ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ರೈತರ ಬೆಳೆಗಳು ಒಣಗುತ್ತಿದ್ದು, ತುರ್ತಾಗಿ ಜುಲೈ 14ರೊಳಗೆ ಜಿಲ್ಲೆಯ ಪ್ರಮುಖ ಏತ ನೀರಾವರಿ ಯೋಜನೆಗಳಿಗೆ ನೀರು ಹರಿಸಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್.ಕೆ. ಬೆಳ್ಳುಬ್ಬಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ರೈತರ ಬೆಳೆಗಳು ಒಣಗುತ್ತಿದ್ದು, ತುರ್ತಾಗಿ ಜುಲೈ 14ರೊಳಗೆ ಜಿಲ್ಲೆಯ ಪ್ರಮುಖ ಏತ ನೀರಾವರಿ ಯೋಜನೆಗಳಿಗೆ ನೀರು ಹರಿಸಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್.ಕೆ. ಬೆಳ್ಳುಬ್ಬಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.ಈ ಕುರಿತು ನೀರಾವರಿ ನಿಗಮದ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿರುವ ಅವರು, ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಳು ಹಾಗೂ ಆಲಮಟ್ಟಿ ಎಡ ಮತ್ತು ಬಲದಂಡೆಯ ಲಿಫ್ಟ್ ನೀರಾವರಿ ಯೋಜನೆಗಳನ್ನು ಕೂಡಲೇ ಕಾರ್ಯಾರಂಭಗೊಳಿಸುವಂತೆ ಸೂಚಿಸಿದ್ದಾರೆ.
ಮನವಿ ಬಳಿಕ ಮಾತನಾಡಿದ ಬೆಳ್ಳುಬ್ಬಿ, ಮಳೆಯ ಕೊರತೆಯಿಂದ ರೈತರು ಹಾಕಿರುವ ಬೆಳೆಗಳು ಒಣಗುವ ಹಂತ ತಲುಪಿವೆ. ಬೆಳೆ ನಷ್ಟದ ಜೊತೆಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೀವ್ರ ಸಮಸ್ಯೆಯಾಗುವ ಆತಂಕವಿದೆ. ಮಹಾಪೂರದ ನೀರು ಲಭ್ಯವಾದ ಕೂಡಲೇ ಯಾವುದೇ ವಿಳಂಬ ಮಾಡದೆ ಈ ಯೋಜನೆಗಳಿಗೆ ನೀರು ಹರಿಸಿ ರೈತರ ಬೆಳೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು.ಉಗ್ರ ಹೋರಾಟದ ಎಚ್ಚರಿಕೆ:
ಜುಲೈ 14ರೊಳಗೆ ನೀರು ಹರಿಸುವಲ್ಲಿ ಆಡಳಿತ ಮಂಡಳಿ ವಿಫಲವಾದರೆ ರೈತರ ಹಿತದೃಷ್ಟಿಯಿಂದ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದವರು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ರಮೇಶ ಆಲಮಟ್ಟಿ, ಚಂದ್ರಸೇನ ದೇಸಾಯಿ, ಮುತ್ತು ಕಾಜಗಾರ, ಸಂತೋಷ ಕಡಿ, ಬಸವರಾಜ ಸಾತಿಹಾಳ, ಶರಣು ಮುರನಾಳ, ಶ್ರೀಶೈಲ ಓಡಗಲ್, ಬಸವರಾಜ ಪೂಜಾರಿ, ಸಿದ್ದು ಗಣಿ, ಯಲಗೂರದಪ್ಪ ವಗ್ಗರ, ವಿಠ್ಠಲ ವಗ್ಗರ, ಸಂಗಪ್ಪ ಏಳಗಂಟಿ ಸೇರಿದಂತೆ ಹಲವರು ಇದ್ದರು.