ಕಳೆದ ಸುಮಾರು ೫ ವರ್ಷಗಳಿಂದ ಹದಗೆಟ್ಟಿರುವ ಹಳೇ ದಾಂಡೇಲಿಯ ರಸ್ತೆ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
೫ ವರ್ಷಗಳಿಂದ ಹದಗೆಟ್ಟಿರುವ ಮಾರ್ಗ, ಸಾರ್ವಜನಿಕರ ಆಕ್ರೋಶ
ಗುರುಶಾಂತ ಜಡೆಹಿರೇಮಠ
ಕನ್ನಡಪ್ರಭ ವಾರ್ತೆ ದಾಂಡೇಲಿ
ಕಳೆದ ಸುಮಾರು ೫ ವರ್ಷಗಳಿಂದ ಹದಗೆಟ್ಟಿರುವ ಹಳೇ ದಾಂಡೇಲಿಯ ರಸ್ತೆ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
ಒಳಚರಂಡಿ ಮತ್ತು ನೀರಿನ ಪೈಪ್‌ಲೈನ್ ಕಾಮಗಾರಿಗಾಗಿ ರಸ್ತೆಯನ್ನು ಅಗೆದ ಪರಿಣಾಮ ಈ ರಸ್ತೆ ಈಗ ಶಾಪಗ್ರಸ್ತ ಎಂಬಂತಾಗಿದೆ. ಸಾರ್ವಜನಿಕ ವಲಯದಲ್ಲಿಯೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಳೇ ದಾಂಡೇಲಿಯಿಂದ ಪಟೇಲ ನಗರದ ವರೆಗಿನ ರಸ್ತೆ ಸಂಪೂರ್ಣ ಹೊಂಡ-ಗುಂಡಿಗಳಿಂದ ತುಂಬಿದೆ. ಕೆಲವು ಕಡೆ ರಸ್ತೆಯೇ ಕುಸಿದು ಗುಂಡಿಗಳು ರಸ್ತೆಯನ್ನು ನುಂಗಿದ ಹಾಗಿದೆ. ಈ ರಸ್ತೆ ನಗರದ ಪ್ರಮುಖ ಭಾಗವಾಗಿದ್ದು, ಇಲ್ಲಿ ಕೆನರಾ ಬ್ಯಾಂಕ್, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಉರ್ದು ಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜ್, ಅಂಗನವಾಡಿ ರಾಜ್ಯ ಸಾರಿಗೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ಘಟಕ, ಕಲ್ಯಾಣ ಮಂಟಪ ದೇವಸ್ಥಾನ, ಮಸೀದಿ, ಚರ್ಚ್ ಮತ್ತು ಮೂರು ಸಮುದಾಯಗಳ ಸ್ಮಶಾನಗಳು ಇವೆ.
ಇಷ್ಟೆಲ್ಲ ಇದ್ದರೂ ರಸ್ತೆ ಮಾತ್ರ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ. ಪ್ರತಿ ದಿನ ದ್ವಿಚಕ್ರವಾಹನ ಸವಾರರು ಬಿದ್ದು, ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಆಟೋ ರಿಕ್ಷಾಗಳು ಬಂದ ಬಾಡಿಗೆ ಹಣವನ್ನು ದುರಸ್ತಿಗೆ ಹಾಕುವ ಪರಿಸ್ಥಿತಿ ಬಂದಿದೆ. ಸಾರಿಗೆ ಬಸ್‌ಗಳು ಪ್ರತಿದಿನ ಗ್ಯಾರೇಜಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಲು ಕೂಡ ಅಲ್ಲಿನ ನಿವಾಸಿಗಳು ಪರದಾಡುವಂತಾಗಿದೆ. ಮಳೆಗಾಲದಲ್ಲಿ ರುದ್ರಭೂಮಿಗೆ ಶವ ತಗೆದುಕೊಂಡು ಹೋಗಲು ಹರಸಹಾಸ ಪಡಬೇಕಾದ ಸ್ಥಿತಿಯಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವ ಪ್ರಯೋಜನವೂ ಆಗಿಲ್ಲ ಎಂದು ಸಾರ್ವಜನಿಕರು ಅಳಲು ತೊಡಿಕೊಳ್ಳುತ್ತಾರೆ.
ಮಳೆಗಾಲ ಮುಗಿದ ಬಳಿಕವಾದರೂ ಈ ಬಾರಿ ಶಾಪಗ್ರಸ್ತ ರಸ್ತೆಯು ಸರಿಯಾಗುವುದೇ ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದೆ.ರಸ್ತೆ ಅವ್ಯವಸ್ಥೆ ಬಗ್ಗೆ ಮಾಹಿತಿ ಇದೆ. ಸೆಪ್ಟೆಂಬರ್ ಮೊದಲ ವಾರದಿಂದ ಶಾಶ್ವತ ರಸ್ತೆ ಕಾಮಗಾರಿ ಆರಂಭವಾಗಲಿದೆ. ಅಲ್ಲಿಯ ವರೆಗೆ ಮಳೆಗಾಲದ ತೊಂದರೆ ಗಮನಿಸಿ ಮುಂದಿನ ವಾರದೊಳಗೆ ಹೊಂಡ-ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ವಿವೇಕ ಬನ್ನೆ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.