ಒಳಮೀಸಲಾತಿ ಜಾರಿ ಮಾಡದಿದ್ದರೆ ಅಸಹಕಾರ ಚಳವಳಿ

KannadaprabhaNewsNetwork |  
Published : Jul 20, 2025, 01:15 AM IST
 | Kannada Prabha

ಸಾರಾಂಶ

ರಾಜ್ಯ ಸರ್ಕಾರ ಈ ತಿಂಗಳ ಅಂತ್ಯದೊಳಗೆ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಆಧಾರದಲ್ಲಿ ಒಳಮೀಸಲಾತಿ ಜಾರಿಗೊಳಿಸದಿದ್ದರೆ ಆಗಸ್ಟ್ 1ರಿಂದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು. ಆಗಸ್ಟ್ 15ರ ನಂತರ ಸರ್ಕಾರದ ವಿರುದ್ಧ ಅಸಹಕಾರ ಚಳುವಳಿ ನಡೆಸಲಾಗುವುದು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ರಾಜ್ಯ ಸರ್ಕಾರ ಈ ತಿಂಗಳ ಅಂತ್ಯದೊಳಗೆ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಆಧಾರದಲ್ಲಿ ಒಳಮೀಸಲಾತಿ ಜಾರಿಗೊಳಿಸದಿದ್ದರೆ ಆಗಸ್ಟ್ 1ರಿಂದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು. ಆಗಸ್ಟ್ 15ರ ನಂತರ ಸರ್ಕಾರದ ವಿರುದ್ಧ ಅಸಹಕಾರ ಚಳುವಳಿ ನಡೆಸಲಾಗುವುದು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಶನಿವಾರ ನಗರದಲ್ಲಿ ನಡೆದ ಮಾದಿಗ ಸಮಾಜದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿ ಮಾಡಲು ಸಿದ್ದರಾಮಯ್ಯ ಸರ್ಕಾರಕ್ಕೆ ಆಸಕ್ತಿಯೂ ಇಲ್ಲ, ಇಚ್ಛಾಶಕ್ತಿಯೂ ಇಲ್ಲ, ಮಾದಿಗ ಸಮುದಾಯದವರ ಕಣ್ಣು ಒರೆಸುತ್ತಾ ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದೆ ಎಂದು ಟೀಕಿಸಿದರು.

ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ ಮುಂತಾದ ರಾಜ್ಯಗಳಲ್ಲಿ ಜನಸಂಖ್ಯೆ ಆಧಾರದಲ್ಲಿ ಅಲ್ಲಿನ ಸರ್ಕಾರಗಳು ಒಳಮೀಸಲಾತಿ ಜಾರಿಗೆ ತಂದಿವೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಮುಗಿದರೂ ಕುಂಟು ನೆಪ ಹೇಳಿಕೊಂಡು ಬಂದಿದೆ. ಸರ್ಕಾರಕ್ಕೆ ರಾಜ್ಯದ ಮಾದಿಗ ಸಮುದಾಯದವರು ಸರ್ಕಾರಕ್ಕೆ ಕಡೆಯ ಎಚ್ಚರಿಕೆ ನೀಡುತ್ತಿದ್ದೇವೆ. ಈ ತಿಂಗಳ ಅಂತ್ಯದೊಳಗೆ ಒಳಮೀಸಲಾತಿ ಜಾರಿಗೆ ಕ್ರಮ ತೆಗೆದುಕೊಳ್ಳದಿದ್ದರೆ ಸರ್ಕಾರ ನಡೆಸಲು ಬಿಡುವುದಿಲ್ಲ ಎಂದರು.

ಕೇಂದ್ರ ಮಾಜಿ ಸಚಿವ ನಾರಾಯಣಸ್ವಾಮಿ ಮಾತನಾಡಿ, ಒಳಮೀಸಲಾತಿ ಈ ದೇಶದಲ್ಲಿ ಹೊಸದೇನೂ ಅಲ್ಲ, 1975 ರಲ್ಲಿ ಪಂಜಾಬ್ ಸರ್ಕಾರ ಒಳಮೀಸಲಾತಿ ಜಾರಿ ಮಾಡಿತ್ತು. ರಾಜ್ಯದಲ್ಲಿ ಒಳಮೀಸಲಾತಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈಗ ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಆಗಬೇಕಾಗಿದೆ ಎಂದರು.

ಹೈದರಾಬಾದ್‌ನಲ್ಲಿ ಐದು ಲಕ್ಷ ಜನ ಮಾದಿಗ ಸಮುದಾಯದವರ ಬೃಹತ್ ಸಮಾವೇಶ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿಯವರು ಸಮಾವೇಶದಲ್ಲಿ ಭಾಗಿಯಾಗಿ ನಿಮ್ಮ ಹೋರಾಟದಲ್ಲಿ ನಾನೂ ಒಬ್ಬನಾಗಿ ಜೊತೆಗಿರುವೆ ಎಂದು ಘೋಷಿಸಿದ್ದರು. ಆಯಾ ರಾಜ್ಯಗಳ ಜಾತಿಗಳ ಸ್ಥಿತಿಗತಿ ಆಧರಿಸಿ ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಯ ಒಳಮೀಸಲತಿ ಅನುಷ್ಠಾನಗೊಳಿಸದೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಿವೆ. ಕರ್ನಾಟಕದಲ್ಲಿ ಮಾತ್ರ ಒಳ ಮೀಸಲಾತಿ ಜಾರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕಾರವಧಿಯಲ್ಲಿ ಅವರು ಮಾಧುಸ್ವಾಮಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ನ್ಯಾಯ, ಮೂರ್ತಿ ಸದಾಶಿವ ಸಮಿತಿಯಲ್ಲಿ ಗೊಂದಲ ಇರುವುದನ್ನು ಹಾಗೂ ಭೋವಿ ಮತ್ತು ಅಲೆಮಾರಿಗಳು ಮೀಸಲಾತಿಯಿಂದ ವಂಚಿತರಾಗುತ್ತಿರುವುದನ್ನು ಗಮನಿಸಿ ಶೇಕಡ 15ರಷ್ಟಿದ್ದ ಮೀಸಲಾತಿಯನ್ನು 17ಕ್ಕೆ ಏರಿಕೆ ಮಾಡಿದರು ಎಂದರು.

ಮಾದಿಗ ಸಮುದಾಯದ ಜನರ ಹಕ್ಕಿಗಾಗಿ ನಡೆಸುತ್ತಿರುವ ಈ ಹೋರಾಟ ಪಕ್ಷಾತೀತವಾಗಿದ್ದು, ಇದರಲ್ಲಿ ರಾಜಕೀಯ ಯಾವುದೇ ರಾಜಕೀಯವಿಲ್ಲ. ಎಲ್ಲಾ ಪಕ್ಷದ ಮುಖಂಡರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಮುಖಂಡರಾದ ವೈ.ಎಚ್. ಹುಚ್ಚಯ್ಯ, ಪಾವಗಡ ಶ್ರೀರಾಮ್, ಡಾ. ಲಕ್ಷೀಕಾಂತ್, ಅನಿಲ್‌ಕುಮಾರ್, ರಂಜನ್, ನರಸಿಂಹಮೂರ್ತಿ, ಎ.ಹೆಚ್.ಆಂಜಿನಪ್ಪ, ದೀಪಕ್ ದೊಡ್ಡಯ್ಯ ಇತರರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ