ಕಾಂಗ್ರೆಸ್ಸಿಂದ ಒಬ್ಬರೂ ಸಚಿವರಿಗೆ ಟಿಕೆಟಿಲ್ಲ!

KannadaprabhaNewsNetwork |  
Published : Mar 31, 2024, 02:06 AM ISTUpdated : Mar 31, 2024, 08:57 AM IST
yuvamorcha insulted indian flag while tiranga yatra youth congress complaint in palakkad

ಸಾರಾಂಶ

  10 ಮಂದಿ ಸಚಿವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ ಹೈಕಮಾಂಡ್ ಹೊಂದಿದ್ದ ಉದ್ದೇಶ ಈಡೇರಿಲ್ಲ. ಏಕೆಂದರೆ ಒಬ್ಬರೂ ಸಚಿವರು ಕಣದಲ್ಲಿ ಇಲ್ಲ.  , ಸಂಪುಟದ ಎಂಟು ಮಂದಿ ಸಚಿವರು ತಮ್ಮ ಪುತ್ರ-ಪುತ್ರಿಯರು ಹಾಗೂ ಕುಟುಂಬಸ್ಥರಿಗೆ ಟಿಕೆಟ್‌ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 ಬೆಂಗಳೂರು :  ಬಣ ಕಿತ್ತಾಟಕ್ಕೆ ಬೇಸತ್ತ ಪಕ್ಷದ ನಾಯಕತ್ವ ಕೋಲಾರ ಕ್ಷೇತ್ರಕ್ಕೆ ಕೆ.ವಿ.ಗೌತಮ್ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ನ ಎಲ್ಲ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದಂತಾಗಿದೆ.

ಇದರೊಂದಿಗೆ ತನ್ನ ಪ್ರಭಾವ ಬೀರಿ 10 ಮಂದಿ ಸಚಿವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ ಹೈಕಮಾಂಡ್ ಹೊಂದಿದ್ದ ಉದ್ದೇಶ ಈಡೇರಿಲ್ಲ. ಏಕೆಂದರೆ ಒಬ್ಬರೂ ಸಚಿವರು ಕಣದಲ್ಲಿ ಇಲ್ಲ. ಬದಲಾಗಿ, ಸಂಪುಟದ ಎಂಟು ಮಂದಿ ಸಚಿವರು ಹೈಕಮಾಂಡ್‌ ಮೇಲೆ ಪ್ರಭಾವ ಬೀರಿ ತಮ್ಮ ಪುತ್ರ-ಪುತ್ರಿಯರು ಹಾಗೂ ಕುಟುಂಬಸ್ಥರಿಗೆ ಟಿಕೆಟ್‌ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಒಕ್ಕಲಿಗರಿಗೆ 7 ಟಿಕೆಟ್‌:  ಒಟ್ಟು 28 ಕ್ಷೇತ್ರಗಳ ಪೈಕಿ ರೆಡ್ಡಿ ಒಕ್ಕಲಿಗ 1 ಸೇರಿ ಒಟ್ಟು ಏಳು ಮಂದಿ ಒಕ್ಕಲಿಗರು, 5 ಮಂದಿ ಲಿಂಗಾಯತರು, ದಲಿತರಿಗೆ 5 (ಬಲಗೈ3, ಎಡಗೈ2), ಪರಿಶಿಷ್ಟ ವರ್ಗ 3, ಅಲ್ಪಸಂಖ್ಯಾತರಿಗೆ ಒಂದು ಸ್ಥಾನ ನೀಡಲಾಗಿದೆ. ಉಳಿದಂತೆ ಕುರುಬರು 2, ಈಡಿಗ, ಮರಾಠ, ಬಿಲ್ಲವ, ಬಂಟ, ಬಲಿಜಿಗ ಸಮುದಾಯಗಳಿಗೆ ತಲಾ ಒಂದೊಂದು ಟಿಕೆಟ್ ನೀಡುವ ಮೂಲಕ ಹಿಂದುಳಿದ ವರ್ಗಗಳಿಗೆ ಏಳು ಟಿಕೆಟ್ ನೀಡಿದಂತಾಗಿದೆ.

ಸಚಿವರ ಸ್ಪರ್ಧೆ ಇಲ್ಲ:  28 ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಿಂದ ಸಚಿವರನ್ನು ಈ ಬಾರಿ ಸ್ಪರ್ಧೆಗೆ ಇಳಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿತ್ತಾದರೂ, ಒಬ್ಬ ಸಚಿವರ ಹೆಸರೂ ಅಂತಿಮ ಪಟ್ಟಿಯಲ್ಲಿ ಇಲ್ಲ. ಕೊನೆಯದಾಗಿ ಕೆ.ಎಚ್.ಮುನಿಯಪ್ಪ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಅವರ ಹೆಸರುಗಳನ್ನು ತೇಲಿಬಿಡಲಾಗಿತ್ತು. ಆದರೆ ಮಹದೇವಪ್ಪ ಅವರು ಪುತ್ರ ಸುನೀಲ್‌ ಬೋಸ್ ಅವರಿಗೆ ಟಿಕೆಟ್‌ ಕೊಡಿಸಿದ್ದು, ತಮ್ಮ ಬದಲಿಗೆ ಅಳಿಯನಿಗೆ ಟಿಕೆಟ್ ಕೊಡಿಸಲು ಲಾಬಿ ನಡೆಸಿದ್ದ ಕೆ.ಎಚ್. ಮುನಿಯಪ್ಪ ಸ್ಪರ್ಧೆಗಿಳಿದಿಲ್ಲ.8 ಕ್ಷೇತ್ರಗಳು ಸಚಿವರ ಕುಟುಂಬಕ್ಕೆ:

ಎಂಟು ಕ್ಷೇತ್ರಗಳು ಸಚಿವರ ಕುಟುಂಬಸ್ಥರ ಪಾಲಾಗಿವೆ. ಅದರಲ್ಲೂ ಸಚಿವರ ಪುತ್ರ ಹಾಗೂ ಪುತ್ರಿಯರು ಟಿಕೆಟ್‌ ಗುಟ್ಟಿಸುವಲ್ಲಿ ಮೇಲುಗೈ ಸಾಧಿಸಿದ್ದಾರೆ. ಬೆಂಗಳೂರು ದಕ್ಷಿಣದಿಂದ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ, ಬಾಗಲಕೋಟೆಯಿಂದ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ ಪಾಟೀಲ್‌, ಚಿಕ್ಕೋಡಿಯಿಂದ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಟಿಕೆಟ್‌ ಗಿಟ್ಟಿಸಿದ್ದರೆ, ಬೆಳಗಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಹಾಗೂ ಬೀದರ್‌ನಲ್ಲಿ ಸಚಿವ ಈಶ್ವರ್‌ ಖಂಡ್ರೆ ಪುತ್ರ ಸಾಗರ್‌ ಖಂಡ್ರೆ, ಚಾಮರಾಜನಗರದಿಂದ ಡಾ.ಎಚ್.ಸಿ. ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ ಟಿಕೆಟ್‌ ಪಡೆದಿದ್ದಾರೆ.ಇನ್ನು ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್‌ ಅವರನ್ನು ದಾವಣಗೆರೆ, ಹಾಲಿ ಸಂಸದ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಅವರ ಹೆಸರನ್ನೂ ಸೇರಿಸಿದರೆ 8 ಕ್ಷೇತ್ರಗಳಲ್ಲಿ ಸಚಿವರ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಿದಂತಾಗಿದೆ.ಮಹಿಳಾ ಟಿಕೆಟ್‌ ದಾಖಲೆ?:

ಈ ಬಾರಿ ಒಟ್ಟು ಆರು ಮಂದಿ ಮಹಿಳೆಯರಿಗೆ ಟಿಕೆಟ್‌ ನೀಡಲಾಗಿದೆ. ಸೌಮ್ಯಾರೆಡ್ಡಿ, ಅಂಜಲಿ ನಿಂಬಾಳ್ಕರ್‌, ಸಂಯುಕ್ತಾ ಪಾಟೀಲ್‌, ಪ್ರಿಯಾಂಕ ಜಾರಕಿಹೊಳಿ, ಗೀತಾ ಶಿವರಾಜ್‌ ಕುಮಾರ್‌, ಪ್ರಭಾ ಮಲ್ಲಿಕಾರ್ಜುನಗೆ ಅವಕಾಶ ನೀಡಲಾಗಿದೆ.15 ಮಂದಿಗೆ ಮೊದಲ ಚುನಾವಣೆ: ಈ ಬಾರಿ ಹೊಸಬರಿಗೆ ಹೆಚ್ಚು ಮಣೆ ಹಾಕಲಾಗಿದೆ. ಮೃಣಾಲ್‌ ಹೆಬ್ಬಾಳ್ಕರ್, ಪ್ರಿಯಾಂಕ ಜಾರಕಿಹೊಳಿ, ಸಂಯುಕ್ತಾ ಪಾಟೀಲ್‌, ಸಾಗರ್‌ ಖಂಡ್ರೆ, ರಾಧಾಕೃಷ್ಣ, ಕುಮಾರನಾಯ್ಕ್, ಪ್ರಭಾ ಮಲ್ಲಿಕಾರ್ಜುನ್‌, ಪದ್ಮರಾಜ್‌, ಲಕ್ಷ್ಮಣ್‌, ಮನ್ಸೂರ್‌ ಅಲಿಖಾನ್‌, ರಕ್ಷಾ ರಾಮಯ್ಯ, ಸುನೀಲ್‌ ಬೋಸ್‌, ಕೆ.ವಿ.ಗೌತಮ್, ಶ್ರೇಯಸ್‌ ಪಟೇಲ್‌, ವೆಂಕಟರಮಣೇಗೌಡ ಸೇರಿ ಹದಿನೈದು ಮಂದಿ ಕಾಂಗ್ರೆಸ್‌ ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ