ರಟ್ಟೀಹಳ್ಳಿ: ಆ. 17ರಂದು ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಮುಖಂಡರ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ಮೂಖಾಂತರ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರು, ರಟ್ಟೀಹಳ್ಳಿಯನ್ನು 2016ರಲ್ಲಿ ತಾಲೂಕು ಕೇಂದ್ರವನ್ನಾಗಿ ಮಾಡಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದು ನನ್ನ ಅವಧಿಯಲ್ಲಿ. ಪಟ್ಟಣಕ್ಕೆ ರಾಷ್ಟ್ರೀಯ ಹೆದ್ದಾರಿ, ಫೈರ್ ಎಂಜಿನ್ ಕಚೇರಿ, ಕಾರ್ಮಿಕ ಭವನ, ಕೋಲ್ಡ್ ಸ್ಟೋರೇಜ್, ಜೂನಿಯರ್ ಕಾಲೇಜು, ₹5 ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರ ನಿರ್ಮಾಣ, ಅಂಬೇಡ್ಕರ ಭವನ, ಶಾದಿಮಹಲ್, ರಾಷ್ಟ್ರವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಛತ್ರಪತಿ ಶಿವಾಜಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ.
ಕೃಷಿ ಇಲಾಖೆಗೆ ಸೇರಿದ ₹260 ಕೋಟಿ ಬೆಲೆಬಾಳುವ 28 ಎಕರೆ ಭೂಮಿಯನ್ನು ಕೆಲವರು ಶಾಸಕ ಯು.ಬಿ. ಬಣಕಾರ ಅವರ ಆಶೀರ್ವಾದದಿಂದ ಕಬಳಿಸಲು ಯತ್ನಿಸಿದ ಸಂದರ್ಭದಲ್ಲಿ ಅದನ್ನು ಸರ್ಕಾರಿ ಭೂಮಿಯಾಗಿ ಉಳಿಸಿ ಪಟ್ಟಣಕ್ಕೆ ಕೊಟ್ಟ ತೃಪ್ತಿ ನನಗಿದೆ ಎಂದರು.ಈಗ ಅಲ್ಲಿ ತಾಲೂಕು ಆಡಳಿತಕ್ಕೆ ಬೇಕಾದ ಎಲ್ಲ ಸರ್ಕಾರಿ ಕಚೇರಿಗಳು ನಿರ್ಮಾಣವಾಗುತ್ತಿವೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಪಟ್ಟಣದಲ್ಲಿ ದ್ವಿಮುಖ ರಸ್ತೆ ಇನ್ನು ಅನೇಕ ಕಾರ್ಯಕ್ರಮಗಳನ್ನು ಪಟ್ಟಣಕ್ಕೆ ನೀಡಲಾಗಿದೆ. ಆದ್ದರಿಂದ ನನಗೆ ವೋಟ್ ಕೇಳುವ ನೈತಿಕತೆ ಇದೆ. ಆದರೆ ಕಾಂಗ್ರೆಸ್ಸಿನವರ ಕೊಡುಗೆ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡಬೇಕು ಎಂದರು.ಕಾಂಗ್ರೆಸ್‍ನವರು 136 ಸೀಟ್ ಗೆದ್ದು ಬೀಗುತ್ತಿರುವ ಇವರು ತಾಲೂಕಿಗೆ ಕೊಡುಗೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನು ಆರ್ಥಿಕ ದಿವಾಳಿಯೆಡೆ ತಳ್ಳುತ್ತಿದ್ದಾರೆ. ಕಳೆದ 5 ತಿಂಗಳಿನಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ. ಗ್ಯಾರಂಟಿಗಳು ಯಾರನ್ನು ಉದ್ಧಾರ ಮಾಡಿಲ್ಲ ಎಂದು ಆರೋಪಿಸಿದರು.ಮಾಜಿ ಶಾಸಕ ಅರುಣಕುಮಾರ ಪೂಜಾರ, ಡಿ.ಎಂ. ಸಾಲಿ, ಎನ್.ಎಂ. ಈಟೇರ್, ಗವಿಸಿದ್ದಪ್ಪ ದ್ಯಾವಣ್ಣನವರ, ಪಾಲಾಕ್ಷಗೌಡ ಪಾಟೀಲ್, ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿದರು.ಜಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ, ಲಿಂಗರಾಜ ಚಪ್ಪರದಳ್ಳಿ, ಗಣೇಶ ವೇರ್ಣೇಕರ್ ಸಂದೀಪ ಪಾಟೀಲ್, ಹನಮಂತಪ್ಪ ಗಾಜೇರ, ಪರಮೇಶಪ್ಪ ಹಲಗೇರಿ, ಕಾವ್ಯ ಪಾಟೀಲ್, ವೀರನಗೌಡ ಮಕರಿ, ಮಾಲತೇಶ ಬೆಳಕೆರಿ, ಮಂಜು ತಳವಾರ, ಸುನೀಲ ಸರಶೆಟ್ಟರ್, ಸಿದ್ದು ಹಲಗೇರಿ ಹಾಗೂ ನೂರಾರು ಕಾರ್ಯಕರ್ತರು ಇದ್ದರು.ನಾಮಪತ್ರ ಸಲ್ಲಿಕೆ: ವಾರ್ಡ್ ನಂ. 1ಕ್ಕೆ 3 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ ನಂ .2ಕ್ಕೆ 2, ವಾರ್ಡ್ ನಂ. 3ಕ್ಕೆ 3, ವಾರ್ಡ್ ನಂ. 4ಕ್ಕೆ 3, ವಾರ್ಡ್ ನಂ 5ಕ್ಕೆ 2, ವಾರ್ಡ್ ನಂ. 6ಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ವಾರ್ಡ್ ನಂ. 7ಕ್ಕೆ 3, ವಾರ್ಡ್ ನಂ. 8ಕ್ಕೆ 2, ವಾರ್ಡ್ ನಂ. 9ಕ್ಕೆ 6, ವಾರ್ಡ್ ನಂ. 10ಕ್ಕೆ 3, ವಾರ್ಡ್ ನಂ. 11ಕ್ಕೆ 1, ವಾರ್ಡ್ ನಂ. 12ಕ್ಕೆ 3, ವಾರ್ಡ್ ನಂ. 13ಕ್ಕೆ 2, ವಾರ್ಡ್ ನಂ. 14ಕ್ಕೆ 4, ವಾರ್ಡ್ ನಂ. 15ಕ್ಕೆ 3 ನಾಮಪತ್ರ ಸಲ್ಲಿಕೆಯಾಗಿವೆ. ಒಟ್ಟು 12 ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್ 13, ಪಕ್ಷೇತರರು 15 ಅಭ್ಯರ್ಥಿಗಳು 16 ನಾಮಪತ್ರ ಸಲ್ಲಿಕೆಯಾಗಿದೆ. ಇದರಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ 2 ನಾಮಪತ್ರ ಸಲ್ಲಿಕೆಯಾಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.