ಸಿದ್ದಾಪುರ: ಪತ್ರಿಕೋದ್ಯಮ ಹಲವಾರು ಸಮಸ್ಯೆಗಳ ನಡುವೆಯೂ ತಲೆ ಎತ್ತಿ ನಿಂತು, ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ ಎಂದು ಹಿರಿಯ ಪತ್ರಕರ್ತ, ಸಾಮಾಜಿಕ ಹೋರಾಟಗಾರ ತಿ.ನ. ಶ್ರೀನಿವಾಸ ಸಾಗರ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಮಾತನಾಡಿ, ನಮ್ಮ ಪತ್ರಿಕಾ ಸಂಘ ರಾಜ್ಯದಲ್ಲಿರುವ ಉತ್ತಮ ಸಂಘಟನೆಗಳಲ್ಲಿ ಒಂದು. ನಮ್ಮ ಹಿಂದಿನ ತಲೆಮಾರಿನ ಪತ್ರಕರ್ತರ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಈಗಿನ ಮತ್ತು ಮುಂದಿನ ತಲೆಮಾರಿನ ಪತ್ರಕರ್ತರು ಅನುಸರಿಸಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿ, ಪತ್ರಕರ್ತರಿಗೆ ಬದ್ಧತೆ, ವೃತ್ತಿಯ ಕುರಿತಾದ ಪ್ರಾಮಾಣಿಕತೆ ಮುಖ್ಯ. ಸತ್ಯವಾದ ಮಾಹಿತಿಯನ್ನು ಸಮಾಜಕ್ಕೆ ನೀಡುವುದು ನಮ್ಮ ಕರ್ತವ್ಯ ಎಂದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಪಾಟೀಲ ಮುಂಡಗೋಡ, ಹಿರಿಯ ಪತ್ರಕರ್ತ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಗಣೇಶ ಭಟ್ಟ ಸ್ವಾಗತಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ನಾಗರಾಜ ಭಟ್ಟ ವಂದಿಸಿದರು. ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ನಿರೂಪಿಸಿದರು.