ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಮಕ್ಕಳಿಗೆ ಕಳಪೆ ಆಹಾರ ಪೂರೈಸಿದ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ಶಾಲಾ ಮಕ್ಕಳಿಗೆ ಕಳಪೆ ಮಟ್ಟದ ಆಹಾರ ಪೂರೈಕೆ ಮಾಡಿರುವ ಏಜೆನ್ಸಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ತಾಲೂಕಿನ ದೋರನಹಳ್ಳಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ 200ಕ್ಕೂ ಹೆಚ್ಚು ಮಕ್ಕಳಿಗೆ ಹೊಟ್ಟೆ ನೋವು, ವಾಂತಿ, ಭೇದಿ ಶುರುವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿದ್ಯಾರ್ಥಿಗಳು ಸೇವಿಸಿರುವ ಆಹಾರವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಮಕ್ಕಳ ಅಸ್ವಸ್ಥತೆಗೆ ಕಾರಣವಾದ ಆಹಾರ ಬದಲಿಗೆ ಬೇರೆ ಆಹಾರ ಪರೀಕ್ಷೆಗೆ ಒಳಪಡಿಸಿ, ಈ ಪ್ರಕರಣ ಮುಚ್ಚಿ ಹಾಕುವ ಅನುಮಾನವಿದೆ ಎಂದು ಆರೋಪಿಸಿದ್ದಾರೆ.
ನಗರದ ನಿರ್ಮಲಾದೇವಿ ಮಹಿಳಾ ಸಂಘದ ವತಿಯಿಂದ ತಾಲೂಕಿನ 13 ಶಾಲೆಗಳಿಗೆ ಬಿಸಿಯೂಟ ಪೂರೈಸಲಾಗುತ್ತಿದೆ. ಈ ಘಟನೆ ನಡೆಯಲು ಗುತ್ತಿಗೆದಾರನ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ಆರೋಪಿಸಲಾಗಿದೆ. ಬಡ ಮಕ್ಕಳ ಜೀವದ ಜೊತೆ ಆಟವಾಡಿದ ಏಜೆನ್ಸಿಯ ವಿರುದ್ಧ ಕ್ರಮ ಜರುಗಿಸದೆ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅಧಿಕಾರಿಗಳು ಸತ್ಯವನ್ನು ಮರೆಮಾಚುವ ಪ್ರಯತ್ನವೇನಾದರೂ ಮಾಡಿದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಮಿತಿಯ ರಾಜ್ಯ ಉಪ ಪ್ರಧಾನ ಸಂಚಾಲಕ ನಾಗಣ್ಣ ಬಡಿಗೇರ್, ತಾಲೂಕು ಸಂಚಾಲಕ ಚಂದ್ರಕಾಂತ್ ಬಜೇರಿ, ಜಿಲ್ಲಾ ಸಂಚಾಲಕ ಮರಳು ಸಿದ್ದಪ್ಪ ನಾಯ್ಕಲ್, ಜಿಲ್ಲಾ ಸಂಘಟನಾ ಸಂಚಾಲಕ ಬಸವರಾಜ್ ಅಣಬಿ, ಜಿಲ್ಲಾ ಖಜಾಂಚಿ ಪರಶುರಾಮ ರೋಜಾ, ತಾಲೂಕು ಸಂಘಟನಾ ಸಂಚಾಲಕ ಮಾನಪ್ಪ ಮುದುಕನೊರ್, ಹೈಯ್ಯಾಳಪ್ಪ ದೇವರಕರ್, ಸುರೇಶ್ ಪೂಜಾರಿ, ನಾಗರಾಜ್ ಬೊಮ್ನಳ್ಳಿ ಶರಣಪ್ಪ ಸಾಧು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.