ಹಾನಗಲ್ಲದಲ್ಲಿ ಬಹುತೇಕ ಮನೆಯವರು ನಳದ ನೀರನ್ನು ನೇರವಾಗಿ ಮೋಟರ್ ಪಂಪ್ ಮೂಲಕ ಸಂಗ್ರಹಿಸುತ್ತಿರುವುದರಿಂದ ಮುಂದಿನ ಮನೆಗಳಿಗೆ ನೀರು ತಲುಪುತ್ತಿಲ್ಲ. ಸಮಸ್ಯೆ ಪರಿಹರಿಸಲಾಗದೆ ಹಾನಗಲ್ಲ ಪುರಸಭೆ ಅಸಹಾಯಕತೆ ವ್ಯಕ್ತಪಡಿಸಿದೆ.
ಮಾರುತಿ ಶಿಡ್ಲಾಪೂರ
ಹಾನಗಲ್ಲ: ಪಟ್ಟಣಕ್ಕೆ ಕುಡಿಯುವ ನೀರಿನ ವಿತರಣೆಯಲ್ಲಿ ಒಂದಿಲ್ಲೊಂದು ಸಮಸ್ಯೆ ಉಂಟಾಗುತ್ತಲೇ ಇದೆ. ಬಹುತೇಕ ಮನೆಯವರು ನಳದ ನೀರನ್ನು ನೇರವಾಗಿ ಮೋಟರ್ ಪಂಪ್ ಮೂಲಕ ಸಂಗ್ರಹಿಸುತ್ತಿರುವುದರಿಂದ ಮುಂದಿನ ಮನೆಗಳಿಗೆ ನೀರು ತಲುಪುತ್ತಿಲ್ಲ. ಈ ಸಮಸ್ಯೆ ಪರಿಹರಿಸಲಾರದ ಅಸಹಾಯಕತೆ ಪುರಸಭೆಯದ್ದಾಗಿದೆ.
೩೫ ಸಾವಿರ ಜನಸಂಖ್ಯೆಯ ಹಾನಗಲ್ಲ ಪಟ್ಟಣದಲ್ಲಿ ೭೪೦೦ ಮನೆಗಳಿವೆ. ೫೮೦೦ ಮನೆಗಳಿಗೆ ಪುರಸಭೆಯ ಕುಡಿಯುವ ನೀರಿನ ನಳದ ಸಂಪರ್ಕವಿದೆ. ೮-೯ ದಿನಕ್ಕೊಮ್ಮೆ ನೀರು ಜನರಿಗೆ ಸಿಗುತ್ತಿದೆ.
ಈಗ ಪಟ್ಟಣದಲ್ಲಿ ಶೇ. ೮೦ರಷ್ಟು ನಳಗಳಿಗೆ ನೇರವಾಗಿ ಮೋಟರ್ ಅಳವಡಿಸಿದ್ದಾರೆ. ಹೀಗಾಗಿ ಕೆಲವು ಮನೆಗಳಿಗೆ ನೀರೇ ಇಲ್ಲದ ಪರಿಸ್ಥಿತಿ ಬಂದೊದಗಿದೆ. ಕೆಲವರ ಮನೆ ನಳಗಳಲ್ಲಿ ಅತಿ ಸಣ್ಣಗೆ ನೀರು ಬರುತ್ತದೆ. ಮೋಟಾರ್ ಅಳವಡಿಸಿದವರಿಗೆ ಭರಪೂರ ನೀರು.
ಮೋಟಾರ್ ಅಳವಡಿಸಿಕೊಂಡವರು ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾರೆ. ನಮ್ಮ ನಳದಲ್ಲಿ ನೀರು ಸಣ್ಣಗೆ ಬರುತ್ತಿತ್ತು. ಬಹುತೇಕರು ಪುರಸಭೆ ನಳಕ್ಕೆ ಮೋಟರ್ ಅಳವಡಿಸಿ ನೀರು ಪಡೆಯುತ್ತಾರೆ ಎಂದು ತಿಳಿಯಿತು. ನಾವೂ ಮೋಟರ್ ಹಚ್ಚಿ ನೀರು ಪಡೆಯುತ್ತಿದ್ದೇವೆ. ೭-೮ ದಿನಕ್ಕೊಮ್ಮೆ ನೀರು ಬರುವುದರಿಂದ ಅಷ್ಟು ದಿನಕ್ಕಾಗುವಷ್ಟು ನೀರು ಸಂಗ್ರಹಿಸಿಕೊಳ್ಳುವುದು. ಸಮಸ್ಯೆಗೆ ಪರಿಹಾರ ನೀಡಿ, ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ಎನ್ನುತ್ತಾರೆ.
ಮೋಟಾರ್ ಅಳವಡಿಸದೇ ಎಲ್ಲ ಮನೆಗಳಿಗೂ ಸರಿಯಾಗಿ ನೀರು ಹರಿಸಲು ಬೇಕಾಗುವಷ್ಟು ನೀರಿನ ಸಂಗ್ರಹ ನಮ್ಮಲ್ಲಿಲ್ಲ. ಈಗಿರುವುದು ಕೇವಲ ೪೦ ಲಕ್ಷ ಲೀಟರ್ ಸಾಮರ್ಥ್ಯದ ನೀರು ಸಂಗ್ರಹದ ಟ್ಯಾಂಕ್. ೮೦ ಲಕ್ಷ ಲೀಟರ್ ಸಂಗ್ರಹದ ಟ್ಯಾಂಕ್ ಅಗತ್ಯ. ಹೊಸ ಟ್ಯಾಂಕ್ ನಿರ್ಮಾಣವಾದರೆ ಮಾತ್ರ ಎಲ್ಲ ಮನೆಗಳಿಗೂ ಸಮಪ್ರಮಾಣದ ಒತ್ತಡದ ನೀರು ಹರಿಸುವುದು ಸಾಧ್ಯ. ಅದು ಶೀಘ್ರ ಸಾಧ್ಯವಾಗುವಂತಹದ್ದಲ್ಲ ಎಂಬುದು ಪುರಸಭೆಯಿಂದ ತಿಳಿದುಬಂದ ಸಂಗತಿಯಾಗಿದೆ. ಇನ್ನು ಪಟ್ಟಣಕ್ಕೆ ನಿರಂತರ ನೀರು ಹರಿಸುವ ಯೋಜನೆಗೆ ಬಹುಕಾಲವೇ ಬೇಕಾದೀತು.
₹೩೬ ಕೋಟಿ ವೆಚ್ಚದಲ್ಲಿ ಧರ್ಮಾ ಜಲಾಶಯದ ನೀರು ಪಟ್ಟಣಕ್ಕೆ ಒದಗಿಸುವ ಯೋಜನೆ ಕಾಮಗಾರಿ ಪೂರ್ಣಗೊಂಡು, ಇದರೊಂದಿಗೆ ನೀರು ಸಂಗ್ರಹದ ಟ್ಯಾಂಕ್ ಕಾಮಗಾರಿಯೂ ಪೂರ್ಣವಾದರೆ ಸ್ವಲ್ಪ ಪ್ರಮಾಣದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದು.
4-5 ದಿನಕ್ಕೆ ಪೂರೈಸುವ ಗುರಿ: ಒಂದು ಕಡೆಗೆ ನೀರಿನ ಪೂರೈಕೆ ಸವಾಲುಗಳು ಪುರಸಭೆಗಿದ್ದರೆ, ಇನ್ನೊಂದೆಡೆ ಸಾರ್ವಜನಿಕರು ನೀರು ಪೋಲು ಮಾಡುವುದು ಸಮಸ್ಯೆಯಾಗಿದೆ. ನಳ ಟ್ಯಾಪ್ ಮುರಿದರೂ ಅದನ್ನು ದುರಸ್ತಿ ಮಾಡುತ್ತಿಲ್ಲ. ಅನಿವಾರ್ಯವಾಗಿ ಹೊಸದಾಗಿ ಜೋಡಿಸುವ ನಳಗಳಿಗೆ ಪುರಸಭೆಯೇ ಟ್ಯಾಪ್ ಅಳವಡಿಸುವ ಯೋಜನೆ ರೂಪಿಸಿದೆ. ಈ ಬೇಸಿಗೆಯಲ್ಲಿ ೪-೫ ದಿನಕ್ಕೊಮ್ಮೆಯಾದರೂ ನೀರು ಪೂರೈಸುವ ಸಂಕಲ್ಪ ನಮ್ಮದು. ಆದರೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹೇಳಿದರು.
ಪುರಸಭೆ ನೀರು ಯಾರುಗುಂಟು ಯಾರಿಗಿಲ್ಲ ಎನ್ನುವಂತಾಗಿದೆ. ನೀರು ಬರುವುದೇ ೮-೯ ದಿನಕ್ಕೊಮ್ಮೆ. ಅದು ಕೂಡ ನಮ್ಮ ಮನೆ ನಳಕ್ಕೆ ಬರುವುದೇ ಇಲ್ಲ. ಪುರಸಭೆಗೆ ದೂರು ಹೇಳಿ ಹೇಳಿ ಸಾಕಾಗಿದೆ. ಈಗ ನಾವೂ ಮೋಟರ್ ಹಚ್ಚಿಕೊಳ್ಳುವುದೇ ಪರಿಹಾರ ಎಂದು ಹಲವು ಸಲಹೆ ನೀಡಿದ್ದಾರೆ. ಆದರೂ ಪುರಸಭೆ ಇದಕ್ಕೆ ಪರಿಹಾರ ಕೊಟ್ಟೀತು ಎಂದು ಕಾಯುತ್ತಿದ್ದೇವೆ ಎಂದು ಹಾನಗಲ್ಲ ಪಟ್ಟಣ ನಾಗರಿಕರೊಬ್ಬರು ಹೇಳುತ್ತಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.