ಕೆ.ಎಂ.ಮಂಜುನಾಥ್
ಜೂ.3ರಂದು ಮತದಾನ ಜರುಗುವ ಈ.ಪ. ಕ್ಷೇತ್ರ ಚುನಾವಣಾ ಅಖಾಡದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಲಬುರಗಿ ಜಿಲ್ಲೆಯ ಅಮರನಾಥ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಬೀದರ್ ಜಿಲ್ಲೆಯ ಚಂದ್ರಶೇಖರ ಪಾಟೀಲ್, ಪಕ್ಷೇತರರಾಗಿ ಬಳ್ಳಾರಿಯ ನಾರಾ ಪ್ರತಾಪ ರೆಡ್ಡಿ ಸೇರಿದಂತೆ ಅಂತಿಮ ಕಣದಲ್ಲಿ 19 ಅಭ್ಯರ್ಥಿಗಳಿದ್ದಾರೆ.
ಪದವೀಧರ ಕ್ಷೇತ್ರಕ್ಕೆ ಏಳು ಜಿಲ್ಲೆಗಳಿಂದ 29 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಮೂವರ ನಾಮಪತ್ರ ತಿರಸ್ಕೃತಗೊಂಡಿವೆ. 26 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ. ಕೆಲವರು ಕಣದಿಂದ ಹಿಂದೆ ಸರಿದಿದ್ದು, 19 ಜನರು ಅಖಾಡದಲ್ಲುಳಿದಿದ್ದಾರೆ.ಬಳ್ಳಾರಿಯತ್ತ ಬಾರದ ಕೈ ಅಭ್ಯರ್ಥಿ:
ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ ಬಿಜೆಪಿ, ಪಕ್ಷೇತರ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಬಳ್ಳಾರಿ ಜಿಲ್ಲೆಯತ್ತ ಮುಖವೊಡ್ಡಿಲ್ಲ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಪದವೀಧರ ಕ್ಷೇತ್ರದಿಂದ ಈ ಹಿಂದೆ ಗೆಲುವು ಸಾಧಿಸಿ, ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನಾರಾ ಪ್ರತಾಪ ರೆಡ್ಡಿ ಕೆಲವೇ ಮತಗಳ ಅಂತರದಿಂದ ಸೋಲುಂಡಿದ್ದರು. ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದು ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು ಕ್ಷೇತ್ರದ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ, ಈ ಭಾಗದ ಜನರ ಆಶೋತ್ತರಗಳಿಗೆ ಸದನದಲ್ಲಿ ಧ್ವನಿಯಾಗುವುದಾಗಿ ಭರವಸೆ ನೀಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ವಿಪ ಸದಸ್ಯ ಎನ್.ರವಿಕುಮಾರ್, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಸೇರಿದಂತೆ ಹಲವರು ಪ್ರಚಾರ ಕೈಗೊಂಡಿದ್ದಾರೆ.
ಮತದಾರರ ಸಂಖ್ಯೆ ಹೆಚ್ಚಳ:
ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಈ ಹಿಂದೆ ಬಳ್ಳಾರಿ-ವಿಜಯನಗರ ಜಿಲ್ಲೆಗಳಿಂದ ಹೆಚ್ಚಿನ ಮತ ಪಡೆದಿದ್ದರೂ ಈ ಭಾಗದ ಪದವೀಧರರು, ಶೈಕ್ಷಣಿಕ ಸಂಸ್ಥೆಗಳ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂಬ ಆರೋಪವಿದೆ.
ಕಲಬುರಗಿ- ಪುರುಷರು-22688, ಮಹಿಳೆಯರು-15826, ಇತರೆ 5 ಒಟ್ಟು 38519 ಮತದಾರರು, ಬೀದರ್- ಪುರುಷರು-16622, ಮಹಿಳೆಯರು- 10164 ಒಟ್ಟು- 26786 ಮತದಾರರು, ಬಳ್ಳಾರಿ- ಪುರುಷರು-14981, ಮಹಿಳೆಯರು- 9198, ಇತರೆ 4, ಒಟ್ಟು- 24183, ರಾಯಚೂರು- ಪುರುಷರು- 13581, ಮಹಿಳೆಯರು- 6731, ಇತರೆ 5 ಒಟ್ಟು- 20317 ಮತದಾರರು.
ಕ್ಷೇತ್ರದ ಒಟ್ಟು ಮತದಾರರು- 156623, ಪುರುಷರು-99121, ಮಹಿಳಾ ಮತದಾರರು- 57483, ಇತರೆ ಮತದಾರರು-19.
ಈಶಾನ್ಯ ಪದವೀಧರ ಕ್ಷೇತ್ರದಿಂದ ಈ ಹಿಂದೆ ಗೆದ್ದವರು ಈ ಭಾಗಕ್ಕೆ ಏನೂ ಕೆಲಸ ಮಾಡಿಲ್ಲ. ಈ ಭಾಗದ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಲ್ಯಾಂಡ್ ಮಾರ್ಕ್ ಕೆಲಸ ಏನಾಗಿದೆ ಎಂಬುದನ್ನು ಈ ಹಿಂದೆ ಗೆದ್ದವರು ಮತದಾರರಿಗೆ ತಿಳಿಸಲಿ ಎನ್ನುತ್ತಾರೆ ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿ.