ಬೆಳ್ಳುಳ್ಳಿ ದರ ತೀವ್ರ ಕುಸಿತ, ಬೆಳೆಗಾರ ಕಂಗಾಲು

KannadaprabhaNewsNetwork | Published : Mar 20, 2024 1:19 AM

ಸಾರಾಂಶ

ಮಹಾರಾಷ್ಟ್ರ, ಮದ್ಯಪ್ರದೇಶ,ಉತ್ತರಖಂಡ್‌ ರಾಜ್ಯಗಳಲ್ಲಿ ಮತ್ತು ರಾಜ್ಯದ ಹಾವೇರಿ ಸೇರಿದಂತೆ ಹಲವು ಬಾಗಗಳಿಂದ ಮತ್ತು ಸ್ಥಳೀಯವಾಗಿ ಸಹಾ ಬೆಳ್ಳುಳ್ಳಿ ಬೆಳೆ ಹೆಚ್ಚಾಗಿದ್ದರಿಂದ, ಬೆಳೆಗಾರರು ಇಟ್ಟು ಕೊಳ್ಳಲು ಜಾಗವಿಲ್ಲದ ಕಾರಣ ಮಾರಾಟಕ್ಕೆ ಮುಂದಾಗಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬೆಳ್ಳುಳ್ಳಿ ದರ ಕೆಜಿಗೆ 400ರಿಂದ 500 ರು.ವರೆಗೂ ಏರಿಕೆ ಕಂಡಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ ಗ್ರಾಹಕರ ಜೇಬಿಗೆ ಹೊರೆಯಾಗಿತ್ತು. ಆದರೆ ಈಗ ಬೆಳ್ಳುಳ್ಳಿ ದರ ಕ್ರಮೇಣ ಕುಸಿತ ಕಂಡು 50 ರು.ಗಳಿಗೆ ಕುಸಿದಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ರಾಜ್ಯ ಮತ್ತು ಹೊರರಾಜ್ಯಗಳ ಮಾರುಕಟ್ಟೆಗಳಿಂದ ಚಿಕ್ಕಬಳ್ಳಾಪುರ ಎಪಿಎಂಸಿಗೆ ಬೆಳ್ಳುಳ್ಳಿ ಅಧಿಕವಾಗಿ ಬಂದಿದ್ದರಿಂದ ಬೆಳ್ಳುಳ್ಳಿ ದರ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಕ್ವಿಂಟಲ್‌ಗೆ 40 ಸಾವಿರ ತಲುಪಿದ್ದ ದರ

ಕಳೆದ ಇಪ್ಪತ್ತು ದಿನಗಳ ಹಿಂದೆ ಬೆಳ್ಳುಳ್ಳಿ ಪ್ರತಿ ಕ್ವಿಂಟಲ್‌ಗೆ 20 ಸಾವಿರದಿಂದ ರು. 30 ಸಾವಿರದವರೆಗೆ ಮಾರಾಟವಾಗಿತ್ತು. ಗುಣಮಟ್ಟದ ಬೆಳ್ಳುಳ್ಳಿ ಪ್ರತಿ ಕ್ವಿಂಟಲ್‌ಗೆ 40,000 ರು. ವರೆಗೂ ಮಾರಾಟವಾಗುತ್ತಿದೆ. ಪ್ರತಿ ವರ್ಷ ಬೇಸಿಗೆ, ರಂಜಾನ್ ಹಬ್ಬ ಮತ್ತು ಯುಗಾದಿ ಹಬ್ಬಗಳಿಗೆ ಬೆಳ್ಳುಳ್ಳಿಯ ದರ ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ಆವಕ ಹೆಚ್ಚಾಗಿ ಬೆಲೆ ಕುಸಿತವಾಗಿದೆ.ಬೆಲೆ ಏರಿಕೆ ಇದ್ದಾಗ ಜನ 50-60 ರು.ಗಳಿಗೆ 100 ಗ್ರಾಂ, 100 ರೂಗಳಿಗೆ 200 ಗ್ರಾಂ ಕೊಳ್ಳುತ್ತಿದ್ದರು ಆದರೆ ಈಗ ದರ ಕುಸಿತವಾಗಿರುವುದರಿಂದ 50 ರೂಗಳಿಗೆ ಒಂದು ಕೆಜಿ ಮಾರಾಟವಾಗುತ್ತಿದೆ. ಇಂದು ಬೆಳ್ಳುಳ್ಳಿ ಕೊಂಡರೆ ತಿಂಗಳು ಒಂದೂವರೆ ತಿಂಗಳು ಗ್ರಾಹಕರು ಬೆಳ್ಳುಳ್ಳಿಯತ್ತ ನೋಡುವುದಿಲ್ಲಾ ಎಂದು ಹೇಳುತ್ತಾರೆ ತಳ್ಳುಗಾಡಿ ವ್ಯಾಪಾರಿ ಅಸ್ಲಾಂ. ಉತ್ತಮ ಬೆಳೆ, ದರ ಕುಸಿತ

ಅತಿಯಾಗಿ ಬೆಳೆ ಮಹಾರಾಷ್ಟ್ರ, ಮದ್ಯಪ್ರದೇಶ,ಉತ್ತರಖಂಡ್‌ ರಾಜ್ಯಗಳಲ್ಲಿ ಮತ್ತು ರಾಜ್ಯದ ಹಾವೇರಿ ಸೇರಿದಂತೆ ಹಲವು ಬಾಗಗಳಿಂದ ಮತ್ತು ಸ್ಥಳೀಯವಾಗಿ ಸಹಾ ಬೆಳ್ಳುಳ್ಳಿ ಬೆಳೆ ಹೆಚ್ಚಾಗಿದ್ದರಿಂದ, ಬೆಳೆಗಾರರು ಇಟ್ಟು ಕೊಳ್ಳಲು ಜಾಗವಿಲ್ಲದ ಕಾರಣ ಮಾರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಇಂದು ಮಾರುಕಟ್ಟೆಗೆ ವಾಡಿಕೆಗಿಂತ ಹೆಚ್ಚು ಆವಕವಾಗಿದೆ. ಅದರಲ್ಲೂ ಬೆಳ್ಳುಳ್ಳಿ ಕೊಂಚ ಮಟ್ಟಿಗೆ ಹಸಿ ಇರುವ ಕಾರಣ ವರ್ತಕರು ಖರೀದಿಸಲು ಹಿಂದೇಟು ಹಾಕಿದ್ದರು. ಹೀಗಾಗಿ ಬೆಲೆಯಲ್ಲೂ ಗಣನೀಯವಾಗಿ ಇಳಿಕೆ ಕಂಡಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಏಕಾಏಕಿ ದರ ಕುಸಿತವಾಗಿದೆ. ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರ ನಡುವಿನ ಒಪ್ಪಂದದಿಂದ ರೈತರನ್ನು ಬಲಿಪಶು ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ಜರುಗಿಸಬೇಕು. ಪ್ರತಿ ಕ್ವಿಂಟಲ್‌ ಬೆಳ್ಳುಳ್ಳಿಗೆ ಕನಿಷ್ಠ 10 ಸಾವಿರ ರು. ದೊರೆಯುವಂತೆ ಮಾಡಬೇಕು ಎಂದು ಬೆಳ್ಳುಳ್ಳಿ ಮಾರಾಟಕ್ಕೆ ಬಂದಿದ್ದ ರೈತ ವೆಂಟೇಶಪ್ಪ ಒತ್ತಾಯಿಸಿದ್ದಾರೆ.

Share this article