ಚೇಳೂರು : ಭೈರಪ್ಪನಹಳ್ಳಿ ಗ್ರಾಮಕ್ಕೆ ಅಧಿಕಾರಿಗಳು 35 ಗುಂಟೆ ಸರ್ಕಾರಿ ಜಾಗವನ್ನು ಪರಿಶಿಷ್ಟ ಸಮುದಾಯಕ್ಕೆಂದು ಸ್ಮಶಾನ ಜಾಗ ಕಾಯ್ದಿರಿಸಿ ಸುಮಾರು ನಾಲ್ಕು ವರ್ಷ ಕಳೆದರೂ ಜಾಗ ಹದ್ದು ಬಸ್ತು ಮಾಡಿ ಮಂಜೂರು ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.
ತಾಲೂಕಿನ ಆಂಧ್ರದ ಗಡಿಭಾಗದಲ್ಲಿ ಇರುವ ಚೇಳೂರು ತಾಲೂಕಿನ ಭೈರಪ್ಪನಹಳ್ಳಿ ಗ್ರಾಮದಲ್ಲಿ ದಲಿತರಿಗೆ ಸಾರ್ವಜನಿಕ ಸ್ಮಶಾನ ಇಲ್ಲದೆ ಜನರು ಕೊನೆ ಗಳಿಗೆಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಪರದಾಡುತ್ತಿದ್ದಾರೆ.
ನಾಲ್ಕು ದಶಕಗಳ ಸಮಸ್ಯೆ
ಸುಮಾರು ನಲವತ್ತು ವರ್ಷಗಳಿಂದ ದಲಿತರು ಸತ್ತರೆ ಕೆಲವರು ತಮ್ಮ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಿದರೆ ಜಮೀನು ಇಲ್ಲದವರು ಗ್ರಾಮಕ್ಕೆ ಆಂಟಿಕೊಂಡಿರುವ ಕೆರೆಯಲ್ಲಿ ಅಂತ್ಯ ಸಂಸ್ಕಾರ ಮಾಡಿಕೊಂಡು, ನೆನಪಿಗಾಗಿ ಸಮಾಧಿ, ಕಲ್ಲಿನ ಗುರುತು ಹಾಕಿಕೊಂಡಿದ್ದಾರೆ.
ಈ ಗ್ರಾಮದಲ್ಲಿ ದಲಿತರು ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು ಇದುವರೆಗೆ ಸ್ಮಶಾನ ಜಾಗವಿಲ್ಲ, ಹಲವಾರು ಜನ ತಮ್ಮ ಜಮೀನು ಬಳಿ ತಮ್ಮ ಸ್ವಂತ ನೆಲೆಯಲ್ಲಿ ಮಣ್ಣು ಮಾಡುತ್ತಾರೆ ಜಮೀನು ಇಲ್ಲದವರ ಪರಿಸ್ಥಿತಿ ಅಂತೂ ಹೆಣವನ್ನು ಎಲ್ಲಿ ಹೂಳು ವುದು ಎಂಬುದೇ ಬಹು ದೊಡ್ಡ ಸಮಸ್ಯೆ ಎದುರಾಗಿದೆ.ಗುರುತಿಸದ ಜಮೀನು ಒತ್ತುವರಿ
ಇದನ್ನು ಅರಿತ ತಹಸೀಲ್ದಾರ್ ಕ್ರಮ ಕೈಗೊಂಡು ಸ್ಮಶಾನಕ್ಕಾಗಿ ಸರ್ವೇ ನಂಬರ್ 80 ರಲ್ಲಿ 35 ಗುಂಟೆ ಗುರುತು ಮಾಡಿ ಹದ್ದುಬಸ್ತು ಮಾಡಿದರೇ ಹೊರತು ಭೂಮಿ ಮಂಜೂರು ಮಾಡದೆ ಕೈತೊಳೆದುಕೊಂಡಿದ್ದಾರೆ. ಇದರಿಂದ ಈ ಸ್ಮಶಾನ ಜಾಗವನ್ನು ಪಕ್ಕದಲ್ಲಿ ವ್ಯವಸಾಯ ಮಾಡುವ ಮೇಲ್ವರ್ಗದ ಪ್ರಭಾವಿಗಳು ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ,
ಈಗಲಾದರೂ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಆಡಳಿತ ಕ್ರಮ ಕೈಗೊಂಡು ದಲಿತರಿಗೆ ಸ್ಮಾಶಾನಕ್ಕೆ ಜಾಗ ಕಲ್ಪಿಸುವಂತೆ ಗ್ರಾಮದ ದಲಿತರು ಒತ್ತಾಯಿಸಿದ್ದಾರೆ .