ಕನ್ನಡಪ್ರಭ ವಾರ್ತೆ ಮಣಿಪಾಲ
ಚುನಾವಣೆ ನಡೆಯಲಿದೆ. ಸ್ಥಳೀಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಮುಖಂಡರರು, ಕಾರ್ಯಕರ್ತರು, ಸ್ಟಾರ್ ಕ್ಯಾಂಪೇನರ್ ಗಳು, ಆಯೋಜಕರು ಸೇರಿದಂತೆ ಮತ್ತಿತರರು ಬುಧವಾರ ಸಂಜೆ 6 ಗಂಟೆಗೆ ಕ್ಷೇತ್ರ ಬಿಡಬೇಕೆಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿದ್ದಾರೆ.
ಅವರು ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಸಿದ್ಧತೆ ಹಾಗೂ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಲೋಕಸಭಾ ಚುನಾವಣೆಯು ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಬೇಕಾದ ಹಿನ್ನಲೆ, ಮತದಾನದ ಅಂತ್ಯದ 48 ಗಂಟೆ ಮುಂಚಿತವಾಗಿ ಯಾವುದೇ ರೀತಿಯ ಬಹಿರಂಗ ಪ್ರಚಾರಗಳನ್ನು ಕೈಗೊಳ್ಳಲು ಅನುಮತಿ ಇರುವುದಿಲ್ಲ. ಧ್ವನಿವರ್ಧಕಗಳ ಬಳಕೆ ಮಾಡಲು ಅವಕಾಶವಿಲ್ಲ. ಮನೆಮನೆಗೆ ಭೇಟಿ ಪ್ರಚಾರಕ್ಕೆ ಅನುಮತಿ ಇರುತ್ತದೆ ಎಂದರು.
ಮತದಾನದ ಕೊನೆಯ 48 ಅವಧಿಗೆ ಒಬ್ಬ ಅಭ್ಯರ್ಥಿಗೆ ಮೂರು ವಾಹನಗಳು ಮಾತ್ರ ಬಳಕೆಗೆ ಅವಕಾಶವಿರುತ್ತದೆ. ಒಂದು ಅಭ್ಯರ್ಥಿಗೆ ಇನ್ನೊಂದು ಚುನಾವಣೆ ಏಜೆಂಟ್ ಹಾಗೂ ಒಂದು ಪ್ರಚಾರಕ್ಕೆ ಅವಕಾಶವಿದೆ. ಅಭ್ಯರ್ಥಿಯ ಅನುಪಸ್ಥಿಯಲ್ಲಿ ಅಭ್ಯರ್ಥಿಗೆ ನೀಡಿದ ವಾಹನವನ್ನು ಇತರರು ಉಪಯೋಗಿಸತಕ್ಕದ್ದಲ್ಲ ಎಂದ ಅವರು, ಅನುಮತಿಸಿದ ವಾಹನಗಳಲ್ಲಿ 5 ಜನಕ್ಕಿಂತ ಹೆಚ್ಚು ಜನರು ಪ್ರಯಾಣಿಸತಕ್ಕದ್ದಲ್ಲ. ಈ ಅವಧಿಯಲ್ಲಿ 5 ಜನಕ್ಕಿಂತ ಹೆಚ್ಚಿನ ಜನ ಸೇರದಂತೆ ಸಿ.ಆರ್.ಪಿ.ಸಿ ಕಲಂ 144 ರಡಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದರು.
ಪ್ರತೀ ಮತಗಟ್ಟೆಗೆ ಒಬ್ಬ ಪೋಲಿಂಗ್ ಏಜೆಂಟ್ ಅನ್ನು ಹಾಗೂ ಇಬ್ಬರು ರಿಲೀಫ್ ಏಜೆಂಟ್ ಅನ್ನು ನೇಮಕ ಮಾಡಲು ಅವಕಾಶವಿರುತ್ತದೆ. ಅವರು ಮತಗಟ್ಟೆಯಲ್ಲಿ ನಿರ್ದಿಷ್ಟ ಸ್ಥಳದಲ್ಲಿಯೇ ಆಸೀನರಾಗತಕ್ಕದ್ದು ಎಂದ ಅವರು, ಮತಗಟ್ಟೆಯಲ್ಲಿ ಜನಪ್ರತಿನಿಧಿ ಕಾಯ್ದೆ ಕಲಂ 128 ರಲ್ಲಿ ನಿರ್ಧಿಷ್ಟಪಡಿಸಿದಂತೆ ಮತದಾನದ ಗೌಪ್ಯತೆ ಕಾಪಾಡತಕ್ಕದ್ದು ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ತಹಸೀಲ್ದಾರ್ ಗುರುರಾಜ್, ಅಭ್ಯರ್ಥಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಮತ್ತಿತರರಿದ್ದರು.