ಕನ್ನಡಪ್ರಭ ವಾರ್ತೆ ಮಂಡ್ಯ
ಪಕ್ಷದ ರಾಜ್ಯ ನಾಯಕರು, ಜಿಲ್ಲಾ ನಾಯಕರ ನಡವಳಿಕೆಯಿಂದ ತೀವ್ರ ಬೇಸರಗೊಂಡು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಪತ್ರಕರ್ತರೊಂದಿಗೆ ದುಃಖ-ದುಮ್ಮಾನ ಹಂಚಿಕೊಂಡರು.
ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ನನಗೆ ಯಾವ ಬೇಸರವೂ ಇಲ್ಲ. ನಾಯಕರ ನಿರ್ಧಾರದ ಬಗ್ಗೆ ನನಗೆ ಅಸಹನೆ ಇದೆ. ಅದಕ್ಕಾಗಿ ಅವರನ್ನು ಬೆಂಬಲಿಸುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಸುಮಲತಾ ಪರ ಕಳೆದ ಚುನಾವಣೆಯಲ್ಲಿ ಸಾಕಷ್ಟು ಶ್ರಮಿಸಿದೆ. ಆದರೆ, ಗೆದ್ದ ಮೇಲೆ ನಮಗೆ ಯಾವ ಬೆಲೆಯೂ ಸಿಗದಿದ್ದರಿಂದ ದೂರವಾಗಿದ್ದೇವೆ. ಮತ್ತೆ ಅವರೊಂದಿಗೆ ಹೋಗುವ ಪ್ರಶ್ನೆಯೇ ಇಲ್ಲ. ಇವರಿಬ್ಬರೂ ಅಖಾಡದಲ್ಲಿ ಉಳಿದಿದ್ದೇ ಆದಲ್ಲಿ ನಾನು ಯಾರನ್ನೂ ಬೆಂಬಲಿಸದೆ ನನ್ನೂರಿನ ಜಮೀನಿನಲ್ಲಿರುತ್ತೇನೆ ಎಂದು ಖಡಕ್ಕಾಗಿ ಹೇಳಿದರು.ನನಗೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಮೇಲುಕೋಟೆ ಕ್ಷೇತ್ರದ ಟಿಕೆಟ್ ಸಿಗಬೇಕಿತ್ತು. ಟಿಕೆಟ್ ಸಿಗುವ ಭರವಸೆಯೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಹೋರಾಟ, ಭಾರತ್ ಜೋಡೋ ಯಾತ್ರೆ ಸೇರಿದಂತೆ ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೆ. ಕೊನೆಗೆ ನನಗೆ ಟಿಕೆಟ್ ತಪ್ಪಿಸಿ ರೈತಸಂಘವನ್ನು ಬೆಂಬಲಿಸಲಾಯಿತು. ಲೋಕಸಭೆ ಚುನಾವಣೆಗೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಆರಂಭದಲ್ಲಿ ನನ್ನ ಹೆಸರನ್ನು ಪ್ರಸ್ತಾಪ ಮಾಡುತ್ತಾ ಬಂದಿದ್ದರು. ಆದರೆ, ಕೊನೆಯಲ್ಲಿ ಸೌಜನ್ಯಕ್ಕೂ ನನ್ನೊಂದಿಗೆ ಮಾತುಕತೆ ನಡೆಸದೆ ಅಭ್ಯರ್ಥಿಯನ್ನು ಕರೆತಂದಿದ್ದಾರೆ. ಹಣವಿರುವವರಿಗೆ ಪ್ರಾಶಸ್ತ್ಯ ನೀಡುವುದಾದರೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇವರಿಗೆ ಗುಲಾಮರಾಗೇ ಇರಬೇಕಾ? ಎಂದು ಖಾರವಾಗಿ ಪ್ರಶ್ನಿಸಿದರು.
ಅಧಿಕಾರ ಸಿಗುವ ಮುನ್ನ ನಾಯಕರಿಗೆ ಒಂದು ಮುಖವಿರುತ್ತದೆ. ಅಧಿಕಾರ ಬಂದ ನಂತರದಲ್ಲಿ ಮತ್ತೊಂದು ಮುಖವನ್ನು ತೋರಿಸುತ್ತಾರೆ. ಅಧಿಕಾರವಿಲ್ಲದಿದ್ದಾಗ ನಮ್ಮನ್ನು ಹೆಸರಿಡಿದು ಕರೆದು ಮಾತನಾಡಿಸುವವರು ಅಧಿಕಾರ ಬಂದ ನಂತರ ಎದುರಿಗೆ ಸಿಕ್ಕರೂ ಗೊತ್ತಿಲ್ಲದವರಂತೆ ವರ್ತಿಸುತ್ತಾರೆ. ಈ ಅನುಭವ ನನಗೆ ಸಾಕಷ್ಟು ಬಾರಿ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉಚಿತ ಆರೋಗ್ಯದ ಒಂದು ಪ್ರೆಸೆಂಟೇಷನ್ ಕೊಡುವುದಕ್ಕೆ ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ಭೇಟಿ ಮಾಡಲು ಸಾಧ್ಯವಾಗದೆ ದೆಹಲಿಗೆ ಹೋಗಿದ್ದೆ. ಅಲ್ಲಿಯೂ ಅವರ ಭೇಟಿ ಸಾಧ್ಯವಾಗಲೇ ಇಲ್ಲ ಎಂದು ಅಸಮಾಧಾನದಿಂದ ನುಡಿದರು.
ಸ್ಥಳೀಯರಿಗೆ ಪ್ರಾಧಾನ್ಯತೆ ನೀಡಲಿ
ಟಿಕೆಟ್ ಕೊಡುವಾಗ ಹಣಕ್ಕೆ ಆದ್ಯತೆ ಕೊಟ್ಟರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಂದ ಫಲಿತಾಂಶವೇ ಈ ಬಾರಿ ನಮಗೆ ಪುನರಾವರ್ತನೆಯಾಗಲಿದೆ. ಇದು ಗಂಭೀರ ವಿಚಾರ. ಹಾಗೇನಾದರೂ ಆದರೆ ಅದು ನಮ್ಮ ಪಕ್ಷದ ಅಧ್ಯಕ್ಷರಿಗೆ ಎಲ್ಲಾ ರೀತಿಯಲ್ಲೂ ಹಿನ್ನಡೆಯಾಗಲಿದೆ ಎಂದು ಚುನಾವಣಾ ಉಸ್ತುವಾರಿ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವುದಾಗಿ ಹೇಳಿದರು.