ಕನ್ನಡ ಭವನಕ್ಕಾಗಿ ಉಪವಾಸ ಸತ್ಯಾಗ್ರಹಕ್ಕೂ ಸಿದ್ಧ: ಬಸವಲಿಂಗ ಪಟ್ಟದ್ದೇವರು

KannadaprabhaNewsNetwork |  
Published : Mar 12, 2024, 02:05 AM IST
ಚಿತ್ರ 11ಬಿಡಿಆರ್‌7ಬೀದರ್‌ ಜಿಲ್ಲಾ ರಂಗಮಂದಿರದಲ್ಲಿ ನಡೆದ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ನಾಡೋಜ ಬಸವಲಿಂದ ಪಟ್ಟದ್ದೇವರು ಸಾರೋಟದ ಮೆರವಣಿಗೆಯಲ್ಲಿ. | Kannada Prabha

ಸಾರಾಂಶ

ಕಸಾಪದಿಂದ ಕನ್ನಡ ಭವನ ವಾಪಸ್‌ ಸರಿಯಲ್ಲ. ಅನುದಾನ ಕೊಟ್ಟಾ ಕ್ಷಣ ಇಡೀ ಆಸ್ತಿ ಕೇಳುವುದು ಸೂಕ್ತವಲ್ಲ ಎಂದು 21ನೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರಾದ ನಾಡೋಜ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಬೀದರ್‌ ಕನ್ನಡ ಭವನವನ್ನು ಕನ್ನಡ ಸಾಹಿತ್ಯ ಪರಿಷತ್‌ನಿಂದ ಕಸಿದುಕೊಳ್ಳುವ ಯತ್ನವನ್ನು ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಬಿಡದಿದ್ದಲ್ಲಿ ಕನ್ನಡ ಭವನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರು ಹಾಗೂ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರಾದ ನಾಡೋಜ ಬಸವಲಿಂಗ ಪಟ್ಟದ್ದೇವರು ಎಚ್ಚರಿಸಿದರು.

ಅವರು 21ನೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮಾರೋಪ ಸಮಾರಂಭದ ಭಾಷಣದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಸ್ತಿ, ಅನುದಾನದ ನೆಪವೊಡ್ಡಿ ಇತ್ತೀಚೆಗೆ ಉದ್ಘಾಟನೆಗೊಂಡ ಕನ್ನಡ ಭವನವನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಾಪಸ್‌ ಪಡೆಯಲು ಯತ್ನಿಸುತ್ತಿರುವ ವಿಷಯವಾಗಿ ಬೇಸರಗೊಂಡು ಮಾತನಾಡಿದರು.

ಹಲವು ದಶಕಗಳಿಂದ ಹಲವಾರು ಅಧ್ಯಕ್ಷರ ಶ್ರಮ, ಇದರೊಟ್ಟಿಗೆ ಈಗಿನ ಅಧ್ಯಕ್ಷ ಸುರೇಶ ಚೆನಶೆಟ್ಟಿಯವರ ಸತತ ಪ್ರಯತ್ನದ ಫಲವಾಗಿ ನಿರ್ಮಾಣಗೊಂಡಿರುವ ಕನ್ನಡ ಭವನ ಯಾವೊತ್ತೂ ಕನ್ನಡ ಸಾಹಿತ್ಯ ಪರಿಷತ್ತಿನ ಸುಪರ್ದಿಯಲ್ಲಿಯೇ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಂತ್ರಿಕ ಕಾರಣಗಳ ನೆಪವೊಡ್ಡಿ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನವನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆಯಲು ಯತ್ನಿಸುತ್ತಿರುವುದನ್ನು ತಡೆಯಲು ಸರ್ಕಾರದ ಮಂತ್ರಿಗಳಿಗೆ, ಶಾಸಕರಿಗೆ ಮತ್ತಿತರ ಎಲ್ಲರಿಗೂ ವಿನಯಪೂರ್ವಕವಾಗಿ ಮನವಿಸುವ ಎಲ್ಲ ಪ್ರಯತ್ನಗಳನ್ನು ಮೊದಲು ಮಾಡೋಣ ಎಂದರು.

ಸಾಹಿತ್ಯ ಸಂಘಟನೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ಕೊಟ್ಟು ಅವರ ಆಸ್ತಿಯನ್ನೇ ತನ್ನದೆಂದು ಹೇಳಿಕೊಳ್ಳುವಂಥ ವ್ಯವಸ್ಥೆಯನ್ನು ನಾನು ನನ್ನ ಜೀವನದಲ್ಲಿ ಪ್ರಥಮ ಬಾರಿಗೆ ಕಂಡಿದ್ದು ಭಾಲ್ಕಿ ಹಿರೇಮಠವೂ ಅನುದಾನ ಪಡೆದಿದೆ ಅದೂ ತನ್ನದೇ ಎಂದು ಸರ್ಕಾರ ಹೇಳಿದರೆ ಮಠವನ್ನೇ ಬಿಟ್ಟುಕೊಡಬೇಕಾದೀತೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಿತು. ಪರಿಷತ್ತಿನ ಈ ಸಮ್ಮೇಳನದಲ್ಲಿ ಆಮಂತ್ರಣ ಸಿಗದವರು, ಸನ್ಮಾನ ಪಟ್ಟಿಯಲ್ಲಿ ಇಲ್ಲದವರು ಬೇಸರಗೊಳ್ಳದೇ ಕನ್ನಡ ಸಾಹಿತ್ಯವನ್ನು ಬೆಳೆಸಲು ತಮ್ಮ ಸಹಕಾರ ಮುಂದುವರಿಸಿ ಪರಿಷತ್ತಿನ ಹೆಗಲಾಗಿ ನಿಲ್ಲಲು ಪಟ್ಟದ್ದೇವರು ಕರೆ ನೀಡಿದರು.

ಗದಗನ ಹಿರಿಯ ಸಾಹಿತಿ ಪ್ರೊ. ಸಿದ್ದು ಯಾಪಲಪರ್ವಿ ಅವರು ಮಾತನಾಡಿ, ಕನ್ನಡ ಭವನ ಕುರಿತು ಸುರೇಶ ಚನಶೆಟ್ಟಿಯವರು ಭಾವುಕರಾಗುವದಕ್ಕಿಂತ ಗಟ್ಟಿಯಾಗಿ ನಿಲ್ಲಬೇಕು. ಗದಗ ಜಿಲ್ಲೆಯಲ್ಲಿಯೂ ಇದೇ ರೀತಿಯಲ್ಲಿ ಇಲಾಖೆ ಕಟ್ಟಡವನ್ನು ವಾಪಸ್‌ ಪಡೆದಿದೆ ಸರ್ಕಾರದ ಇಂಥ ನಡುವಳಿಕೆ ಕನ್ನಡ, ಕನ್ನಡ ಸಾಹಿತ್ಯವನ್ನು ಬೆಳೆಸುವಲ್ಲಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಿ ಹಾಕಿದಂತಾಗುತ್ತದೆ ಎಂಬುವದನ್ನು ಅರಿತುಕೊಳ್ಳಬೇಕು ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಹಕಾರ ಪಡೆದು ಜಿಲ್ಲೆಯಲ್ಲಿನ ಗುಣಮಟ್ಟದ ಬರಹ, ಕಾವ್ಯಗಳನ್ನು ರಚಿಸುವ ಹೇಳುವಂಥರನ್ನು ರೂಪಿಸಲು ಕಮ್ಮಟಗಳನ್ನು ಆಯೋಜಿಸುವಂತೆ ಕರೆ ನೀಡಿದ ಸಿದ್ದು ಯಾಪಲಪರವಿ ಅವರು ನೂರಾರು ಜನ ಸಾಹಿತಿಗಳು, ಕವಿಗಳು, ಗಾಯಕರು ಸಮ್ಮೇಳನದಲ್ಲಿ ಪಾಲ್ಗೊಳ್ಳುವದು, ಸಮ್ಮೇಳನ ರಾತ್ರಿಯಿಡೀ ನಡೆಯುವದು ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಭಾಲ್ಕಿ ಹಿರೇಮಠದ ಪೀಠಾಧಿಪತಿಗಳಾದ ಗುರುಬಸವ ಪಟ್ಟದ್ದೇವರು, ತಡೋಳಾ ಮೆಹಕರನ ರಾಜೇಶ್ವರ ಶಿವಾಚಾರ್ಯರು, ಸಮ್ಮೇಳನದ ಸಮಾರೋಪದ ಅಧ್ಯಕ್ಷತೆಯನ್ನು ಬಾಬು ವಾಲಿ ವಹಿಸಿದರೆ ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌, ಕಿರಣ ಪಾಟೀಲ್‌, ಕೆಎಂಫ್‌ ನಿರ್ದೇಶಕರಾದ ಮಲ್ಲಿಕಾರ್ಜುನ್‌ ಬಿರಾದರ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸುರೇಶ ಚನಶೆಟ್ಟಿ, ಪರಿಷತ್ತಿನ ಶಿವಶಂಕರ ಟೋಕರೆ, ಟಿಎಂ ಮಚ್ಚೆ, ಎಂಎಸ್‌ ಮನೋಹರ, ಶಿವಕುಮಾರ ಕಟ್ಟೆ, ಸಿದ್ಧಾರೂಢ ಭಾಲ್ಕೆ ಸೇರಿದಂತೆ ಮತ್ತಿತರರು ಇದ್ದರು. ಬಾಬುರಾವ್‌ ದಾನಿ ಸ್ವಾಗತಿಸಿ ಚನ್ನಬಸವ ಹೇಡೆ ನಿರೂಪಿಸಿ ಪರಮೇಶ್ವರ ಬಿರಾದರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ