ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲೆಯ ತಲಾದಾಯ ಹೆಚ್ಚಳದ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಕಿಂಚಿತ್ತೂ ಕಾಳಜಿ ಇಲ್ಲ, ಸ್ವಹಿತ, ರಾಜಕೀಯವಷ್ಟೇ ಮುಖ್ಯವಾಗಿ ಇತರರು ಅಭಿವೃದ್ಧಿ ಹೊಂದುವದು ಕಂಡು ಬಂದಲ್ಲಿ ಅವರಿಗೆ ಸರ್ಕಾರದ ನೋಟೀಸ್ ಕೊಡಿಸಿ ಹಾಳು ಮಾಡುವದೇ ಮುಖ್ಯವಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆಕ್ರೋಶ ಹೊರಹಾಕಿದರು.ಸೋಮವಾರ ಇಲ್ಲಿನ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿವಿಬಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಸೈನಿಕ ಶಾಲೆ ಕಟ್ಟಡ ನಿರ್ಮಾಣ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿ, 5 ವರ್ಷಗಳ ಹಿಂದೆ ಬಿಎಸ್‌ಎಫ್ ತರಬೇತಿ ಕೇಂದ್ರ ಸ್ಥಾಪನೆಗೆ ಮಂಜೂರಾತಿ ತಂದಿದ್ದೆ 750ಎಕರೆ ಜಮೀನು ಕೊಡುವಲ್ಲಿ ಸರ್ಕಾರ ಸಹಕರಿಸದ ಕಾರಣ ಬೇರೆಡೆ ಹೋಯಿತು ಇದೂ ಹೀಗಾಗದಿರಲಿ, ಜನಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಲಿ ಎಂದು ಮನವಿಸಿದರು.
ರಾಜಕೀಯ ವಿರೋಧಿಗಳು ಸಾರ್ವಜನಿಕವಾಗಿ ಸಿಪೆಟ್ ಕಾಲೇಜು ಕಾಣಿಸುತ್ತಿಲ್ಲ ಎಂದು ಹೇಳುವ ಮೂಲಕ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಲ್ಲೂರ್ ಬಳಿ 10 ಎಕರೆ ಜಮೀನು ಸಿಪೆಟ್ ಕಾಲೇಜಿಗೆ ಜಮೀನು ಮಂಜೂರು, ನಮ್ಮ ಇಲಾಖೆಯಿಂದ 50ಕೋಟಿ ರು. ಮಂಜೂರಿ ಮಾಡಿಸಿದ್ದು ಅಲ್ಲದೆ ಹಾಲಹಳ್ಳಿ ಬಳಿಯ ಬೀದರ್ ವಿಶ್ವ ವಿದ್ಯಾಲಯದ ಸ್ಥಳದಲ್ಲಿ ಕೋಣೆಗಳನ್ನು ಬಾಡಿಗೆಗೆ ಪಡೆದು ಕಾಲೇಜು ಆರಂಭಿಸಲಾಗಿದೆ ಎಂದು ಖೂಬಾ ತಿಳಿಸಿದರು.ಸಿಪೆಟ್ ಕಾಲೇಜು ನಿರ್ಮಾಣಕ್ಕೆ ರಾಜ್ಯ ಸರ್ಕಾರ 50 ಕೋಟಿ ರು. ಬಿಡುಗಡೆ ಮಾಡಲು ಹಿಂದೇಟು ಹಾಕುತ್ತ ಸಹಕರಿಸುತ್ತಿಲ್ಲ ಇದರೊಟ್ಟಿಗೆ ಜಿಲ್ಲೆಯ ಜನಪ್ರತಿನಿಧಿಗಳು ಕೂಡ ನಿರುತ್ಸಾಹ ತೋರುತ್ತಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿಲ್ಲ ಇದು ಜಿಲ್ಲೆಯ ರಾಜಕೀಯ ಹಿತಾಸಕ್ತಿಗೆ ಒಂದು ಕನ್ನಡಿಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಮೊದಲು ದೆಹಲಿಯಲ್ಲಿ ಬೀದರ್ ಜಿಲ್ಲೆಯ ಜನರನ್ನು ಯಾರೂ ಗುರುತಿಸದಂಥ ವಾತಾವರಣ ಇತ್ತು. ಇಂದು ಕೇಂದ್ರ ಪ್ರತಿಯೊಂದು ಯೋಜನೆಯಲ್ಲಿ ಬೀದರ್ ಹೆಸರು ಇರಲೇಬೇಕೆಂಬ ಸ್ಥಿತಿ ನಿರ್ಮಾಣವಾಗಿದ್ದು ಇಂಥ ಸಂದರ್ಭದಲ್ಲಿ ಜಿಲ್ಲೆಯ ಮಾನವಸಂಪನ್ಮೂಲ ಇಲ್ಲಿಯೇ ಸದ್ಬಳಕೆ ಆಗುವಂತೆ ಇಲ್ಲಿನ ಜನಪ್ರತಿನಿಧಿಗಳು ಆಸಕ್ತರಾಗಿ ಶ್ರಮಿಸಿದಾಗ ಮಾತ್ರ ಆಯಾ ರಾಜ್ಯದ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಸಹಕರಿಸಲು ಸಾಧ್ಯ ಎಂದು ಖೂಬಾ ಅಭಿಪ್ರಾಯ ವ್ಯಕ್ತಪಡಿಸಿದರು.