ಧಾರವಾಡ: ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಕೋಳಿಕೆರೆಯ ಹೂಳು ತೆಗೆಯುವ ವಿಷಯವಾಗಿ ಹು-ಧಾ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ಶಂಕರ ಶೆಳಕೆ ಅವರಿಗೆ ಬೆದರಿಕೆ ಹಾಕಿದ್ದು, ಕ್ಷಮೆ ಕೇಳದೇ ಇದ್ದಲ್ಲಿ ವಿನಯ ಕುಲಕರ್ಣಿ ಅವರ ಮನೆ ಎದುರು ಧರಣಿ ನಡೆಸುವುದಾಗಿ ಮಾಜಿ ಶಾಸಕ ಅಮೃತ ದೇಸಾಯಿ ಎಚ್ಚರಿಕೆ ನೀಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಹೊಸಯಲ್ಲಾಪುರ ಬಳಿಯ ಕೋಳಿಕೆರೆಯ ಅಭಿವೃದ್ಧಿ ಕುರಿತು ಟೆಂಡರ್ ಆಗಿಲ್ಲ. ಇಷ್ಟಾಗಿಯೂ ಹೂಳೆತ್ತುವಾಗ ಗುತ್ತಿಗೆದಾರನಿಗೆ ಪ್ರಶ್ನೆ ಮಾಡಿದ್ದಕ್ಕೆ ಕ್ಷೇತ್ರಕ್ಕೆ ಸಂಬಂಧವೇ ಇರದ ಶಾಸಕರ ಪತ್ನಿ ಶಿವಲೀಲಾ ಅವರು ದೂರವಾಣಿ ಮೂಲಕ ಪಕ್ಷದ ಮುಖಂಡ, ಪಾಲಿಕೆ ಸದಸ್ಯ ಶೆಳಕೆ ಅವರಿಗೆ ಬೆದರಿಕೆ ಹಾಕಿದ್ದು ತಪ್ಪು. ಕೂಡಲೇ ಕ್ಷಮೆ ಕೇಳಬೇಕು. ಇಲ್ಲದೇ ಹೋದಲ್ಲಿ ಮನೆ ಎದುರು ಪ್ರತಿಭಟಿಸುವುದಾಗಿ ತಿಳಿಸಿದರು.ಈ ಕುರಿತು ಮಾತನಾಡಿದ ಪಾಲಿಕೆ ಸದಸ್ಯ ಶಂಕರ ಶೆಳಕೆ, ಕೋಳಿಕೆರೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ಆದರೆ, ಟೆಂಟರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಟೆಂಡರ್ ಆಗದೇ ಕೆರೆಯ ಹೂಳು ತೆಗೆಯಲಾಗುತ್ತಿತ್ತು. ಹೂಳನ್ನು ಹೊಸಯಲ್ಲಾಪೂರ ಮೂಲಕ ಬೇರೆಡೆ ಸಾಗಿಸುವಾಗ ಓಣಿಯಲ್ಲಿ ಕೊಳಕು ಬಿದ್ದು ದುರ್ವಾಸನೆ ಬರುತ್ತಿತ್ತು. ಬಡಾವಣೆ ಜನರು ದೂರು ನೀಡಿದ ಹಿನ್ನೆಲೆಯಲ್ಲಿ ವೀಕ್ಷಣೆಗೆ ಹೋಗಿ ಹೂಳನ್ನು ಬೇರೆ ಮಾರ್ಗದ ಮೂಲಕ ಸಾಗಿಸಿ ಎಂದು ಶಾಸಕರ ಆಪ್ತ ಗುತ್ತಿಗೆದಾರರಿಗೆ ಸೂಚನೆ ನೀಡಿ ಬಂದಿದ್ದೇನು. ಅಷ್ಟರಲ್ಲಿ ಶಿವಲೀಲಾ ಅವರು ದೂರವಾಣಿ ಕರೆ ಮಾಡಿ, ಕೋಳಿಕೆರೆ ನಿಮಗೇನು ಸಂಬಂದ, ಅಲ್ಲೇಕೆ ಹೋದಿರಿ, ಹೋಗಬೇಡಿ ಎಂದು ಬೆದರಿಕೆ ಹಾಕಿದ್ದಾರೆ. ಮಹಾನಗರ ಪಾಲಿಕೆ ಸದಸ್ಯರಾಗಿ ತಮ್ಮ ವ್ಯಾಪ್ತಿಯ ಕೆರೆಯ ಅಭಿವೃದ್ಧಿ ಕುರಿತು ಕರ್ತವ್ಯ ನಿರ್ವಹಿಸಿದ್ದೇನೆ ಎಂದರು.