ನಿವೇಶನ, ಕೃಷಿ ಜಮೀನು ಮಂಜೂರಿಗೆ ಆಗ್ರಹ, ಅಲೆಮಾರಿ ಸಮುದಾಯದ ಪ್ರತಿಭಟನೆ

KannadaprabhaNewsNetwork |  
Published : Aug 25, 2026, 02:45 AM IST
ನಿವೇಶನ ನೀಡುವಂತೆ ಅಲೆಮಾರಿ ಸಮುದಾಯದವರು ಸೋಮವಾರ ಹನುಮಸಾಗರದ ಪಪಂ ಎದುರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಹನುಮಸಾಗರ ಪಟ್ಟಣ ಪಂಚಾಯಿತಿಯ ಕಳೆದ 50–60 ವರ್ಷಗಳಿಂದ ವಾಸಿಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಸಮುದಾಯದ ಭೂರಹಿತ ಕುಟುಂಬಗಳಿಗೆ ಶಾಶ್ವತ ಕೃಷಿ ಜಮೀನು ಹಾಗೂ ನಿವೇಶನ ಮಂಜೂರಿಗೆ ಆಗ್ರಹಿಸಿ ಅಲೆಮಾರಿ, ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು.

ಹನುಮಸಾಗರ: ಪಟ್ಟಣ ಪಂಚಾಯಿತಿಯ ಕಳೆದ 50–60 ವರ್ಷಗಳಿಂದ ವಾಸಿಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಸಮುದಾಯದ ಭೂರಹಿತ ಕುಟುಂಬಗಳಿಗೆ ಶಾಶ್ವತ ಕೃಷಿ ಜಮೀನು ಹಾಗೂ ನಿವೇಶನ ಮಂಜೂರಿಗೆ ಆಗ್ರಹಿಸಿ ಅಲೆಮಾರಿ, ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಅಲೆಮಾರಿ ಜನಾಂಗ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಸರ್ಕಾರದ ವಿವಿಧ ಯೋಜನೆಗಳಡಿ ಇದುವರೆಗೆ ಸಮರ್ಪಕವಾಗಿ ಸೌಲಭ್ಯ ಲಭ್ಯವಿಲ್ಲ. ಸ್ವಂತ ಜಮೀನು ಮತ್ತು ವಸತಿ ಇಲ್ಲದೆ ಗುಡಿಸಲುಗಳಲ್ಲಿ ವಾಸಿಸುವ, ಮಳೆ, ಚಳಿ, ಗಾಳಿ ಸೇರಿದಂತೆ ವಿವಿಧ ನೈಸರ್ಗಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವೊಮ್ಮೆ ವಿಷಜಂತುಗಳು ಹಾಗೂ ಕಾಡುಪ್ರಾಣಿಗಳ ಭೀತಿಯಲ್ಲಿಯೇ ಜೀವನ ನಡೆಸಬೇಕಾದ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು.

50ರಿಂದ 60 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಪ್ರಸ್ತುತ ಸುಮಾರು 30 ಕುಟುಂಬಗಳು ಹನುಮಸಾಗರದಲ್ಲಿಯೇ ನೆಲೆಸಿವೆ. ಉಳಿದ ಕುಟುಂಬಗಳು ಜೀವನೋಪಾಯಕ್ಕಾಗಿ ವಲಸೆ ಹೋಗಿವೆ. ಸ್ಥಳೀಯವಾಗಿ ಉಳಿದಿರುವ ಕುಟುಂಬಗಳು ಹಳ್ಳಿಯಿಂದ ಹಳ್ಳಿಗೆ ತೆರಳಿ ಸಣ್ಣಪುಟ್ಟ ವ್ಯಾಪಾರ, ವೇಷಗಾರಿಕೆ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದಾರೆ ಜೀವನ ಸಾಗಿಸುತ್ತಿದ್ದಾರೆ. ದಿನಗೂಲಿ ಮತ್ತು ಅಸ್ಥಿರ ಆದಾಯ ಅವಲಂಬಿಸಿರುವುದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದರು.

ಭೂರಹಿತ ಎಸ್‌ಸಿ, ಎಸ್‌ಟಿ ಅಲೆಮಾರಿ ಹಾಗೂ ಅರೆಅಲೆಮಾರಿ ಸಮುದಾಯದವರಿಗೆ ಶಾಶ್ವತ ಕೃಷಿ ಜಮೀನು ಮತ್ತು ವಾಸಕ್ಕಾಗಿ ನಿವೇಶನ ಒದಗಿಸುವಂತೆ ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳು, ನಿಗಮ–ಮಂಡಳಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ಸಮುದಾಯದ ಕುಟುಂಬಗಳ ವಾಸ್ತವ ಸ್ಥಿತಿ, ಆರ್ಥಿಕ ಸಂಕಷ್ಟ ಹಾಗೂ ದುಸ್ಥಿತಿಯ ಜೀವನಶೈಲಿಯ ಕುರಿತು ಅಧಿಕಾರಿಗಳು ಗಮನಕ್ಕೆ ತಂದರೂ ಇದುವರೆಗೆ ನಿರೀಕ್ಷಿತ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗಲಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸರ್ಕಾರದ ಯೋಜನೆಗಳಡಿ ಅರ್ಹರನ್ನು ಗುರುತಿಸಿ, ಅವರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕು. ಗುಡಿಸಲುಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಶಾಶ್ವತ ಸೂರು, ಭೂರಹಿತ ಕುಟುಂಬಗಳಿಗೆ ಕೃಷಿ ಜಮೀನು ಮಂಜೂರು ಮಾಡಿ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಸೇರಿದಂತೆ ಹೋರಾಟ ತೀವ್ರಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಆನಂತರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತುಗಲಪ್ಪ ದೇಸಾಯಿ ಅವರಿಗೆ ಮನವಿ ಸಲ್ಲಿಸಲಾಯಿತು. ಪಂಚಾಯಿತಿ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಜಿಲ್ಲಾ ಪರಿಶಿಷ್ಟ ಜಾತಿ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ನಾಮನಿರ್ದೇಶಿತ ಸದಸ್ಯ ಕಾಸೀಮ್ ಶ್ರೀಶಾಲ, ಹೈ-ಕ ಯುವಶಕ್ತಿ ರಾಜ್ಯಾಧ್ಯಕ್ಷ ಬಸವರಾಜ ಗಾಣಿಗೇರ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಶರಣು ಹಿರೇಮಠ, ಜಿಲ್ಲಾಧ್ಯಕ್ಷ ದೇವರಾಜ ಹಜಾಳದಾರ, ಸೂಚಪ್ಪ ದೇವರಮನಿ, ಮರೇಗೌಡ ಬೋದೂರ, ಚಂದ್ರು ಹಿರೇಮನಿ, ರಿಯಾಜ ಖಾಜಿ, ಬಸವರಾಜ ದೇವಣ್ಣನವರ, ಮೌಲಾಲಿ ಮೋಟಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿತ್ಯವೂ ಸೂರ್ಯೋಪಾಸನೆ ನಡೆಯಲಿ: ಸ್ವರ್ಣವಲ್ಲೀ ಶ್ರೀ
ಸಿದ್ಧಗೊಳ್ಳುತ್ತಿವೆ ತರಹೇವಾರಿ ಗಣೇಶನ ಮೂರ್ತಿಗಳು