ಬಳ್ಳಾರಿ: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆಗೆ ಜಿಲ್ಲೆಯಲ್ಲಿ ಸೋಮವಾರ ಬಿರುಸಿನ ಮತದಾನ ನಡೆಯಿತು. ಸಂಜೆ 4 ಗಂಟೆ ವೇಳೆಗೆ ಶೇ. 67.78ರಷ್ಟು ಮತದಾನವಾಗಿತ್ತು. ಬಳ್ಳಾರಿ ನಗರದಲ್ಲಿ 7 ಮತಗಟ್ಟೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 24 ಮತಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಮತದಾರರ ಅನುಕೂಲಕ್ಕಾಗಿ ಇದೇ ಮೊದಲ ಬಾರಿಗೆ ಹೋಬಳಿ ಕೇಂದ್ರಗಳಲ್ಲೂ ಮತಕೇಂದ್ರಗಳನ್ನು ಸ್ಥಾಪಿಸಿ, ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಲಾಗಿತ್ತು. ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನಕ್ಕಾಗಿ ಅವಕಾಶವಿತ್ತು. ನಗರದ ವಿವಿಧ ಮತಗಟ್ಟೆಗಳಲ್ಲಿ ಜನರು ಸಾಲುಗಟ್ಟಿ ನಿಂತು ಮತ ಚಲಾಯಿಸುವ ದೃಶ್ಯ ಕಂಡು ಬಂತು.
ಇಲ್ಲಿನ ಗಾಂಧಿನಗರದ ಬಾಲಭಾರತಿ ಶಾಲೆಯ ಮತಕೇಂದ್ರದಲ್ಲಿ ಮಧ್ಯಾಹ್ನ 3 ಗಂಟೆ ವೇಳೆ ನೂರಾರು ಜನರು ಹಕ್ಕು ಚಲಾಯಿಸಲು ಸಾಲುಗಟ್ಟಿ ನಿಂತಿದ್ದರು. ಮತಕೇಂದ್ರಗಳ ಹೊರಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಪರ ಬೆಂಬಲಿಗರು ಮತದಾರರಿಗೆ ಮತಚೀಟಿಗಳನ್ನು ವಿತರಣೆ ಮಾಡುವ ನೆಪದಲ್ಲಿ, ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರು.ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಬಾಲಭಾರತಿ ಶಾಲೆ ಹಾಗೂ ಗರ್ಲ್ಸ್ ಹೈಸ್ಕೂಲ್ ಮತಕೇಂದ್ರಗಳ ಆವರಣದಲ್ಲಿ ಮಳೆನೀರು ತುಂಬಿಕೊಂಡಿತ್ತು. ಬೆಳಗಿನ ಜಾವದಿಂದಲೇ ಪಾಲಿಕೆ ಸಿಬ್ಬಂದಿ ಮಳೆನೀರನ್ನು ಹೊರ ಹಾಕುವ ಕೆಲಸದಲ್ಲಿ ನಿರತವಾಗಿತ್ತು.
ಬೆಳಗ್ಗೆ 12ಕ್ಕೆ ಶೇ.26.31 ಹಾಗೂ ಮಧ್ಯಾಹ್ನ 2ಕ್ಕೆ ಜಿಲ್ಲೆಯಲ್ಲಿ ಶೇ. 45.99ರಷ್ಟು ಮತದಾನವಾಗಿತ್ತು. ಜಿಲ್ಲೆಯ ಪದವೀಧರ ಮತದಾರರು ಉತ್ಸಾಹದಿಂದ ಆಗಮಿಸಿ ಹಕ್ಕು ಚಲಾಯಿಸುತ್ತಿರುವುದು ಕಂಡು ಬಂತು. ವಿಕಲಚೇತನರೂ ಮತದಾನ ಮಾಡಲು ಮತಕೇಂದ್ರಗಳ ಬಳಿ ಆಗಮಿಸಿದ್ದು ಗಮನ ಸೆಳೆಯಿತು.ಬಳ್ಳಾರಿಯ ಪಕ್ಷೇತರ ಅಭ್ಯರ್ಥಿ (ಕಾಂಗ್ರೆಸ್ ಬಂಡಾಯ) ನಾರಾ ಪ್ರತಾಪ ರೆಡ್ಡಿ ಅವರು ಇಲ್ಲಿನ ಗಾಂಧಿನಗರದ ಬಾಲಭಾರತಿ ಮತಕೇಂದ್ರಕ್ಕೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದರು. ಬಿಜೆಪಿ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಹಾಗೂ ನಗರದ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು
ನಗರದ ಗರ್ಲ್ಸ್ ಹೈಸ್ಕೂಲ್ ಮತಗಟ್ಟೆಯಲ್ಲಿ ಜನರ ಸಾಲಲ್ಲಿ ನಿಂತು ಮತದಾನ ಮಾಡಿದರು. ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಅವರು ಸತ್ಯನಾರಾಯಣ ಪೇಟೆಯ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಕೇಂದ್ರದಲ್ಲಿ ಹಕ್ಕು ಚಲಾಯಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 24,183 ಪದವೀಧರ ಮತದಾರರಿದ್ದಾರೆ.ಈಶಾನ್ಯ ಪದವೀಧರ ಕ್ಷೇತ್ರದ ಪ್ರಬುದ್ಧ ಮತದಾರರು ಈ ಬಾರಿ ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಕಳೆದ ಬಾರಿ ಕುಲಗೆಟ್ಟ ಮತಗಳಿಂದ ನನಗೆ ಸೋಲಾಯಿತು. ಈ ಬಾರಿ ಪದವೀಧರರು ನನ್ನ ಪರ ಹಕ್ಕು ಚಲಾಯಿಸಲಿದ್ದಾರೆ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿ.
ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಅವರು ಶೈಕ್ಷಣಿಕ ಸಮಸ್ಯೆಗಳ ಪರ ಧ್ವನಿ ಎತ್ತುವ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಶಾಸಕರಾಗಿದ್ದಾಗ ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎನ್ನುತ್ತಾರೆ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ.