ಕೆಲಸದಲ್ಲಿ ನಿಷ್ಠೆ ಇಲ್ಲದಿದ್ದರೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ: ಎಚ್‌.ಎಲ್‌.ನಾಗರಾಜು

KannadaprabhaNewsNetwork | Published : Jun 24, 2024 1:38 AM

ಸಾರಾಂಶ

ರೈತರ ಕೆಲಸಗಳನ್ನು ತಪ್ಪದೇ ಮಾಡಿಕೊಡಬೇಕು, ಸಮಾಜ ಮೆಚ್ಚಿಸುವ ಹಾಗೆ ಯಾರು ಕೆಲಸ ಮಾಡಲು ಸಾಧ್ಯವಿಲ್ಲ. ಹತ್ತು ಜನರಲ್ಲಿ ನಮ್ಮ ಪರ ಎಂಟು ಮಂದಿ ಇದ್ದರೆ, ಉಳಿದಿಬ್ಬರು ದೂರು ಹೇಳಿಕೊಂಡೇ ಹೆಸರು ಹಾಳು ಮಾಡುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳದೇ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರಿ ಕೆಲಸದಲ್ಲಿ ನಿಷ್ಠೆ ಇಲ್ಲದಿದ್ದರೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ ಎಂಬುದನ್ನು ಅರಿತು ಸೇವಾ ಮನೋಭಾವಯಿಂದ ಕೆಲಸ ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ಎಚ್‌.ಎಲ್‌.ನಾಗರಾಜು ನೌಕರರಿಗೆ ಸಲಹೆ ನೀಡಿದರು.

ನಗರದ ಕೃಷಿಕ ಸರ್ವೋದಯ ಟ್ರಸ್ಟ್ ಸಹಯೋಗದಲ್ಲಿ ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಟ್ರಸ್ಟ್‌ನಲ್ಲಿ ತರಬೇತಿ ಪಡೆದ ಸರ್ಕಾರಿ ವಿವಿಧ ಹುದ್ದೆ ಪಡೆದ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಕೆಲಸಕ್ಕೆ ಬಂದಿರುವುದು ನಾವು ಸಂತೋಷ ಪಡುವುದಕ್ಕಲ್ಲ. ಇದನ್ನು ನೌಕರರು ಅರಿತರೆ ನಾವು ನಿಷ್ಠೆಯಿಂದ ಇದ್ದರೆ ಅಪ್ರಾಮಾಣಿಕತೆಯು ಕೆಲವು ಬಾರಿ ನಮ್ಮ ಕೈಹಿಡಿಯುತ್ತದೆ. ಹಾಗಾಗಿ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ರೈತರ ಕೆಲಸಗಳನ್ನು ತಪ್ಪದೇ ಮಾಡಿಕೊಡಬೇಕು, ಸಮಾಜ ಮೆಚ್ಚಿಸುವ ಹಾಗೆ ಯಾರು ಕೆಲಸ ಮಾಡಲು ಸಾಧ್ಯವಿಲ್ಲ. ಹತ್ತು ಜನರಲ್ಲಿ ನಮ್ಮ ಪರ ಎಂಟು ಮಂದಿ ಇದ್ದರೆ, ಉಳಿದಿಬ್ಬರು ದೂರು ಹೇಳಿಕೊಂಡೇ ಹೆಸರು ಹಾಳು ಮಾಡುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳದೇ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.

ಮಂಡ್ಯ ಕೃಷಿಕ್‌ ಸರ್ವೋದಯ ಟ್ರಸ್ಟ್‌ ಕಾರ್ಯಾಧ್ಯಕ್ಷ ರಾಮಲಿಂಗಯ್ಯ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಒತ್ತು ನೀಡುವುದು ಮುಖ್ಯವಾಗಬೇಕು. ನಮ್ಮ ಟ್ರಸ್ಟ್‌ನ ಉದ್ದೇಶವು ಸಹ ಪ್ರತಿಯೊಂದು ಗ್ರಾಮದಲ್ಲಿಯೂ ಒಬ್ಬ ಐಎಎಸ್ ಅಧಿಕಾರಿ ಸಿಗಬೇಕು ಎಂಬುವ ನಿಟ್ಟಿನಲ್ಲಿ ತರಬೇತಿ ನೀಡುತ್ತಿದ್ದೇವೆ. ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಇದೇ ವೇಳೆ ಸರ್ಕಾರಿ ಹುದ್ದೆ ಪಡೆದಿರುವ ಹಿರಿಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಟ್ರಸ್ಟ್‌ನ ಉಪಾಧ್ಯಕ್ಷ ಎಂ. ಮಾದಯ್ಯ, ಕಾರ್ಯದರ್ಶಿ ಕೆ.ಬಿ.ಬೋರಯ್ಯ, ಜಂಟಿ ಕಾರ್ಯದರ್ಶಿ ಎಸ್‌.ಟಿ.ರಾಮಚಂದ್ರ, ಖಜಾಂಚಿ ಎಸ್‌.ಲೋಕೇಶ್‌, ಧರ್ಮದರ್ಶಿ ಸಿ.ಎಲ್‌.ನಂಜರಾಜು, ಶೈಕ್ಷಣಿಕ ಸಂಯೋಜಕ ಎಚ್‌.ಡಿ.ವಿಶ್ವನಾಥ್‌ , ಸಂಘಟನಾ ಕಾರ್ಯದರ್ಶಿ ಡಿ.ರವಿಕುಮಾರ್ ಭಾಗವಹಿಸಿದ್ದರು.

Share this article