₹340 ಕೋಟಿ ಕೋವಿಡ್‌ ವೆಚ್ಚಕ್ಕೆ ದಾಖಲೆಗಳೇ ಇಲ್ಲ!

KannadaprabhaNewsNetwork |  
Published : Nov 13, 2024, 12:05 AM IST
ಕೋವಿಡ್‌ | Kannada Prabha

ಸಾರಾಂಶ

ಬಿಜೆಪಿ ಅವಧಿಯಲ್ಲಿನ ಕೋವಿಡ್‌ ಅಕ್ರಮದ ಕುರಿತಂತೆ ನ್ಯಾ. ಮೈಕಲ್‌ ಡಿ.ಕುನ್ಹಾ ತನಿಖಾ ಆಯೋಗ ನೀಡಿರುವ ವರದಿಯ ಮತ್ತಷ್ಟು ಅಂಶಗಳು ಬಹಿರಂಗಗೊಂಡಿದ್ದು, ಕೋವಿಡ್‌ ನಿಯಂತ್ರಣಕ್ಕೆ ರಾಷ್ಟ್ರೀಯ ಆರೋಗ್ಯ ಯೋಜನೆಗೆ ಸರ್ಕಾರ ನೀಡಿದ್ದ ಅನುದಾನದಲ್ಲಿ 340 ಕೋಟಿ ರು. ವೆಚ್ಚದ ದಾಖಲೆಗಳನ್ನೇ ಮಂಗಮಾಯ ಮಾಡಲಾಗಿದೆ ಎಂಬ ಸಂಗತಿ ಬಯಲಾಗಿದೆ.

- ಮಾನ್ಯತೆ ಇಲ್ಲದ ಲ್ಯಾಬ್‌ಗೂ ಟೆಸ್ಟ್‌ ಹೊಣೆ- ಜಾಗೃತಿ ಕಾರ್‍ಯಕ್ಕೂ ನಿಯಮ ಮೀರಿ ಹಣ- ನ್ಯಾ। ಕುನ್ಹಾ ಆಯೋಗ ವರದಿಯಲ್ಲಿ ಪತ್ತೆ

- ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 1747 ಕೋಟಿ ರು. ಕೊಟ್ಟಿತ್ತು- ಆ ಹಣವನ್ನು ಕೋವಿಡ್‌ ಪರೀಕ್ಷೆ, ಪಿಪಿಇ ಕಿಟ್ ಖರೀದಿಯಂತಹ ಕೆಲಸಕ್ಕೆ ಬಳಕೆ ಎಂದು ಮಾಹಿತಿ- ಆದರೆ 1406 ಕೋಟಿ ವೆಚ್ಚದ ದಾಖಲೆಗಳು ಲಭ್ಯ. ಉಳಿದ 340 ಕೋಟಿ ರು. ವೆಚ್ಚಕ್ಕೆ ದಾಖಲೆ ಇಲ್ಲ- ಮೀಸಲಿಟ್ಟ ಅನುದಾನದ ವೆಚ್ಚದ ಲೆಕ್ಕಪತ್ರದಲ್ಲಿ ಭಾರೀ ವ್ಯತ್ಯಾಸ: ನ್ಯಾ। ಕುನ್ಹಾ ಆಯೋಗ ವರದಿ

--ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿ ಅವಧಿಯಲ್ಲಿನ ಕೋವಿಡ್‌ ಅಕ್ರಮದ ಕುರಿತಂತೆ ನ್ಯಾ. ಮೈಕಲ್‌ ಡಿ.ಕುನ್ಹಾ ತನಿಖಾ ಆಯೋಗ ನೀಡಿರುವ ವರದಿಯ ಮತ್ತಷ್ಟು ಅಂಶಗಳು ಬಹಿರಂಗಗೊಂಡಿದ್ದು, ಕೋವಿಡ್‌ ನಿಯಂತ್ರಣಕ್ಕೆ ರಾಷ್ಟ್ರೀಯ ಆರೋಗ್ಯ ಯೋಜನೆಗೆ ಸರ್ಕಾರ ನೀಡಿದ್ದ ಅನುದಾನದಲ್ಲಿ 340 ಕೋಟಿ ರು. ವೆಚ್ಚದ ದಾಖಲೆಗಳನ್ನೇ ಮಂಗಮಾಯ ಮಾಡಲಾಗಿದೆ ಎಂಬ ಸಂಗತಿ ಬಯಲಾಗಿದೆ.

ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 1,747.42 ಕೋಟಿ ರು. ಅನುದಾನ ನೀಡಿತ್ತು. ಕೋವಿಡ್‌ ಪರೀಕ್ಷೆ, ಸಹಾಯವಾಣಿ, ಪಿಪಿಇ ಕಿಟ್‌ ಖರೀದಿ ಸೇರಿದಂತೆ ಮತ್ತಿತರ ಕಾರ್ಯಕ್ಕಾಗಿ ಆ ಮೊತ್ತವನ್ನು ವೆಚ್ಚ ಮಾಡಿರುವುದಾಗಿ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಯೋಜನಾ ನಿರ್ದೇಶಕರು ನ್ಯಾ. ಮೈಕಲ್‌ ಡಿ.ಕುನ್ಹಾ ತನಿಖಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

ಆದರೆ, 1,747.42 ಕೋಟಿ ರು. ಮೊತ್ತದಲ್ಲಿ 1,406.56 ಕೋಟಿ ರು. ವೆಚ್ಚದ ದಾಖಲೆಗಳು ಮಾತ್ರ ಲಭ್ಯವಾಗಿದ್ದು, ಉಳಿದಂತೆ 340.85 ಕೋಟಿ ರು. ವೆಚ್ಚದ ದಾಖಲೆಗಳೇ ದೊರೆತಿಲ್ಲ ಎಂಬುದನ್ನು ತನಿಖಾ ಆಯೋಗದ ವರದಿ ತಿಳಿಸಿದೆ. ಕೇಂದ್ರ ಸರ್ಕಾರ ನಿಯಮಾನುಸಾರ ಬಳಕೆಗಾಗಿ ಮೀಸಲಿಟ್ಟಿದ್ದ ಅನುದಾನದ ವೆಚ್ಚದ ಲೆಕ್ಕಪತ್ರದಲ್ಲಿ ಭಾರೀ ವ್ಯತ್ಯಾಸವಾಗಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು:

ದಾಖಲೆಗಳನ್ನು ಪರಿಶೀಲಿಸಿದಾಗ ಕೊರೋನಾ ಸೋಂಕಿತರ ಪರೀಕ್ಷೆ ಹೊಣೆಯನ್ನು ಐಸಿಎಂಆರ್‌ ಮಾನ್ಯತೆ ಹೊಂದಿಲ್ಲದ 14 ಖಾಸಗಿ ಲ್ಯಾಬ್‌ಗಳಿಗೆ ನೀಡಲಾಗಿತ್ತು. ಈ 14 ಲ್ಯಾಬ್‌ಗಳಿಗೆ ನಿಯಮ ಬಾಹಿರವಾಗಿ 6.93 ಕೋಟಿ ರು. ಹಣ ನೀಡಲಾಗಿದೆ. ಅದರಲ್ಲೂ 8 ಲ್ಯಾಬ್‌ಗಳೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳದೇ ಹಾಗೂ ಆಡಳಿತಾತ್ಮಕ ಅನುಮೋದನೆ ಪಡೆಯದೇ 4.28 ಕೋಟಿ ರು. ಪಾವತಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜತೆಗೆ ಕೆಲ ಲ್ಯಾಬ್‌ಗಳಿಗೆ ಕಾರ್ಯಾದೇಶವನ್ನು ನೀಡಿಲ್ಲ ಮತ್ತು ಕರಾರು ಮಾಡಿಕೊಂಡಿಲ್ಲ. ಹೀಗೆ ನಿಯಮ ಉಲ್ಲಂಘಿಸಿ ಹಣ ಪಾವತಿಸಿದ ಅಧಿಕಾರಿಗಳ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಆಯೋಗ ಶಿಫಾರಸು ಮಾಡಿದೆ.

ಜಾಗೃತಿ ಮೂಡಿಸುವಲ್ಲಿ ನಿಯಮ ಉಲ್ಲಂಘನೆ:

ಕೊರೋನಾ ತಡೆಗೆ ಜಾಗೃತಿ ಮೂಡಿಸಲು ಪ್ರಚಾರಕ್ಕೆ 7.03 ಕೋಟಿ ರು. ವ್ಯಯಿಸಲಾಗಿದೆ. ಅದರಲ್ಲಿ ಚುಕ್ಕಿ ಟಾಕೀಸ್‌ ಸಂಸ್ಥೆಗೆ ನಿಯಮ ಬಾಹಿರವಾಗಿ 8.85 ಲಕ್ಷ ರು. ಪಾವತಿಸಲಾಗಿದೆ. ಅಲ್ಲದೆ, ಕೆಲ ಜಾಹೀರಾತು ಏಜೆನ್ಸಿಗಳಿಗೆ ಹಣ ಪಾವತಿಸಿದ್ದಕ್ಕೆ ಸೂಕ್ತ ದಾಖಲೆಗಳನ್ನೇ ಆರೋಗ್ಯ ಇಲಾಖೆ ನೀಡಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಚುಕ್ಕಿ ಟಾಕೀಸ್‌ ಸಂಸ್ಥೆಯಿಂದ 8.85 ಲಕ್ಷ ರು. ವಸೂಲಿ ಮಾಡುವಂತೆ ತಿಳಿಸಲಾಗಿದೆ.

ಅದರ ಜತೆಗೆ ಕೊರೋನಾಗೆ ಸಂಬಂಧಿಸಿದಂತೆ ನೆರವು ನೀಡಲು ಸ್ಥಾಪಿಸಲಾಗಿದ್ದ ಆಪ್ತಮಿತ್ರ ಸಹಾಯವಾಣಿಗೆ ಹಣ ಖರ್ಚು ಮಾಡಿರುವುದಕ್ಕೂ ದಾಖಲೆಗಳಿಲ್ಲ ಎಂಬುದನ್ನು ತನಿಖಾ ಆಯೋಗ ತಿಳಿಸಿದೆ. ಆಪ್ತಮಿತ್ರ ಹೆಸರಿನಲ್ಲಿ ಜಾರಿಗೊಳಿಸಲಾಗಿದ್ದ ಸಹಾಯವಾಣಿಯನ್ನು 2 ಬಿಪಿಒ ಸಂಸ್ಥೆಗಳಿಗೆ ನೀಡಲಾಗಿತ್ತು. ಅದಕ್ಕಾಗಿ ಆ ಸಂಸ್ಥೆಗಳಿಗೆ 4.19 ಲಕ್ಷ ರು. ಹಣ ನೀಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ಆ ಸಂಸ್ಥೆಗಳಿಗೇ ಹಣ ಪಾವತಿಸಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲದಂತಾಗಿದೆ.

ಇಸಿಆರ್‌ಪಿ ಹಣ ಬಳಕೆಯಲ್ಲೂ ಲೋಪ:

ಕೊರೋನಾ ಅವಧಿಯಲ್ಲಿ ಬಳಕೆಯಾದ ಎಲ್ಲ ಕ್ರಮಗಳಲ್ಲೂ ತಪ್ಪನ್ನು ಹುಡುಕಿರುವ ತನಿಖಾ ಆಯೋಗ, ತುರ್ತು ಕೊರೋನಾ ಪ್ರತಿಕ್ರಿಯೆ ಯೋಜನೆ (ಇಸಿಆರ್‌ಪಿ)ಯಲ್ಲೂ ತಪ್ಪೆಸಗಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಇಸಿಆರ್‌ಪಿಗಾಗಿ ಮೀಸಲಿಟ್ಟಿದ್ದ 447 ಕೋಟಿ ರು.ಗಳಲ್ಲಿ 330.90 ಕೋಟಿ ರು. ವೆಚ್ಚದ ದಾಖಲೆಗಳು ಲಭ್ಯವಿದ್ದು, ಉಳಿದಂತೆ 106 ಕೋಟಿ ರು. ವೆಚ್ಚದ ದಾಖಲೆಗಳಿಲ್ಲ ಎಂಬುದನ್ನು ವರದಿಯಲ್ಲಿ ಮಾಹಿತಿ ನೀಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!