ಕಾಂಗ್ರೆಸ್ ನಿಂದ ಮಾದಿಗ ಸಮುದಾಯಕ್ಕೆ ಮಹಾ ವಂಚನೆ

KannadaprabhaNewsNetwork |  
Published : Nov 13, 2024, 12:05 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ   | Kannada Prabha

ಸಾರಾಂಶ

ಚಿತ್ರದುರ್ಗ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಮಾದಿಗ ಸಮುದಾಯಕ್ಕೆ ಮಹಾ ವಂಚನೆ ಮಾಡಿದೆ ಎಂದು ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಆರೋಪಿಸಿದರು.

ಚಿತ್ರದುರ್ಗ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಮಾದಿಗ ಸಮುದಾಯಕ್ಕೆ ಮಹಾ ವಂಚನೆ ಮಾಡಿದೆ ಎಂದು ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಆರೋಪಿಸಿದರು. ಇಲ್ಲಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಮೂರು ತಿಂಗಳಾಗಿದ್ದರೂ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಲ್ಲಿಕಾರ್ಜುನ ಖರ್ಗೆ ಕಡೆ ಬೆರಳು ತೋರಿಸಿ ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತ ನಾಟಕವಾಡುತ್ತಿದ್ದಾರೆ. ಇಂತಹ ನಾಟಕ ನೋಡಿ ಸಾಕಾಗಿದೆ ಎಂದರು. ಒಳ ಮೀಸಲಾತಿಗಾಗಿ ಮಾದಿಗ ಸಮುದಾಯ ಕಳೆದ ಮೂವತ್ತು ವರ್ಷಗಳ ಕಾಲ ನಡೆಸಿದ ಹೋರಾಟಕ್ಕೆ ಸುಪ್ರೀಂಕೋರ್ಟ್ ತೀರ್ಪಿನಿಂದ ಜಯ ಸಿಕ್ಕಂತಾಗಿದ್ದರೂ, ರಾಜ್ಯ ಸರ್ಕಾರ ಅನುಷ್ಠಾನಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ. ರಾಜ್ಯದಲ್ಲಿ ನಡೆಯುವ ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮಾದಿಗರು ಮತ ಚಲಾಯಿಸಲು ಕಟಿಬದ್ಧರಾಗಿದ್ದಾರೆ. ಒಳ ಮೀಸಲಾತಿ ಜಾರಿಗೆ ಇನ್ನು ವಿಳಂಬ ಮಾಡಿದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋಲನ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸದಾಶಿವ ಆಯೋಗ ವರದಿ ಕೊಟ್ಟರೂ ನೆನೆಗುದಿಗೆ ಬಿದ್ದಿತು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಕೇಂದ್ರಕ್ಕೆ ವರದಿ ಸಲ್ಲಿಸಿತು. ಈಗಿನ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಕುರಿತು ಚಕಾರವೆತ್ತುತ್ತಿಲ್ಲ. ಮೊದಲಿನಿಂದಲೂ ದಲಿತರಿಗೆ ಮೋಸ ಮಾಡಿಕೊಂಡು ಬರುತ್ತಿದೆ. ಕಾಂಗ್ರೆಸ್ ಸರ್ಕಾರದ ಮೋಸ ಹಾಗೂ ದ್ರೋಹವನ್ನು ರಾಜ್ಯದ ಮಾದಿಗ ಸಮುದಾಯದ ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯವಾದಿ ಸುರೇಶ್.ಎಸ್.ಕೆ ಮಾತನಾಡಿ, ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿ 3 ತಿಂಗಳಾಗಿದೆ. ಇನ್ನು ಒಳ ಮೀಸಲಾತಿ ಜಾರಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸು ಮಾಡುತ್ತಿಲ್ಲದಿರುವುದನ್ನು ನೋಡಿದರೆ ಹಿಂದಿನಿಂದಲೂ ಮಾದಿಗರನ್ನು ವಂಚಿಸಿಕೊಂಡು ಬರುತ್ತಿದ್ದಾರೆನ್ನುವುದರಲ್ಲಿ ಅನುಮಾನವಿಲ್ಲ. ಶೋಷಿತರ ಪರ ಎಂದು ಸದಾ ಕೊಚ್ಚಿಕೊಳ್ಳುವ ಸಿದ್ದರಾಮಯ್ಯನವರು ಈ ವಿಚಾರದಲ್ಲಿ ನೇಪಥ್ಯಕ್ಕೆ ಸರಿಯುವುದು ಎಷ್ಟರ ಮಟ್ಟಿಗೆಸರಿ ಎಂದು ಪ್ರಶ್ನಿಸಿದರು. ಒಳ ಮೀಸಲಾತಿ ಶೀಘ್ರವೇ ಜಾರಿಗೊಳಿಸಿ ಮಾದಿಗರಿಗೆ ಸಾಮಾಜಿಕ ನ್ಯಾಯ ಒದಗಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ದೇವರಾಜ್ ಮಾತನಾಡಿ, ನ.13 ರಂದು ನಡೆಯುವ ರಾಜ್ಯದ ಮೂರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವಂತೆ ಮಾದಿಗರಿಗೆ ಕರೆ ನೀಡಿದ್ದು, ದಲಿತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಕ್ಕ ಪಾಠ ಕಲಿಸಲಾಗವುದು ಎಂದರು.

ಸುದ್ದಿಗೋಷ್ಠಿಯಲ್ಲಿ ವಕೀಲ ಎಲ್.ಸುರೇಶ್ ಕೂಡ್ಲಹಳ್ಳಿ, ವಿಜಯ್‍ಕುಮಾರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ
ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು