ಯಾವುದೇ ಕಾರಣಕ್ಕೂ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಲು ಬಿಡಲ್ಲ

KannadaprabhaNewsNetwork | Published : Apr 30, 2025 12:33 AM

ಸಾರಾಂಶ

ನಾನು ರೈತರ ಸಭೆ ಕರೆದು ಚರ್ಚೆ ನಡೆಸಿದ್ದು, ನಿಮ್ಮ ಜೊತೆ ನಾನು ಇರುತ್ತೇನೆ, ಯಾವುದೇ ಕಾರಣಕ್ಕೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿ ಮಾಡಲಿಕ್ಕೆ ಅವಕಾಶವನ್ನು ನೀಡುವುದಿಲ್ಲ

ಕನ್ನಡಪ್ರಭ ವಾರ್ತೆ ಮಾಗಡಿ

ಯಾವುದೇ ಕಾರಣಕ್ಕೂ ಸೋಲೂರು ಹೋಬಳಿಯಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಗಲು ಬಿಡುವುದಿಲ್ಲ ಎಂದು ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್ ಹೇಳಿದರು.

ತಾಲೂಕಿನ ಸೋಲೂರು ಹೋಬಳಿ ದಾಸೇಗೌಡನಪಾಳ್ಯ ಗ್ರಾಮದ ಕೆಂಪೇಗೌಡ ವೃತ್ತದಲ್ಲಿ ಸೋಲೂರು ಹೋಬಳಿಯ 25 ಗ್ರಾಮಗಳ ರೈತರು ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೋಲೂರು ಹೋಬಳಿಯಲ್ಲಿ ನಿರ್ಮಾಣ ಮಾಡುವುದು ಬೇಡ, ರೈತರು ತಮ್ಮ ಭೂಮಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಟ್ಟು ಕೊಡಲು ತಯಾರಿಲ್ಲ‌ ಎಂಬ ಸಂದೇಶವನ್ನು ಸರ್ಕಾರಕ್ಕೆ ಮನವಿ ಮಾಡಿಕೊಡುವುದರ ಜೊತೆಗ ನನ್ನ ಗಮನಕ್ಕೂ ಸಹ ತಂದಿದ್ದು ಕೆಲವು ತಿಂಗಳ ಹಿಂದೆ ಸೊಲದೇವನಹಳ್ಳಿಯಲ್ಲೂ ಸಹ ಈ ವಿಚಾರ ಚರ್ಚೆಯಲ್ಲಿದ್ದಾಗಲೂ ಸಹ ನಾನು ರೈತರ ಸಭೆ ಕರೆದು ಚರ್ಚೆ ನಡೆಸಿದ್ದು, ನಿಮ್ಮ ಜೊತೆ ನಾನು ಇರುತ್ತೇನೆ, ಯಾವುದೇ ಕಾರಣಕ್ಕೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿ ಮಾಡಲಿಕ್ಕೆ ಅವಕಾಶವನ್ನು ನೀಡುವುದಿಲ್ಲ ಎಂದು ಶಾಸಕರು ರೈತರಿಗೆ ಭರವಸೆ ನೀಡಿದರು. ಸೋಲೂರು ಹೋಬಳಿಯ ಜನತೆ 8 ಸಾವಿರ ಕ್ಕೂ ಹೆಚ್ಚು ಬಹು ಮತಗಳನ್ನು ಕೊಟ್ಟು ನನಗೆ ಆಶೀರ್ವಾದ ಮಾಡಿದ್ದು ಪ್ರಾರಂಭದಲ್ಲಿಯೇ ಯಾವ ರೀತಿ ಹೋರಾಟ ಮಾಡಬೇಕೊ ಆ ರೀತಿ ಹೋರಾಟ ಮಾಡಿ ಈ ಭಾಗದಲ್ಲಿ 2 ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ವಶಪಡಿಸಿಕೊಳ್ಳದ ರೀತಿ ಮಾಡುತ್ತೇನೆ, ವಶಪಡಿಸಿಕೊಳ್ಳುವ ಸಂದರ್ಭ ಬಂದಂತಹ ಸಮಯದಲ್ಲಿ ನಿಮ್ಮ ಪರವಾಗಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂಜರಿಯುವುದಿಲ್ಲ ಯಾವುದೇ ರೀತಿಯ ಹೋರಾಟವನ್ನು ನಡೆಸಲು ಸಿದ್ಧನಿದ್ದೇನೆ. ಇದರ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ ಎಂದು ಶಾಸಕ ಶ್ರೀನಿವಾಸ್ ಹೇಳಿದರು.

ಮುಂದಿನ ದಿನಗಳಲ್ಲಿ ಈ ಭಾಗದ ಆಯ್ದ ರೈತರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆ ಸಚಿವರಾದ ಎಂ.ಬಿ.ಪಾಟೀಲ್ ಅವರ ಮನೆಗೆ ನಿಯೋಗವನ್ನು ಕರೆದುಕೊಂಡು ಹೋಗಿ, ನನ್ನ ಲೆಟರ್ ಹೆಡ್‌ನಲ್ಲಿಯೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು, ಬೇರೆ ಭಾಗದಲ್ಲಿ ಮಾಡಿ ಎಂದು ಪತ್ರ ಕೊಡುತ್ತೇನೆ. ಇದು ಏಕಾಏಕಿ ಹುಟ್ಟಿಕೊಂಡಿರುವ ವಿಚಾರ, ಇದಕ್ಕೆ ರೈತರು ಅತಂಕಪಟ್ಟುಕೊಳ್ಳುವುದು ಬೇಡ ಎಂದರು.

ಜಗಣ್ಣಯ್ಯನ ಮಠದ ಪೀಠಾಧ್ಯಕ್ಷರಾದ ಚನ್ನಬಸವ ಸ್ವಾಮೀಜಿಗಳು ಮಾತನಾಡಿ, ಸೋಲೂರು ಹೋಬಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗುವ ಬಗ್ಗೆ ನನಗೆ ದಿನಕ್ಕೆ ನೂರಾರು ಮೇಸೆಜ್‌ಗಳು ಬರುತ್ತಿದ್ದು, ಈ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದು, ರಾತ್ರಿಯ ಸಮಯ ನೆಮ್ಮದಿಯಾಗಿ ನಿದ್ರೆ ಮಾಡುತ್ತಿಲ್ಲ ರೈತರ ಹೋರಾಟಕ್ಕೆ ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀನಿವಾಸ್ ಅವರು ನಮ್ಮ ಜೊತೆ ನಿಲ್ಲುತ್ತೇವೆ ಎಂದು ಹೇಳಿರುವುದು ಸಂತಸದ ವಿಷಯ ಎಂದು ಶ್ಲಾಘೀಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ ಮಾತನಾಡಿ, ಈಗಿರುವ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಕೇವಲ 2 ಟರ್ಮಿನಲ್‌ಗಳಿದ್ದು, ಇನ್ನೂ 4 ಟರ್ಮಿನಲ್‌ಗಳನ್ನು ನಿರ್ಮಿಸಿ ಸಂಚಾರಿ ಒತ್ತಡವನ್ನು ಕಡಿಮೆ ಮಾಡಬಹುದು, ಅಲ್ಲದೇ ಎಚ್.ಎ.ಎಲ್ ವಿಮಾನ ನಿಲ್ದಾಣ ಖಾಲಿ ಇದ್ದು, ಅಲ್ಲೂ ಸಹ ವಿಮಾನ ನಿಲ್ದಾಣ ನಿರ್ಮಿಸಬೇಕು. ಅದನ್ನು ಬಿಟ್ಟು, ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂಡು 2 ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿದರು, ತಾಪಂ ಮಾಜಿ ಸದಸ್ಯ ಶಂಕರಪ್ಪ, ಬಿಜೆಪಿ ಮುಖಂಡ ಭೃಂಗೀಶ್, ಮರಿಕುಪ್ಪೆ ಕಾಂತರಾಜು, ಗುಡೇಮಾರನಹಳ್ಳಿ ಗ್ರಾ.ಪಂ ಅಧ್ಯಕ್ಷೆ ವರಲಕ್ಷ್ಮಿ ದಾಸಪ್ಪ, ಲಕ್ಕೇನಹಳ್ಳಿ ಗ್ರಾ.ಪಂ ಅಧ್ಯಕ್ಷ ನಾರಾಯಣ್, ಮೋಟಗೊಂಡನಹಳ್ಳಿ ಗ್ರಾ.ಪಂ ಅಧ್ಯಕ್ಷ ಕುಮಾರ್, ರೈತ ಹೋರಾಟಗಾರ ಮಂಠಪ ಗೀರಿಶ್, ರಾಮೇಗೌಡ, ಶಿಕ್ಷಕ ಕೋಡಿಹಳ್ಳಿ ರೇಣುಕಾರಾಧ್ಯ, ಮಖಂಡರಾದ ವೆಂಕಟಪ್ಪ, ಲಲಿತಾದಾಸ್, ಲೋಕೇಶ್, ಮೋಹನ್, ಶಿವಣ್ಣ, ಶ್ರೀನಿವಾಸ್, ಮರಿಯಣ್ಣ, ತಿಮ್ಮೇಗೌಡ ಭಾಗವಹಿಸಿದ್ದರು.

Share this article