ನರಗುಂದ: ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿರುವ ಸಲ್ಲದು. ನೂತನ ಯೋಜನೆಯಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಗೆ ಹಲವಾರು ಸೌಲಭ್ಯಗಳನ್ನು ನೀಡಲಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಮುಂದಿನ 2047ರ ವಿಕಸಿತ ಭಾರತದತ್ತ ದೂರದೃಷ್ಟಿಕೋನವನ್ನು ಇಟ್ಟುಕೊಂಡು ಯೋಜನೆಯಲ್ಲಿ ಕಾರ್ಮಿಕರಿಗೆ ಹೆಚ್ಚಿಗೆ ಉದ್ಯೋಗ ನೀಡಲಾಗಿದೆ. 100 ದಿನಗಳ ಬದಲು 125 ದಿನ ಕಾರ್ಮಿಕರಿಗೆ ಉದ್ಯೋಗ ಕೊಡಲಾಗುವುದು. ಕಾರ್ಮಿಕರ ಬೇಡಿಕೆಗೆ ಅನುಗುಣವಾಗಿ ಯೋಜನೆ, ಕೇಂದ್ರದಿಂದ ನಿಗದಿತ ಮೊತ್ತ ಒದಗಿಸಲಾಗುವುದು. ಹೆಚ್ಚುವರಿ ಹಣದ ಅವಶ್ಯಕತೆ ಇದ್ದರೆ ರಾಜ್ಯ ಸರ್ಕಾರಗಳು ನೀಡಬೇಕು. ಕೇಂದ್ರ ರಾಜ್ಯ ಹಂಚಿಕೆ ಕೇಂದ್ರ ಸರ್ಕಾರ ಈ ಯೋಜನೆಗೆ ಶೇ. 60ರಷ್ಟು ಹಣ ನೀಡುತ್ತದೆ. ರಾಜ್ಯ ಸರ್ಕಾರ ಶೇ. 40ರಷ್ಟು ಹಣವನ್ನು ಈ ಯೋಜನೆಗೆ ನೀಡಬೇಕು ಎಂದರು.
ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಿಗೆ ಕೇಂದ್ರ ಶೇ. 90ರಷ್ಟು ಈ ಯೋಜನೆಗೆ ಹೆಚ್ಚಿನ ಅನುದಾನ ನೀಡುತ್ತದೆ. ಮೇಲಾಗಿ ಈ ಯೋಜನೆಯಲ್ಲಿ ಶಾಲೆ ಕಟ್ಟಡ, ರಸ್ತೆ, ಚರಂಡಿ ಸೇರಿದಂತೆ ಗ್ರಾಮೀಣ ಪ್ರದೇಶಕ್ಕೆ ಅವಶ್ಯವಿರುವ ಮೂಲ ಸೌಲಭ್ಯಗಳಿಗೆ ಯೋಜನೆ ಅನುದಾನ ಬಳಕೆ ಮಾಡಿಕೊಳ್ಳಲು ಸರಳತೆ ತರಲಾಗಿದೆ. ಆದ್ದರಿಂದ ಈ ಬಗ್ಗೆ ಗ್ರಾಮೀಣ ಭಾಗದ ಜನತೆ ಅರಿತುಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಈ ಯೋಜನೆಗೆ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ನರಗುಂದ ಮಂಡಲ ಅಧ್ಯಕ್ಷ ನಾಗನಗೌಡ ತಿಮ್ಮನಗೌಡ್ರ, ಮಲ್ಲಪ್ಪ ಮೇಟಿ, ಗುರುನಾಥ ಆದಪ್ಪನವರ, ಬಿ.ಬಿ. ಐನಾಪೂರ, ಎಸ್.ಆರ್. ಪಾಟೀಲ, ಅಶೋಕ್ ಜ್ಞಾನೋಪಂತ, ಬಾಬುಗೌಡ ತಿಮ್ಮಣ್ಣಗೌಡರ, ದೇಸಾಯಗೌಡ ಪಾಟೀಲ, ರಾಚಪ್ಪ ಅಳಗವಾಡಿ, ಈರಣ್ಣ ಹೊಂಗಲ, ಪಕ್ಷದ ವಿವಿಧ ಮೋರ್ಚಾ ಪದಾಧಿಕಾರಿಗಳು, ಪಕ್ಷದ ಗುರುಹಿರಿಯರು ಹಾಗೂ ಕಾರ್ಯಕರ್ತರು ಇದ್ದರು.