ, ನಾಡಿದ್ದರೊಳಗೆ ಭೇಟಿ ಮಾಡುತ್ತೇನೆ. ಎಲ್ಲರೂ ಒಂದೇ ವಿಶ್ವಾಸದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.ನಮ್ಮ ಗುರಿ ಇರುವುದು ಕಾಂಗ್ರೆಸ್ಸನ್ನು ಹಾಸನದಿಂದ ದೂರ ಮಾಡಬೇಕು. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಮಂತ್ರಿ ಮಾಡಿ ದೇವೇಗೌಡರ ಕೈ ಬಲಪಡಿಸಬೇಕು ಎನ್ನುವುದಾಗಿದೆ. ಜಿಲ್ಲೆಯ ಅಭಿವೃದ್ಧಿಗೋಸ್ಕರ ಎಲ್ಲಾ ರೀತಿ ಶ್ರಮಿಸುತ್ತೇವೆ. ಮಂಡ್ಯದಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ನಮ್ಮ ಬಳಿ ಮಾಹಿತಿಯಿಲ್ಲ. ಅದನ್ನು ಮಂಡ್ಯದ ಜನ ತೀರ್ಮಾನಿಸುತ್ತಾರೆ. ಅಲ್ಲಿಯೂ ಕಾರ್ಯಕರ್ತರ ಒತ್ತಡ ಕೂಡ ಇದೆ. ಅವರೆಲ್ಲರೂ ಏನು ಅಭಿಪ್ರಾಯ ವ್ಯಕ್ತಪಡಿಸುತ್ತಾರೋ, ದೇವೇಗೌಡರು ಏನು ಸೂಚಿಸುತ್ತಾರೋ ಅದರಂತೆ ಕುಮಾರಣ್ಣ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ತಿಳಿಸುತ್ತಾರೆ. ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲಾ ರೀತಿಯಿಂದಲೂ ಶ್ರಮಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.