ದೊಡ್ಡಬಳ್ಳಾಪುರದಲ್ಲಿ ಆರಂಭವಾಗದ ರಾಗಿ ಖರೀದಿ: ರೈತರ ಆಕ್ರೋಶ

KannadaprabhaNewsNetwork | Published : Dec 6, 2024 8:59 AM

ಸಾರಾಂಶ

ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ನೋಂದಣಿ ಮಾಡಿಸಲು ನಗರದ ರೈತ ಭವನದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿಯಲ್ಲಿ ಯಾವುದೇ ಸಿದ್ಧತೆ ಹಾಗೂ ಅಧಿಕಾರಿಗಳು ಇಲ್ಲದೇ ಇರುವುದು ರಾಗಿ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ನೋಂದಣಿ ಮಾಡಿಸಲು ನಗರದ ರೈತ ಭವನದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿಯಲ್ಲಿ ಯಾವುದೇ ಸಿದ್ಧತೆ ಹಾಗೂ ಅಧಿಕಾರಿಗಳು ಇಲ್ಲದೇ ಇರುವುದು ರಾಗಿ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ರೈತ ಹೋರಾಟಗಾರ ಹೊನ್ನಾಘಟ್ಟ ಮಹೇಶ್ ಮಾತನಾಡಿ, ಬೆಂಬಲ ಬೆಲೆ ಯೋಜನೆಯಡಿ ಡಿಸೆಂಬರ್‌ 4ರಿಂದ ರಾಗಿ ಖರೀದಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್‌.ಶಿವಶಂಕರ್‌ ತಿಳಿಸಿದ್ದರು. ಅಲ್ಲದೆ ದೇವನಹಳ್ಳಿಯಲ್ಲಿ ಬುಧವಾರ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ರಾಗಿ ಖರೀದಿ ಕೇಂದ್ರ ಮತ್ತು ನೋಂದಣಿ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಅಲ್ಲದೆ ರಾಗಿ ಖರೀದಿಗೆ ಅಗತ್ಯ ಇರುವ ಎಲ್ಲಾ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಸಿದ್ಧತೆಗಳನ್ನು ಸಹ ನಡೆಸದೆ ಇರುವುದು ರೈತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ ಎಂದರು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಸಂಬಂಧಿಸಿದಂತೆ ಸಂಗ್ರಹಣಾ ಏಜೆನ್ಸಿಗಳು ಪ್ರತಿ ತಾಲೂಕು ಹಂತದಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರ ತೆರೆಯಬೇಕು, ರಾಗಿ ಖರೀದಿಗೆ ಸಂಬಂಧಿಸಿದಂತೆ ನೋಂದಣಿ ಕಾರ್ಯಕ್ಕೆ ನಿಗದಿತ ಸ್ಥಳಗಳನ್ನು ಗುರುತಿಸಿ ರೈತರಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು. ನೋಂದಣಿಗೆ ಯಾವುದೇ ಸಮಸ್ಯೆ ಆಗದಂತೆ ಕಂಪ್ಯೂಟರ್‌ಗಳು, ಇಂಟರ್‌ನೆಟ್‌ ಸೌಲಭ್ಯ ಸೇರಿದಂತೆ ಅಗತ್ಯ ಸಿಬ್ಬಂದಿ ನಿಯೋಜಿಸಿ ರೈತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿತ್ತು. ಆದರೆ ರೈತ ಭವನದ ಬಳಿ ಕನಿಷ್ಠ ಒಂದು ಸೂಚನಾ ಫಲಕ ಇಲ್ಲದೆ ಇರುವುದು ವಿಪರ್ಯಾಸ, ನೂರಾರು ರೈತರು ಬಂದು ಕನಿಷ್ಠ ಮಾಹಿತಿಯೂ ಇಲ್ಲದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ತೆರಳುತ್ತಿದ್ದಾರೆ ಎಂದರು.

ರೈತ ರಾಜಣ್ಣ, ಮುಖಂಡರಾದ ಹೊನ್ನಘಟ್ಟ ಮಹೇಶ್, ಹನುಮಂತರಾಯಪ್ಪ, ರಾಜಣ್ಣ, ಚನ್ನೇಗೌಡ, ಸಂದೀಪ್, ಕೆಂಪೇಗೌಡ ಮುಂತಾದವರು ಉಪಸ್ಥಿತರಿದ್ದರು.

ಫೋಟೋ-

5ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸಲು ಸಿದ್ದತೆಗಳ ಕೊರತೆ ಖಂಡಿಸಿ ರೈತರು ಪ್ರತಿಭಟನೆ ನಡೆಸಿದರು.

Share this article