ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಅಲೆಮಾರಿಗಳ ಪ್ರತಿಭಟನೆ

KannadaprabhaNewsNetwork |  
Published : Aug 31, 2025, 02:00 AM IST
ಹರಪನಹಳ್ಳಿಯಲ್ಲಿ ಒಳಮೀಸಲಾತಿ ವರ್ಗೀಕರಣದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಎಸ್ಸಿ ಅಲೆಮಾರಿ ಸಮುದಾಯಗಳ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ರಾಜ್ಯ ಸರ್ಕಾರ ಈಚೆಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ಮಾಡಿರುವುದನ್ನು ವಿರೋಧಿಸಿ ಅಲೆಮಾರಿಗಳ ಸಮುದಾಯದ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ರಾಜ್ಯ ಸರ್ಕಾರ ಈಚೆಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ಮಾಡಿರುವುದನ್ನು ವಿರೋಧಿಸಿ ಅಲೆಮಾರಿಗಳ ಸಮುದಾಯದ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಿದರು.

ಹರಿಹರ ವೃತ್ತದಿಂದ ಹೊಸಪೇಟೆ ರಸ್ತೆ ಮೂಲಕ ಮೆರವಣಿಗೆ ನಡೆಸಿ ಐಬಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು. ಪರಿಶಿಷ್ಟ ಜಾತಿಗಳ ಒಳಮೀಸಲಾತಿಯಲ್ಲಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಅಲೆಮಾರಿಗಳಿಗೆ ಅನ್ಯಾಯವಾಗಿದ್ದು, ಒಳಮೀಸಲಾತಿ ಜಾರಿ ಮಾಡುವ ಒತ್ತಡವಿದ್ದ ಹಿನ್ನೆಲೆ 101 ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಮೀಸಲಾತಿಯನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕಿದ್ದ ಸರ್ಕಾರ ಧ್ವನಿ ಇಲ್ಲದ ಹೀನಾಯ ಸ್ಥಿತಿಯಲ್ಲಿರುವ ಅಲೆಮಾರಿ ಸಮುದಾಯದ ವಿಷಯದಲ್ಲಿ ಎಡವಿದ್ದು, ಮರಣ ಶಾಸನ ಬರೆದು ಬಿಟ್ಟಿದೆ ಎಂದು ಆರೋಪಿಸಿದರು.

ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳ ಜೊತೆ ಸೇರಿಸಿ ಶೇ.5 ಮೀಸಲಾತಿಯನ್ನು ಅಲೆಮಾರಿ ಸಮುದಾಯಕ್ಕೆ ನೀಡಿದ್ದು, ಅಲೆಮಾರಿ ಸಮುದಾಯಗಳ ಮೀಸಲಾತಿಯಿಂದ ಶಾಶ್ವತವಾಗಿ ವಂಚಿತವಾಗಲಿವೆ ಎಂದು ಹೇಳಿದರು.

ಅಲೆಮಾರಿಯಂತಹ ಅನಾಥ ಸಮುದಾಯಗಳಿಗೆ ಸ್ವಾತಂತ್ರ್ಯದ ನಂತರ ಸಂವಿಧಾನಬದ್ಧ ಯಾವ ಸೌಲಭ್ಯಗಳು ದೊರೆತಿಲ್ಲ. ಗುಡಿ, ಗುಂಡಾರ, ಜೋಪಡಿಗಳಲ್ಲಿ ತಮ್ಮ ಕುಲಕಸಬು ಮಾಡುತ್ತಾ ಅಸ್ಪೃಶ್ಯದಲ್ಲಿ ಅಸ್ಪೃಶ್ಯರಾಗಿಯೇ ಉಳಿದಿದ್ದು, ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ಈಗಲಾದರೂ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ನ್ಯಾಯಮೂರ್ತಿ ಡಾ. ಎಚ್.ಎಸ್. ನಾಗಮೋಹನದಾಸ್‌ ಏಕಸದಸ್ಯ ಆಯೋಗದ ಶಿಪಾರಸ್ಸಿನಂತೆ 59 ಸೂಕ್ಷ್ಮ, ಅಲೆಮಾರಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ ಎರಲ್ಲಿಯೇ ಇರಿಸಿ ಶೇ.1ರಷ್ಟು ಒಳ ಮೀಸಲಾತಿ ನೀಡಿದರೂ ಪ್ರಥಮ ಆದ್ಯತೆ ನೀಡಿದಂತಾಗುತ್ತಿತ್ತು,

ಆದ್ದರಿಂದ ಅಲೆಮಾರಿ ಸಮುದಾಯಗಳಿಗೆ ಶೇ.1 ಒಳಮೀಸಲಾತಿ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಎಸ್ಸಿ, ಎಷ್ಟಿ ಅಲೆ ಮಾರಿ ಬುಡಕಟ್ಟು ಮಹಾಸಭಾ ರಾಜ್ಯಾಧ್ಯಕ್ಷ ವಿ.ಸಣ್ಣಅಜ್ಜಯ್ಯ, ಸಿಂದೋಳ ಸಮುದಾಯದ ದುರುಗೇಶ, ಹಂಡಿ ಜೋಗಿ, ಮೇದಾರ, ಚೆನ್ನದಾಸ, ಸಿಳ್ಳೆಕ್ಯಾತ, ಗೋಸಂಗಿ, ಡೊಂಬರ, ಸುಡಗಾಡು ಸಿದ್ದರ ಸಮುದಾಯಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ