ಸ್ಫೋಟಕ ಬಳಕೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ

KannadaprabhaNewsNetwork |  
Published : Jul 28, 2026, 03:00 AM IST
ಘಟನೆಯಲ್ಲಿ ನುಜ್ಜು ಗುಜ್ಜಾದ ಕಾರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ತಡರಾತ್ರಿ ವೈನ್ ಶಾಪ್ ಮುಂಭಾಗ ನಿಲ್ಲಿಸಲಾಗಿದ್ದ ಮಹೀಂದ್ರಾ ಎಕ್ಸ್‌ಯುವಿ 300 ಕಾರು ಏಕಾಏಕಿ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡು ಸಂಪೂರ್ಣ ಜಖಂಗೊಂಡ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದು, ಪ್ರಾಥಮಿಕ ಪರಿಶೀಲನೆಯಲ್ಲಿ ಸ್ಫೋಟಕ ಬಳಕೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ತಡರಾತ್ರಿ ವೈನ್ ಶಾಪ್ ಮುಂಭಾಗ ನಿಲ್ಲಿಸಲಾಗಿದ್ದ ಮಹೀಂದ್ರಾ ಎಕ್ಸ್‌ಯುವಿ 300 ಕಾರು ಏಕಾಏಕಿ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡು ಸಂಪೂರ್ಣ ಜಖಂಗೊಂಡ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದು, ಪ್ರಾಥಮಿಕ ಪರಿಶೀಲನೆಯಲ್ಲಿ ಸ್ಫೋಟಕ ಬಳಕೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.

ಹಿಪ್ಪರಗಿ ಗ್ರಾಮದ ನಿವಾಸಿ ಹಾಗೂ ವೈನ್ ಶಾಪ್ ಮಾಲೀಕ ಹನುಮಂತ್ ಅಥಣಿ ಅವರಿಗೆ ಸೇರಿದ ಮಹೀಂದ್ರಾ ಕಾರನ್ನು ಶನಿವಾರ ಸಂಜೆ ಸುಮಾರು 4.30 ಗಂಟೆಗೆ ವೈನ್ ಶಾಪ್ ಮುಂಭಾಗದಲ್ಲಿ ನಿಲ್ಲಿಸಲಾಗಿತ್ತು. ರಾತ್ರಿ ಸುಮಾರು 10.45 ಗಂಟೆಗೆ ಕಾರು ಏಕಾಏಕಿ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡು ಮೇಲಕ್ಕೆ ಎಸೆದು ರಸ್ತೆಗೆ ಪಲ್ಟಿಯಾಗಿದ್ದು, ಕಾರಿನ ಬಿಡಿಭಾಗಗಳು ಸುಮಾರು 40 ರಿಂದ 50 ಮೀಟರ್ ದೂರದವರೆಗೆ ಚದುರಿಹೋಗಿದ್ದವು. ಸ್ಫೋಟದ ಸದ್ದು ಕೇಳಿ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದರು. ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ನಂತರ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯದಳ, ಶ್ವಾನದಳ, ಎಸ್‌ಒಸಿಒ ಹಾಗೂ ವಿಧಿವಿಜ್ಞಾನ ತಜ್ಞರ ತಂಡವನ್ನು ಸ್ಥಳಕ್ಕೆ ಕರೆಸಿ ವೈಜ್ಞಾನಿಕ ರೀತಿಯಲ್ಲಿ ಪರಿಶೀಲನೆ ನಡೆಸಲಾಯಿತು.

ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯ ದಾಖಲು:

ಎಸ್‌ಪಿ ಸಿದ್ದಾರ್ಥ ಗೋಯಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾರನ್ನು ಸಂಜೆ 4.30 ಗಂಟೆಗೆ ನಿಲ್ಲಿಸಿದ ಬಳಿಕ ರಾತ್ರಿ 10.45 ಗಂಟೆಗೆ ಸ್ಫೋಟ ಸಂಭವಿಸುವವರೆಗೂ ಅದು ಒಂದೇ ಸ್ಥಳದಲ್ಲಿ ನಿಂತಿತ್ತು. ಆ ಸಂಪೂರ್ಣ ಅವಧಿಯ ದೃಶ್ಯಗಳು ವೈನ್ ಶಾಪ್ ಮುಂಭಾಗ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ ಎಂದರು. ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವ್ಯಕ್ತಿ ಕಾರಿನ ಬಳಿ ಬಂದಿರುವುದು ಕಂಡಿಲ್ಲ. ರಾತ್ರಿ ಸುಮಾರು 9.45ರ ವೇಳೆಗೆ ಮೂವರು ಗ್ರಾಹಕರು ಕಾರಿನ ಸಮೀಪ ಬಂದಿದ್ದು, ಅವರನ್ನು ಪರಿಶೀಲಿಸಿದಾಗ ಅವರು ಸಾಮಾನ್ಯ ಗ್ರಾಹಕರಾಗಿರುವುದು ದೃಢಪಟ್ಟಿದೆ. ಇದನ್ನು ಹೊರತುಪಡಿಸಿ ಕಾರಿನ ಬಳಿ ಅನುಮಾನಾಸ್ಪದ ಚಲನವಲನ ಕಂಡುಬಂದಿಲ್ಲ ಎಂದರು.

ಸ್ಫೋಟಕ ಬಳಕೆಯ ಯಾವುದೇ ಸುಳಿವು ಇಲ್ಲ:

ಬಾಂಬ್ ಪತ್ತೆ ದಳ, ಶ್ವಾನದಳ ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಸೂಕ್ಷ್ಮ ಪರಿಶೀಲನೆ ನಡೆಸಿದ್ದು, ಇದುವರೆಗೆ ಯಾವುದೇ ಸ್ಫೋಟಕ ವಸ್ತು, ಸ್ಫೋಟಕದ ಅವಶೇಷ ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಎಸ್‌ಪಿ ಸ್ಪಷ್ಟಪಡಿಸಿದರು. ಹುಬ್ಬಳ್ಳಿಯಿಂದ ಬಾಂಬ್ ವಿಲೇವಾರಿ ದಳವನ್ನು ಕೂಡ ಸ್ಥಳಕ್ಕೆ ಕರೆಸಲಾಗಿದ್ದು, ಅವರು ಸಹ ಪರಿಶೀಲಿಸಿದ್ದಾರೆ. ಎಲ್ಲ ತಜ್ಞರ ಪ್ರಾಥಮಿಕ ಅಭಿಪ್ರಾಯದ ಪ್ರಕಾರ ಸ್ಫೋಟಕ ಬಳಕೆಯ ಸುಳಿವು ಕಂಡುಬಂದಿಲ್ಲ ಎಂದರು.

ತಾಂತ್ರಿಕ ದೋಷದತ್ತ ತನಿಖೆ:

ಕಾರಿಗೆ ಸಂಭವಿಸಿರುವ ಹಾನಿಯನ್ನು ಪರಿಶೀಲಿಸಿದಾಗ ಅದು 2 ಹಂತಗಳಲ್ಲಿ ಆಗಿರುವ ಸಾಧ್ಯತೆ ಇದೆ. ಮೊದಲಿಗೆ ಸಂಭವಿಸಿದ ಸ್ಫೋಟದಿಂದ ಕಾರಿಗೆ ಹಾನಿಯಾಗಿದ್ದು, ನಂತರ ಕಾರು ಪಲ್ಟಿಯಾದ ಪರಿಣಾಮ ಮತ್ತಷ್ಟು ಹಾನಿಯಾಗಿದೆ. ಈ ಎರಡರ ನಡುವಿನ ವ್ಯತ್ಯಾಸವನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲಿ ಬ್ಯಾಟರಿ, ಎಂಜಿನ್ ಅಥವಾ ಇತರ ತಾಂತ್ರಿಕ ದೋಷದಿಂದ ಈ ಘಟನೆ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ತಜ್ಞರು ಹಾಗೂ ಮೆಕ್ಯಾನಿಕಲ್ ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಅಂತಿಮ ತಾಂತ್ರಿಕ ವರದಿ ಬಂದ ಬಳಿಕವೇ ಸ್ಫೋಟಕ್ಕೆ ನಿಖರ ಕಾರಣ ತಿಳಿಯಲಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ:

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಫೋಟ ಸಂಭವಿಸಿದ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದ ಒಬ್ಬ ವ್ಯಕ್ತಿಗೆ ಕಾಲಿನ ಭಾಗಕ್ಕೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವೈನ್ ಶಾಪ್ ಸಮೀಪ ಇದ್ದ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ, ಸ್ಫೋಟದ ಪರಿಣಾಮ ಕಾರು ಸಂಪೂರ್ಣ ನಾಶವಾಗಿದ್ದು, ಸಮೀಪದ ಕಟ್ಟಡಗಳ ಗಾಜುಗಳು ಒಡೆದು ಸಣ್ಣ ಪ್ರಮಾಣದ ಆಸ್ತಿ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಕೆ:

ಸ್ಫೋಟದ ನಿಖರ ಕಾರಣ ತಿಳಿಯುವವರೆಗೆ ಯಾವುದೇ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ. ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದ್ದು, ಯಾವುದೇ ವ್ಯಕ್ತಿಯ ಕೈವಾಡ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಹೇಳಿದರು.

ಈ ಘಟನೆ ಸ್ಥಳೀಯವಾಗಿ ಕಾರಿನಲ್ಲೇ ಸಂಭವಿಸಿರುವ ತಾಂತ್ರಿಕ ಘಟನೆ ಆಗಿರುವ ಸಾಧ್ಯತೆ ಹೆಚ್ಚಿದ್ದು, ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ ಅನಗತ್ಯ ಆತಂಕಕ್ಕೆ ಒಳಗಾಗಬಾರದು ಎಂದು ಎಸ್‌ಪಿ ಸಿದ್ದಾರ್ಥ ಗೋಯಲ್ ಮನವಿ ಮಾಡಿದರು.

ಕಾರು ಸಂಜೆ 4.30ರಿಂದ ರಾತ್ರಿ 10.45ರವರೆಗೆ ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲೇ ಇತ್ತು. ಇದುವರೆಗೆ ಯಾವುದೇ ಅನುಮಾನಾಸ್ಪದ ವ್ಯಕ್ತಿಯ ಚಲನವಲನ ಕಂಡುಬಂದಿಲ್ಲ. ಬಾಂಬ್ ಪತ್ತೆ ದಳ, ಶ್ವಾನದಳ ಹಾಗೂ ತಜ್ಞರ ಪರಿಶೀಲನೆಯಲ್ಲಿ ಸ್ಫೋಟಕ ಬಳಕೆಯ ಯಾವುದೇ ಸುಳಿವು ಸಿಕ್ಕಿಲ್ಲ. ಬ್ಯಾಟರಿ ಅಥವಾ ಇತರೆ ತಾಂತ್ರಿಕ ದೋಷದ ಸಾಧ್ಯತೆ ಕುರಿತು ತನಿಖೆ ನಡೆಯುತ್ತಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.

-ಸಿದ್ದಾರ್ಥ ಗೋಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾ ಬಲೆಗೆ ಬಿದ್ದ ಉಪಖಜಾನೆ ಅಧಿಕಾರಿಗಳು
ಹೆಸ್ಕಾಂ ವಿರುದ್ಧ ರೈತರ ಪ್ರತಿಭಟನೆ