ನೀರಿಲ್ಲ: 3 ಐಪಿಎಲ್‌ ಮ್ಯಾಚ್‌ ಸ್ಥಳಾಂತರ?

KannadaprabhaNewsNetwork |  
Published : Mar 12, 2024, 02:05 AM IST
ಐಪಿಎಲ್‌ | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ನಿರ್ಮಾಣ ಆಗಿರುವ ಹಿನ್ನೆಲೆಯಲ್ಲಿ ಐಪಿಎಲ್‌ ಪಂದ್ಯಾವಳಿಯನ್ನು ವರ್ಗಾಯಿಸುವಂತೆ ಒತ್ತಡ ಹೆಚ್ಚುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕ್ರಿಕೆಟ್ ಅಭಿಮಾನಗಳು ಕಾತುರದಿಂದ ಕಾಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಪಂದ್ಯಗಳ ಮೇಲೂ ನೀರಿನ ಅಭಾವದ ಕರಿಛಾಯೆ ಬಿದ್ದಿದೆ. ಮಾ.25ರಿಂದ ಏ.2ರ ವರೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಮೂರು ಪಂದ್ಯಗಳು ನಿಗದಿಯಾಗಿದ್ದು, ಈ ಪಂದ್ಯಗಳನ್ನು ಸ್ಥಳಾಂತರ ಮಾಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಈ ಕುರಿತು ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಕೆಎಸ್‌ಸಿಎ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ಪಂದ್ಯ ನಡೆಸಲು ಸುಮಾರು 60 ಸಾವಿರದಿಂದ 70 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಪ್ರತಿ ನಿತ್ಯ ನಿರ್ವಹಣೆಗೂ ಸಾವಿರಾರು ಲೀಟರ್ ನೀರು ಬೇಕೇ ಬೇಕು. ಮತ್ತೊಂದೆಡೆ ನಗರದಲ್ಲಿ ನೀರಿನ ಅಭಾವವಾಗಿ ಸರಬರಾಜು ವ್ಯತ್ಯಯವಾಗುತ್ತಿದೆ. ಜನರು ನೀರಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಹೆಚ್ಚು ನೀರು ಬಳಸುವ ಐಪಿಎಲ್ ಪಂದ್ಯಗಳನ್ನು ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಆದರೆ, ಕ್ರೀಡಾಂಗಣವೂ ಜಲಮಂಡಳಿ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿಲ್ಲ. ಕೊಳಚೆ ನೀರು ಶುದ್ಧೀಕರಣ ಪ್ಲಾಂಟ್ ಅನ್ನು ಅಳವಡಿಸಿಕೊಳ್ಳಲಾಗಿದೆ. ಕ್ರೀಡಾಂಗಣದ ಹುಲ್ಲು ಹಾಸು ಬೆಳೆಸುವುದು ಸೇರಿದಂತೆ ಒಟ್ಟಾರೆ ಕ್ರೀಡಾಂಗಣದ ನಿರ್ವಹಣೆಗೆ ಶುದ್ಧೀಕರಿಸಿದ ನೀರು ಬಳಕೆ ಮಾಡಲಾಗುತ್ತದೆ. ಹೀಗಾಗಿ, ಪಂದ್ಯಗಳ ಆಯೋಜನೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನುವ ವಾದವು ಕೆಎಸ್‌ಸಿಎ ವಲಯದಿಂದ ಕೇಳಿ ಬಂದಿದೆ.

ಸಭೆ ನಡೆಸಿ ತೀರ್ಮಾನ:

ನೀರಿನ ಸಮಸ್ಯೆಯ ಕುರಿತು ಅರಿವಿದೆ. ಆದರೆ, ಪಂದ್ಯಗಳನ್ನು ನಿಗದಿಯಂತೆ ನಡೆಸಬೇಕೋ ಅಥವಾ ಸ್ಥಳಾಂತರಿಸಬೇಕೋ ಎಂಬ ಬಗ್ಗೆ ಈವರೆಗೆ ತೀರ್ಮಾನ ತೆಗೆದುಕೊಂಡಿಲ್ಲ. ಸಮಿತಿಯ ಸದಸ್ಯರೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದು ಕೆಎಸ್‌ಸಿಎ ಸಿಇಒ ಶುಭೇಂದು ಘೋಷ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ