ಎಸ್‌ಐಆರ್‌ ಕುರಿತು ಬಿಜೆಪಿ ಆರೋಪದಲ್ಲಿ ಹುರುಳಿಲ್ಲ: ರೈ

KannadaprabhaNewsNetwork |  
Published : Jul 10, 2026, 01:30 AM IST
ಮಾಜಿ ಸಚಿವ ರಮಾನಾಥ ರೈ ಸುದ್ದಿಗೋಷ್ಠಿ | Kannada Prabha

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಸರಿಯಾದ ರೀತಿಯಲ್ಲಿಯೇ ಮತದಾರರ ಪಟ್ಟಿ ಪರಿಷ್ಕರಣೆಯಾಗುತ್ತಿದ್ದು, ಜನತೆ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಮಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಸರಿಯಾದ ರೀತಿಯಲ್ಲಿಯೇ ಮತದಾರರ ಪಟ್ಟಿ ಪರಿಷ್ಕರಣೆಯಾಗುತ್ತಿದ್ದು, ಜನತೆ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಎಸ್‌ಐಆರ್‌ ಪರಿಷ್ಕರಣೆಯಲ್ಲಿ ನಂಬರ್‌ ವನ್‌ ಸ್ಥಾನ ಪಡೆಯಬೇಕು. ಪಾರದರ್ಶಕವಾಗಿ ಮತದಾರರ ಪಟ್ಟಿ ಪರಿಷ್ಕರಣೆಯಾಗುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.ಅರ್ಹ ಮತದಾರರು ಮತದಾರ ಪಟ್ಟಿಯಿಂದ ಹೊರಗುಳಿಯಬಾರದು ಎಂಬುದು ನಮ್ಮ ಉದ್ದೇಶ. ಅಧಿಕಾರಿಗಳು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು. ಬೂತ್‌ ಲೆವೆಲ್‌ ಆಫೀಸರ್‌ಗಳೊಂದಿಗೆ ಸಮನ್ವಯದಿಂದ ಪರಿಷ್ಕರಣಾ ಕಾರ್ಯನಿರ್ವಹಿಸಿದಾಗ ಯಾವುದೇ ಗೊಂದಲಗಳಿಗೆ ಅವಕಾಶವಿರುವುದಿಲ್ಲ. ಬಿಜೆಪಿಯವರು ಸುಖಾ ಸುಮ್ಮನೆ ಗುಲ್ಲೆಬ್ಬಿಸುತ್ತಿರುವುದರಲ್ಲಿ ಅರ್ಥವಿಲ್ಲ ಎಂದರು.ಬಿಎಲ್‌ಒಗಳು ಯಾವ ರಾಜಕೀಯ ಪಕ್ಷದವರು ಎಂಬುದು ಯಾರಿಗೂ ಅರಿವಿಲ್ಲ. ಹಾಗಾಗಿ ಅವರ ಕೆಲಸದ ಬಗ್ಗೆ ಅನುಮಾನ ಬೇಡ. ಹಾಗಾಗಿ ಕಾಂಗ್ರೆಸ್‌ ಮತದಾರರ ಹೆಚ್ಚಿರುವ ಕಡೆ ಬಿಎಲ್‌ಒಗಳಿಂದ ಶೇ. 100 ರಷ್ಟು ಎನುಮರೇಶನ್‌ ಪತ್ರ ನೀಡಲಾಗಿದೆ ಎಂಬ ಬಿಜೆಪಿಯವರ ಆರೋಪಗಳು ರಾಜಕೀಯ ಪ್ರೇರಿತ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಮಾನಾಥ ರೈ, ನಮ್ಮ ಜಿಲ್ಲೆಯಲ್ಲಿ ಪಾರದರ್ಶಕವಾಗಿ ಎಸ್‌ಐಆರ್‌ ಪ್ರಕ್ರಿಯೆ ನಡೆದು ರಾಜ್ಯಕ್ಕೆ ನಂ. 1 ಆಗಿ ಮತದಾರರ ಪಟ್ಟಿ ಪರಿಷ್ಕರಣೆಯಾಗುವ ಭರವಸೆ ನನಗಿದೆ ಎಂದರು.

ಎಸ್‌ಐಆರ್‌ ಪ್ರಕ್ರಿಯೆಯ ಕಾರಣಕ್ಕೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜನನ ಮರಣ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ನಿಲ್ಲಬಾರದು ಎಂದು ರಮಾನಾಥ ರೈ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಅಯೋಧ್ಯೆಯ ಶ್ರೀರಾಮ ಮಂದಿರದ ಹೆಸರಿನಲ್ಲಿ ಸಂಗ್ರಹವಾದ ಹಣದ ದುರುಪಯೋಗವಾಗಿರುವುದರ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್‌ ಪ್ರಮುಖರಾದ ಮಮತಾ ಗಟ್ಟಿ, ಬೇಬಿ ಕುಂದರ್‌, ಪದ್ಮನಾಭ ಕೋಟ್ಯಾನ್‌, ಮಂಜುಳಾ ನಾಯಕ್‌, ಹೊನ್ನಯ್ಯ, ಗೀತಾ , ಸಚಿನ್‌, ಯೋಗೀಶ್‌, ಶಬೀರ್‌ ಸಿದ್ಧಕಟ್ಟೆ, ಸುಭೋದ್‌ ಆಳ್ವ, ಸುಹಾನ್‌ ಆಳ್ವ, ಜೋಕಿಂ, ಪ್ರಸಾದ್‌ ಜೈನ್‌, ಪ್ರಕಾಶ್‌ ಸಾಲಿಯಾನ್‌, ದಿನೇಶ್‌, ವಿಕಾಸ್‌ ಶೆಟ್ಟಿ, ಸುನಿಲ್‌ ಮತ್ತಿತರರು ಇದ್ದರು.

ಹರಿಪ್ರಸಾದ್‌ ಹೇಳಿದ್ದು ಸರಿ: ನಿಗಮ ಮಂಡಳಿಗಳ ಅಧ್ಯಕ್ಷರ ಅವಧಿ ಎರಡೂವರೆ ವರ್ಷಕ್ಕೊಮ್ಮೆ ಬದಲಾಯಿಸುವುದರ ಕುರಿತ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರ ಹೇಳಿಕೆಯ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮಾನಾಥ ರೈ, ಎಲ್ಲರಿಗೂ ಅವಕಾಶ ಸಿಗಬೇಕು. ನಿಗಮ ಮಂಡಳಿಗಳ ಅಧ್ಯಕ್ಷರ ಅವಧಿ ಎರಡೂವರೆ ವರ್ಷಕ್ಕೆ ಸೀಮಿತಗೊಳಿಸುವುದರಿಂದ ಅನೇಕ ಹಿರಿಯ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು.ಧರ್ಮ, ದೇಶ ಪ್ರೇಮದ ಹೆಸರಿನ ಜತೆಗೆ ಅಯೋಧ್ಯೆ ದೇವರ ಹೆಸರಿನಲ್ಲೂ ಲೂಟಿ ನಡೆದಿರುವುದು ಬೇಸರದ ಸಂಗತಿ. ಕೊಲ್ಲೂರು ದೇವಳದಿಂದ ಶಿಕ್ಷಣ ಸಂಸ್ಥೆಯೊಂದು ಚೆಕ್‌ ಮೂಲಕ ಊಟದ ಹಣ ಪಡೆಯುತ್ತಿದ್ದನ್ನು ನಿಲ್ಲಿಸಿದ್ದಕ್ಕೆ ನನ್ನನ್ನು ವಿರೋಧಿಸಲಾಗಿತು. ಆದರೆ ಇದೀಗ ಧರ್ಮದ ಹೆಸರಿನಲ್ಲಿ ದೇವರ ಹುಂಡಿಗೆ ಕೈ ಹಾಕಿದ್ದಾರೆ.

-ರಮಾನಾಥ ರೈ, ಮಾಜಿ ಸಚಿವರು

ಪಕ್ಷದ ಹುದ್ದೆಗೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರ ಹೇಳಿಕೆಗೆ ನನ್ನ ಸಹಮತವಿದೆ. ಹಿರಿಯ ಕಾಂಗ್ರೆಸ್‌ ಕಾರ್ಯಕರ್ತರಿಗೆ ಪಕ್ಷದ ವಿವಿಧ ಹುದ್ದೆಗಳಲ್ಲಿ ಅವಕಾಶ ನೀಡಬೇಕು ಎಂಬುದು ನನ್ನ ಬೇಡಿಕೆ ಕೂಡ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರಮಾನಾಥ ರೈ, ನಾನು ಮಂತ್ರಿಯಾಗಿ ಕೆಲಸ ಮಾಡಿದವನು. ನಿಗಮ ಮಂಡಳಿ ನಾನು ಕೇಳುವುದಿಲ್ಲ. ಜನರ ಮಧ್ಯೆ ಇದ್ದು ನಾಯಕತ್ವ ಪಡೆಯಲು ಬಯಸುವವನು ನಾನು. ಇವತ್ತಿಗೂ ಕಾರ್ಯಕರ್ತರ ಜತೆಗಿದ್ದು ಕೆಲಸ ಮಾಡುತ್ತಿದ್ದೇನೆ. ನಾನು ಪ್ರಾಮಾಣಿಕ, ಕ್ರಿಯಾಶೀಲ, ಕಪ್ಪು ಚುಕ್ಕೆ ಇಲ್ಲದೆ ಬದುಕುತ್ತಿದ್ದೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಹಗಾರರ ಪ್ರೋತ್ಸಾಹಿಸಿ: ಹರಿಕೃಷ್ಣ ಪುನರೂರು
14ರೊಳಗೆ ಏತ ನೀರಾವರಿಗೆ ನೀರು ಹರಿಸಿ: ಎಸ್.ಕೆ. ಬೆಳ್ಳುಬ್ಬಿ