ಕನ್ನಡಪ್ರಭ ವಾರ್ತೆ ಸಾಗರ
ಬುಧವಾರ ಮಾಧ್ಯಮದವರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಬಾವಿ ಮುಚ್ಚಿರುವ ಪ್ರದೇಶವನ್ನು ತೋರಿಸಿ ಪ್ರಕರಣದ ಮಾಹಿತಿ ನೀಡಿದ ಪ್ರಮುಖರು, ೧೯೫೯ರಲ್ಲಿ ಸಮಾನ ಮನಸ್ಕರು ಸೇರಿ ಸ್ವಾಮಿ ವಿವೇಕಾನಂದ ಪುಸ್ತಕ ಭಂಡಾರವನ್ನು ಆರಂಭಿಸಿದೆವು. ಆರಂಭದಲ್ಲಿ ಶ್ರೀರಾಮ ದೇವಸ್ಥಾನ, ಕಾನ್ಲೆ ಛತ್ರದಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಕೆಲವರ್ಷಗಳ ನಂತರ ಸಂಸ್ಥೆಗೆ ಸ್ವಂತ ಜಾಗ ಬೇಕು ಎನ್ನುವ ಕಾರಣಕ್ಕಾಗಿ ಪುರಸಭೆಗೆ ಮನವಿ ಸಲ್ಲಿಸಿದಾಗ ಪುರಸಭೆಯ ಅಂದಿನ ಆಡಳಿತದಲ್ಲಿರುವವರು ಗಾಂಧಿನಗರದಲ್ಲಿ ೬೫-೨೫ ಅಳತೆಯ ಜಾಗವನ್ನು ಸಂಸ್ಥೆಗೆ ಖರೀದಿಗೆ ನೀಡಿದ್ದರು. ಅದಕ್ಕೆ ಸಂಭಂದಿಸಿದ ದಾಖಲೆಗಳು ನಮ್ಮ ಬಳಿ ಇದ್ದು ಇದುವರೆಗೂ ಕಂದಾಯ ಕಟ್ಟಲಾಗುತ್ತಿದೆ. ಈ ಜಾಗದಲ್ಲಿ ೧೯೮೯-೯೦ರಲ್ಲಿ ನಾವೇ ಬಾವಿಯನ್ನು ತೆಗೆಸಿದ್ದೆವು. ಬಾವಿ ನೀರನ್ನು ಸುತ್ತಮುತ್ತಲಿನ ನಿವಾಸಿಗಳು ಬಳಸುತ್ತಿದ್ದರು. ಕ್ರಮೇಣ ನೀರನ್ನು ಬಳಸುವವರ ಸಂಖ್ಯೆ ಕಡಿಮೆಯಾಗಿ ಬಾವಿಗೆ ಕಸ, ಸತ್ತ ಪ್ರಾಣಿಗಳನ್ನು ತಂದುಹಾಕಲಾಗುತ್ತಿತ್ತು ಎಂದು ವಿವರಿಸಿದರು.
ಸಂಸ್ಥೆಯು ಈ ಜಾಗದಲ್ಲಿ ಸಮುದಾಯ ಭವನ, ಗ್ರಂಥಾಲಯ ನಿರ್ಮಿಸಬೇಕು ಎನ್ನುವ ಮಹತ್ತರ ಉದ್ದೇಶ ಇಟ್ಟುಕೊಂಡಿತ್ತು. ಈ ದಿಸೆಯಲ್ಲಿ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಲಾಗಿದೆ. ಹಾಲಿ ಬಾವಿ ನೀರನ್ನು ಯಾರೂ ಬಳಸದೆ ಇರುವುದರಿಂದ, ಕಸಕಡ್ಡಿಗಳ ಗುಂಡಿಯಾಗಿ ಮಾರ್ಪಾಡಾಗುತ್ತಿದ್ದರಿಂದ ಅಲ್ಲದೆ ಬಾವಿ ಇರುವ ಜಾಗದಲ್ಲಿಯೇ ಉದ್ದೇಶಿತ ಸಮುದಾಯ ಭವನ ನಿರ್ಮಾಣ ಮಾಡುವುದರಿಂದ ನಾವೇ ಈ ಬಾವಿಯನ್ನು ಮುಚ್ಚಿದ್ದೇವೆ. ಬಾವಿ ನಮ್ಮ ಸಂಸ್ಥೆಗೆ ಸೇರಿದ್ದೆ ಹೊರತು ಸರ್ಕಾರಿ ಬಾವಿ ಅಲ್ಲ. ನಮಗೆ ಬಾವಿ ಮುಚ್ಚಲು ಶಾಸಕರು ಯಾವುದೇ ರೀತಿಯ ಸೂಚನೆ ನೀಡಿರಲಿಲ್ಲ. ಇದರಲ್ಲಿ ಶಾಸಕರ ಯಾವುದೆ ಪಾತ್ರವಿಲ್ಲ ಎಂದು ಹೇಳಿದರು.ಪರ್ಯಾಯವಾಗಿ ಮತ್ತೊಂದು ಬಾವಿ: ಮತ್ತೊಂದು ಬಾವಿ ನಿರ್ಮಿಸಿರುವ ಬಗ್ಗೆ ಸ್ಪಷ್ಟೀಕರಣ ನೀಡಿದ ಪೌರಾಯುಕ್ತ ಎಚ್.ಕೆ.ನಾಗಪ್ಪ, ಈ ವರ್ಷ ಮಳೆ ಕೊರತೆಯಿಂದ ಮುಂದೆ ಕುಡಿಯುವ ನೀರಿಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕಾಗಿ ಶಾಸಕರು ಪರ್ಯಾಯ ಬಾವಿ ನಿರ್ಮಿಸಲು ಸೂಚಿಸಿದರು. ಸಂಸ್ಥೆಗೆ ಸೇರಿದ ಜಾಗಕ್ಕೆ ಸಮೀಪವೆ ಇರುವ ಜಾಗದಲ್ಲಿ ನೀರಿನ ಸೆಲೆ ಸಿಕ್ಕಿದ್ದರಿಂದ ಅಲ್ಲಿಯೇ ಮತ್ತೊಂದು ಬಾವಿಯನ್ನು ನಗರಸಭೆಯಿಂದ ನಿರ್ಮಿಸಲಾಗಿದೆ. ಪಾರದರ್ಶಕವಾಗಿ ಟೆಂಡರ್ ಕರೆದು ಹೊಸ ಬಾವಿ ನಿರ್ಮಿಸಲಾಗಿದೆ. ಪುಸ್ತಕ ಭಂಡಾರ ಸಂಸ್ಥೆಗೆ ಸೇರಿದ ಜಾಗದಲ್ಲಿದ್ದ ಬಾವಿ ಮುಚ್ಚುವಲ್ಲಿ ಶಾಸಕರಾಗಲಿ, ನಗರಸಭೆಯದ್ದಾಗಲಿ ಪಾತ್ರವಿಲ್ಲ ಎಂದು ಹೇಳಿದರು.
ಮುಚ್ಚಿರುವ ಬಾವಿ ಸರ್ಕಾರಿ ಬಾವಿ ಅಲ್ಲ ಎನ್ನುವುದಕ್ಕೆ ದಾಖಲೆಗಳಿವೆ. ಸಂಸ್ಥೆಯವರೆ ಬಾವಿ ಮುಚ್ಚಿಸಿಕೊಂಡಿದ್ದಾರೆ. ಆದರೆ ನಗರಸಭೆ ಚುನಾವಣೆ ಬರುತ್ತಿದೆ ಎಂದು ಬಿಜೆಪಿಯ ಕೆಲವರು, ಮಾಜಿ ಸಚಿವರು ರಾದ್ಧಾಂತ ಸೃಷ್ಟಿಸಿದ್ದಾರೆ. ಅಷ್ಟಕ್ಕೂ ಮಾಜಿ ಸಚಿವರು ತಮ್ಮ ಅಕ್ಕಪಕ್ಕದಲ್ಲಿ ಓಸಿ ಬಿಡ್ಡರ್‌ಗಳನ್ನು, ರೌಡಿ ಪಟ್ಟಿಯಲ್ಲಿದ್ದವರನ್ನು ಇರಿಸಿಕೊಂಡು ಓಡಾಡುತ್ತಿದ್ದಾರೆ. ವಿದ್ಯಾಸಂಸ್ಥೆಯೊಂದರ ಸರ್ವಸದಸ್ಯರ ಸಭೆಗೆ ನುಗ್ಗಿ ತಮ್ಮ ಪಟಾಲಂ ಜೊತೆ ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡಿಸಿದ್ದಾರೆ. ಅಂತಹ ಕೆಟ್ಟ ವ್ಯಕ್ತಿತ್ವ ನನ್ನದ್ದಲ್ಲ. ನನ್ನ ಬೆಳವಣಿಗೆ ಸಹಿಸಿಕೊಳ್ಳದೇ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.