ರಾಮನಗರ: ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಮತ್ತು ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಅ.ದೇವೇಗೌಡ ಅವರಿಗೆ ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆಯೇ ಭಯ ಸೃಷ್ಟಿಸಿದೆ.
ಬೆಂಗಳೂರು ಪದವೀಧರರ ಕ್ಷೇತ್ರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳನ್ನು ಒಳಗೊಂಡಿದೆ. ಇದರಲ್ಲಿ 36 ವಿಧಾನಸಭಾ ಕ್ಷೇತ್ರಗಳು, 5 ಲೋಕಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಬರಲಿದ್ದು, ಇಲ್ಲಿಸುಮಾರು 1,10,000ಕ್ಕೂ ಅಧಿಕ ಮತದಾರರು ಇದ್ದಾರೆ. ಈ ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳು ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಪಕ್ಷೇತರರು ಯಾವ ರಾಜಕೀಯ ಪಕ್ಷದ ಅಭ್ಯರ್ಥಿಯ ಮತಬುಟ್ಟಿಗೆ ಕೈ ಹಾಕುತ್ತಾರೊ ಎಂಬ ಭೀತಿ ಶುರುವಾಗಿದೆ.
ಈ ಕ್ಷೇತ್ರದಲ್ಲಿ ಅ.ದೇವೇಗೌಡ ಮತ್ತು ರಾಮೋಜಿಗೌಡರವರು ಮತದಾರರನ್ನು ನೋಂದಾಯಿಸಿದ್ದಾರೆ. ಆದರೆ, ಅವರಿಗಿಂತ ಹೆಚ್ಚಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಮತದಾರರನ್ನು ನೋಂದಾಯಿಸುವಲ್ಲಿ ಶ್ರಮ ವಹಿಸಿದ್ದರು. ಅವರಲ್ಲಿ ಕೆಲವರು ಪಕ್ಷೇತರರಾಗಿಯೂ ಸ್ಪರ್ಧೆ ಮಾಡಿದ್ದಾರೆ.ಚುನಾವಣಾ ಕಣದಲ್ಲಿ 15 ಮಂದಿ ಅಭ್ಯರ್ಥಿಗಳಿದ್ದು, ಹಿರಿಯ ವಕೀಲ ಉದಯ್ ಸಿಂಗ್ , ನೀಲಕಂಠ, ಪುಟ್ಟಸ್ವಾಮಿ, ಎಂ.ಪಿ.ಕರಬಸಪ್ಪ ಸೇರಿದಂತೆ ಕೆಲ ಪಕ್ಷೇತರರು ಗಂಭೀರ ಸ್ಪರ್ಧಿಗಳಾಗಿದ್ದು, ಇವರು ಕೂಡ ಹೆಚ್ಚು ಮತದಾರರನ್ನು ನೋಂದಾಯಿಸಿದ್ದು, ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಈ ಪಕ್ಷೇತರರು ಬಿಜೆಪಿ-ಕಾಂಗ್ರೆಸ್ ಮತಗಳ ಮೇಲೆ ಕಣ್ಣಿಟ್ಟಿದ್ದು, ಯಾರಿಗೆ ಲಾಭವಾಗಬಹುದು ಎನ್ನುವ ಲೆಕ್ಕಾಚಾರಗಳು ನಡೆದಿವೆ.
ಈ ಹಿಂದಿನ ಮೂರು ಚುನಾವಣೆಗಳಿಂದಲೂ ಸೋಲು ಅನುಭವಿಸುತ್ತಲೇ ಬಂದಿರುವ ಹ್ಯಾಟ್ರಿಕ್ ಸೋಲುಗಾರ ಕಾಂಗ್ರೆಸ್ ನ ರಾಮೋಜಿಗೌಡ ಪರ ಸಿಂಪತಿಯೂ ಇದೆ. ತಾವು ಸಂಘಟನೆಗಳ ಜತೆಗೂಡಿ ಶಿಕ್ಷಕರು, ಉಪನ್ಯಾಸಕರು, ಪದವೀಧರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ನಡೆಸಿದ ಹೋರಾಟ ಹಾಗೂ ನಿರುದ್ಯೋಗ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಅದರ ಜೊತೆಗೆ ಗ್ಯಾರಂಟಿಗಳ ಅನುಷ್ಠಾನದಿಂದಾಗಿ ಕಾಂಗ್ರೆಸ್ ಸರ್ಕಾರದ ವರ್ಚಸ್ಸು ಕೆಲಸ ಮಾಡಲಿದೆ ಎಂದು ನಂಬಿಕೊಂಡಿದ್ದಾರೆ.
5 ವರ್ಷಗಳ ಸಾಧನೆ ಮುಂದಿಟ್ಟು ಪ್ರಚಾರ :
ರಾಮೋಜಿಗೌಡ ಹಾಗೂ ಅ.ದೇವೇಗೌಡ ಜೊತೆಗೆ ಉದಯ್ ಸಿಂಗ್ , ನೀಲಕಂಠ, ಪುಟ್ಟಸ್ವಾಮಿ, ಎಂ.ಪಿ.ಕರಬಸಪ್ಪ ಸೇರಿದಂತೆ ಕೆಲ ಪಕ್ಷೇತರ ಅಭ್ಯರ್ಥಿಗಳು ಕೂಡ ಪ್ರತ್ಯೇಕ ಚುನಾವಣಾ ಪ್ರಣಾಳಿಕೆಗಳನ್ನು ಮುದ್ರಿಸಿದ್ದು, ವಿಧಾನ ಪರಿಷತ್ ಗೆ ತಾವು ಆಯ್ಕೆಯಾದಲ್ಲಿ ಭರವಸೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡುತ್ತಿದ್ದಾರೆ. ಆದರೆ, ಕ್ಷೇತ್ರದಲ್ಲಿ ಲಕ್ಷಾಂತರ ಮಂದಿ ಪದವೀಧರರು ನಿರುದ್ಯೋಗಿಗಳಾಗಿದ್ದು, ಅವರ ಸಮಸ್ಯೆಗಳು ಚುನಾವಣಾ ಅಜಾಂಡಗಳಾಗದೆ ಕೇವಲ ಅಭ್ಯರ್ಥಿಗಳು ಪರಸ್ಪರ ಆರೋಪ - ಪ್ರತ್ಯಾರೋಪಗಳಲ್ಲಿ ತೊಡಗಿರುವುದೇ ಹೆಚ್ಚು ಚರ್ಚೆಯ ವಸ್ತುಗಳಾಗುತ್ತಿವೆ. ಈ ಆರೋಪ ಪ್ರತ್ಯಾರೋಪಗಳಿಂದ ನಮಗೆ ಯಾವುದೇ ರೀತಿಯಲ್ಲೂ ಪ್ರಯೋಜವಾಗದು ಎನ್ನುತ್ತಿದ್ದಾರೆ ಮತದಾರರು.
3.ರಾಮೋಜಿಗೌಡ