ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರದಲ್ಲಿ ದಿನವಿಡಿ ನೀರು ಪೂರೈಕೆ ಮಾಡುವ ಜಲಸಿರಿ ಯೋಜನೆಯ ಕಾಮಗಾರಿ ಅವಧಿ ಮುಗಿದರೂ ಇನ್ನೂ ಅಪೂರ್ಣಗೊಂಡಿರುವುದು, ಕಾಮಗಾರಿಗಾಗಿ ರಸ್ತೆಗಳನ್ನು ಅಗೆದು ಅಧ್ವಾನ ಸೃಷ್ಟಿಸಿರುವುದು, ನೀರು ಪೂರೈಕೆಯಲ್ಲೂ ಸಮಸ್ಯೆ ಉಂಟಾಗಿರುವ ಕುರಿತು ಮೇಯರ್ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಹಾನಗರ ಪಾಲಿಕೆಯ ವಿಶೇಷ ಸಭೆಯಲ್ಲಿ ನಡೆಯಿತು.ಜಲಸಿರಿ ಮತ್ತು ಗೇಲ್ ಸಂಸ್ಥೆಯ ಕಾಮಗಾರಿ ಪ್ರಗತಿ ಕುರಿತು ಪಾಲಿಕೆ ಸಭಾಂಗಣದಲ್ಲಿ ಸೋಮವಾರ ವಿಶೇಷ ಸಭೆ ಆಯೋಜಿಸಲಾಗಿತ್ತು.
ಜಲಸಿರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿಫಲವಾದ ಕೆಯುಐಡಿಎಫ್‌ಸಿ ಮತ್ತು ಸೂಯೆಜ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮೇಯರ್ ಮನೋಜ್ ಕುಮಾರ್, ಕಾಮಗಾರಿ ಅವ್ಯವಸ್ಥೆ ಕುರಿತಾದ ಸದಸ್ಯರ ಪ್ರಶ್ನೆಗಳಿಗೆ ಇನ್ನೆರಡು ದಿನಗಳಲ್ಲಿ ಸೂಕ್ತ ಉತ್ತರ ನೀಡಬೇಕು. ಮಾತ್ರವಲ್ಲದೆ, ಯಾವುದೇ ವಿಳಂಬ ಮಾಡದೆ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಖಡಕ್ ವಾರ್ನಿಂಗ್ ನೀಡಿದರು. ಯೋಜನೆ ಪರಿಶೀಲನೆಗೆ ವಲಯವಾರು ಸಭೆ ಆಯೋಜಿಸುವುದಾಗಿಯೂ ತಿಳಿಸಿದರು.548 ಕಿಮೀ ಕಾಮಗಾರಿ ಬಾಕಿ:
ಒಟ್ಟು 792.4 ಕೋಟಿ ರು. ಅಂದಾಜು ವೆಚ್ಚದಲ್ಲಿ ಗುತ್ತಿಗೆದಾರ ಸೂಯೆಜ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಒಟ್ಟು 1288.8 ಕಿ.ಮೀ. ಪೈಪ್‌ಲೈನ್ ಹಾಕುವ ಗುರಿಯಲ್ಲಿ 730.2 ಕಿ.ಮೀ. ಮಾತ್ರ ಪೂರೈಸಿದ್ದು, ಇನ್ನೂ 548 ಕಿಮೀ ಕಾಮಗಾರಿ ನಡೆಯಬೇಕಿದೆ ಎಂದು ಕೆಯುಐಡಿಎಫ್‌ಸಿ ಅಧಿಕಾರಿಗಳು ಮಾಹಿತಿ ನೀಡಿದರು. 2024ರ ಮೇ ತಿಂಗಳಲ್ಲೇ ಕಾಮಗಾರಿ ಪೂರ್ತಿಯಾಗಬೇಕಿದ್ದರೂ ಇನ್ನೂ ಆಮೆಗತಿಯಲ್ಲಿ ನಡೆಯುತ್ತಿದೆ. ಜನರು ಪಾಲಿಕೆ ಸದಸ್ಯರನ್ನು ಬೈಯುತ್ತಿದ್ದಾರೆ ಎಂದು ಸದಸ್ಯರು ಹರಿಹಾಯ್ದರು.ವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್ ಮಾತನಾಡಿ, ಕಾಮಗಾರಿಯನ್ನು ಅನುಷ್ಠಾನಗೊಳಿಸುವಲ್ಲಿ ಸೂಯೆಜ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗುತ್ತಿಗೆದಾರರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ವಿವಿಧೆಡೆ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಪ್ರಸ್ತುತ ನೀರು ವಿತರಣೆಯಲ್ಲಿ ಸಮಸ್ಯೆಯಾಗಿರುವ ವಿಚಾರವನ್ನು ಹೆಚ್ಚಿನ ಸದಸ್ಯರು ಸಭೆಯ ಗಮನಕ್ಕೆ ತಂದರು. ನಗರದೆಲ್ಲೆಡೆ ಜಲಸಿರಿ ಪೈಪ್‌ಲೈನ್‌ಗಾಗಿ ಅಗೆದುಹಾಕಲಾದ ರಸ್ತೆಗಳನ್ನು ಪುನರ್‌ಸ್ಥಾಪನೆ ಮಾಡದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಕಾಮಗಾರಿಗೆ ಹೆದ್ದಾರಿ ಪ್ರಾಧಿಕಾರ ಅಡ್ಡಿ:
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ವ್ಯಾಪ್ತಿಯ ಸುಮಾರು 37 ಕಿಮೀನಲ್ಲಿ ಜಲಸಿರಿ ಕಾಮಗಾರಿಯ ಮುಖ್ಯ ಕೊಳವೆ ಮಾರ್ಗ ಮತ್ತು ವಿತರಣಾ ಜಾಲದ ಕೊಳವೆ ಅಳವಡಿಕೆ ಕಾಮಗಾರಿ ಬಾಕಿ ಉಳಿದಿದೆ. ಎನ್‌ಎಚ್‌ಎಐ ಅನುಮತಿ ನೀಡದೆ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕೆಯುಐಡಿಎಫ್‌ಸಿ ಅಧಿಕಾರಿಗಳು ತಿಳಿಸಿದರು. ಈ ವಿಚಾರವನ್ನು ಇದುವರೆಗೆ ಪಾಲಿಕೆ ಗಮನಕ್ಕೆ ಏಕೆ ತಂದಿಲ್ಲ ಎಂದು ಸದಸ್ಯ ನವೀನ್ ಡಿಸೋಜ ಪ್ರಶ್ನಿಸಿದರು.ಉಪಮೇಯರ್ ಭಾನುಮತಿ, ವಿಪಕ್ಷ ನಾಯಕ ಅನಿಲ್ ಕುಮಾರ್ ಇದ್ದರು..............
ಗೇಲ್ ಕಾಮಗಾರಿಗೆ ಅಗೆದ ರಸ್ತೆ ಪುನರ್ ನಿರ್ಮಾಣಕ್ಕೆ ಸೂಚನೆಗೇಲ್ ಗ್ಯಾಸ್ ಲಿಮಿಟೆಡ್ ವತಿಯಿಂದ ನಡೆಯುತ್ತಿರುವ ಗ್ಯಾಸ್ ಪೈಪ್‌ಲೈನ್ ಕಾಮಗಾರಿಯ ಪರಿಶೀಲನೆ ನಡೆಯಿತು. ಕಾಮಗಾರಿ ಸಂದರ್ಭ ಅಗೆದಿರುವ ರಸ್ತೆಗಳನ್ನು ತಕ್ಷಣ ಮರುಸ್ಥಾಪಿಸುವಂತೆ ಕಂಪೆನಿಯ ಅಧಿಕಾರಿಗಳಿಗೆ ಮೇಯರ್ ಮನೋಜ್ ಕುಮಾರ್ ಸೂಚಿಸಿದರು.
ಗೇಲ್ ಕಾಮಗಾರಿಗಾಗಿ ನಗರದೆಲ್ಲೆಡೆ ರಸ್ತೆ ಅಗೆದುಹಾಕಿರುವ ಬಗ್ಗೆ ಸರ್ವ ಸದಸ್ಯರು ಆರೋಪಿಸಿದರು. ಗೇಲ್ ಸಂಸ್ಥೆಗೆ ರಸ್ತೆ ಅಗೆಯಲು ಕೇವಲ 2 ವರ್ಷ ಅನುಮತಿ ನೀಡಲಾಗಿದ್ದು, ಅದರ ಅವಧಿ ಮುಗಿದಿದೆ. ಇನ್ನು ಮುಂದೆ ರಸ್ತೆ ಅಗೆದರೆ ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಸದಸ್ಯ ನವೀನ್ ಡಿಸೋಜ ಆಗ್ರಹಿಸಿದರು.ಮಂಗಳೂರಿನ ಹೃದಯ ಭಾಗದಲ್ಲಿ ರಸ್ತೆ ಪುನರ್‌ನಿರ್ಮಾಣ ಮಾಡದೆ ಸುರತ್ಕಲ್ ಭಾಗಕ್ಕೆ ಕಾಮಗಾರಿ ವಿಸ್ತರಿಸಿದ್ದು ಏಕೆ ಎಂದು ಸದಸ್ಯರು ಪ್ರಶ್ನಿಸಿದರು. ಕಾಮಗಾರಿ ನಡೆಸುವ ಮೊದಲು ಸಂಬಂಧಿಸಿದ ಕಾರ್ಪೊರೇಟರ್‌ಗಳಿಗೆ ಮಾಹಿತಿ ನೀಡುವಂತೆ ಆಗ್ರಹಿಸಿದರು.